ಹೆಚ್ಚುತ್ತಿರುವ ಫ್ಲೆಕ್ಸ್ ಹಾವಳಿ:ಕಿರಿಕಿರಿ

6

ಹೆಚ್ಚುತ್ತಿರುವ ಫ್ಲೆಕ್ಸ್ ಹಾವಳಿ:ಕಿರಿಕಿರಿ

Published:
Updated:

ಹಗರಿಬೊಮ್ಮನಹಳ್ಳಿ : ಶುಭಾಶಯ ಮತ್ತು ಸ್ವಾಗತ ಕೋರುವ ಅನಗತ್ಯ ಫ್ಲೆಕ್ಸ್‌ಗಳ ಹಾವಳಿ ಪಟ್ಟಣದಲ್ಲಿ ಹೆಚ್ಚಾಗುತ್ತಿವೆ. ಬಹು ಮುಖ್ಯವಾಗಿ ಫ್ಲೆಕ್ಸ್‌ಗಳು ಇಲ್ಲಿನ ಪ್ರಮುಖ ಸ್ಥಳಗಳನ್ನು ಅತಿಕ್ರಮಿಸಿರುವ ಪರಿಣಾಮವಾಗಿ ಸಾರ್ವಜನಿಕರು ಕಿರಿ ಕಿರಿ ಅನುಭವಿಸುವಂತಾಗಿದೆ.ಜಾತ್ರಾ ಮಹೋತ್ಸವಗಳು ಸೇರಿದಂತೆ, ಸಾಮೂಹಿಕ ವಿವಾಹಗಳು. ನಾನಾ ಜಾತಿ ಧರ್ಮಗಳಿಗೆ ಸೇರಿದ ಹಬ್ಬಗಳ, ಶಾಸಕರ ಅಭಿವೃದ್ಧಿ ಯೋಜನೆಗಳ ಚಾಲನೆ ಸಂದರ್ಭದಲ್ಲಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹುಟ್ಟುಹಬ್ಬ ಹಾಗೂ ಮತ್ತಿತರೆ ಸಮಯಗಳಲ್ಲಿ ಶುಭಾಶಯ ಹೇಳುವ ಫ್ಲೆಕ್ಸ್‌ಗಳು ಎಲ್ಲೆಡೆ  ಪಟ್ಟಣದಲ್ಲಿ ರಾರಾಜಿಸುತ್ತಿವೆ. ಪಟ್ಟಣದ ಜನನಿಬಿಡ ಪ್ರದೇಶವಾದ  ಬಸವೇಶ್ವರ ಬಜಾರ್ ಉದ್ದಕ್ಕೂ ಸಹಿತ ಕೂಡ್ಲಿಗಿ ಸರ್ಕಲ್, ತಂಬ್ರಹಳ್ಳಿ ಸರ್ಕಲ್, ಸಿನಿಮಾ ಸರ್ಕಲ್, ಕೋರ್ಟ ಮತ್ತು ಸರಕಾರಿ ಕಚೇರಿಗಳ ಸಮುಚ್ಛಯದ ಬಳಿ ಇರುವ ಕೃಷ್ಣಾ ಸರ್ಕಲ್ ಹೀಗೆ ಯಾವ ಪ್ರದೇಶವನ್ನು ನೋಡಿದರೂ ಸಣ್ಣ ಗಾತ್ರದಿಂದ ಹಿಡಿದು ಬೃಹತ್ ಗಾತ್ರದ ನೂರಾರು ಫ್ಲೆಕ್ಸ್ ಗಳು ಗೋಚರಿಸುತ್ತಿವೆ.ವಿದ್ಯುತ್ ಕಂಬಗಳು, ರಸ್ತೆ ಪಕ್ಕದ ಫುಟ್‌ಪಾತ್ ಸ್ಥಳಗಳಲ್ಲಿ ಫ್ಲೆಕ್ಸ್‌ಗಳನ್ನು ನಿಲ್ಲಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ  ಫ್ಲೆಕ್ಸ್‌ಗಳನ್ನು ಹಾಕಲು ನಾನಾ ಪಕ್ಷಗಳ ವಿವಿಧ ಕಾರ್ಯಕರ್ತರಲ್ಲಿ ಪೈಪೋಟಿ ಏರ್ಪಟ್ಟಿದ್ದು, ಬಸವೇಶ್ವರ ಬಜಾರ್ ಮಾರುಕಟ್ಟೆಯ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ಗ್ರಾಹಕರಿಗೆ ಕಾಣದ ರೀತಿಯಲ್ಲಿ ಫಲಕಗಳನ್ನು ನಿಲ್ಲಿಸಲಾಗಿದೆ ಎಂದು ವರ್ತಕ ಸಮೂಹ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಫ್ಲೆಕ್ಸ್‌ಗಳ ಮೂಲಕ ಶುಭಾಶಯ ಮತ್ತು ಸ್ವಾಗತ ಹೇಳುವ “ಕುಸಂಸ್ಕೃತಿ” ಇತ್ತೀಚಿನ ದಿನಗಳಲ್ಲಿ ಶುರುವಾಗಿದ್ದು, ಈಗ ತಾರಕಕ್ಕೇರಿದೆ. ಪಾದಚಾರಿಗಳು ಮತ್ತು ವಾಹನ ಸವಾರರ ದೃಷ್ಠಿ ಅವುಗಳತ್ತ ಹರಿದು ಸಂಚಾರ ವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.ರಾಜಕಾರಣಿಗಳು ಹಾಗೂ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ವ್ಯಕ್ತಿಗಳು ಮತ್ತವರ ಬೆಂಬಲಿಗರಿಂದ ಉಂಟಾಗಿರುವ ಫ್ಲೆಕ್ಸ್‌ಗಳ ಹಾವಳಿಯನ್ನು ಏಕಾಗ್ರತೆಗೆ ಭಂಗ ತರುವ ಹೊಸ ತರಹದ ಮಾಲಿನ್ಯ ಎಂದು ಪಾದಚಾರಿಗಳು ಹಾಗೂ ವಾಹನ ಚಾಲಕರು ದೂರುತ್ತಾರೆ.ತೀವ್ರ ಬರಗಾಲದಿಂದಾಗಿ ಜನ ಸಾಮಾನ್ಯರು ಮತ್ತು ರೈತರು ಕಂಗೆಟ್ಟಿದ್ದರೆ,  ರಾಜಕೀಯ ವ್ಯಕ್ತಿಗಳ ಚಿತ್ರಗಳಿರುವ  ಫ್ಲೆಕ್ಸ್ ಗಳು ಅತಂತ್ರಗೊಂಡಿರುವ ಜನರ ಪರಿಸ್ಥಿತಿಯನ್ನು ಅಣಕಿಸುವಂತಿದೆ ಎಂದು ಪಟ್ಟಣದ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.    

ಹೆಚ್ಚಿರುವ ಫ್ಲೆಕ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಂಬಂಧ ಪಟ್ಟವರಲ್ಲಿ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry