ಮಂಗಳವಾರ, ಮೇ 17, 2022
26 °C

ಹೆಚ್ಚುತ್ತಿರುವ ಬಾಲಪ್ರೌಢಿಮೆ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಪ್ರದೇಶಗಳ ಹೆಣ್ಣುಮಕ್ಕಳು ಸಣ್ಣವಯಸ್ಸಿನಲ್ಲೇ ಋತುಮತಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಪೋಷಕರನ್ನು ಚಿಂತೆಗೀಡು ಮಾಡಿದೆ ಎಂದು ಮದರ್‌ಹುಡ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ದಿಶಾ ಶ್ರೀಧರ್ ಹೇಳಿದರು.ಹೆಣ್ಣುಮಕ್ಕಳು ಋತುಮತಿಯಾದರೆ ಸಂಭ್ರಮಿಸುವ ಕಾಲವೊಂದಿತ್ತು. ಆದರೆ ಇಂದು ಆ ಜಾಗವನ್ನು ಕಳವಳ-ಆತಂಕ ಆಕ್ರಮಿಸಿಕೊಂಡಿದೆ. ಸಾಮಾನ್ಯ ಅವಧಿಗೂ ಮುನ್ನ ಹೆಣ್ಣು ಮಕ್ಕಳು ಋತುಮತಿಯಾಗುತ್ತಿರುವುದು ಇದಕ್ಕೆ ಕಾರಣ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬಾಲ್ಯಾವಸ್ಥೆಯಿಂದ ಯೌವ್ವನಾವಸ್ಥೆ ತಲುಪುವ ಸರಾಸರಿ ವಯಸ್ಸು 11 ವರ್ಷ. ಆದರೆ ಅದು ಈಗ 8-9 ವರ್ಷಕ್ಕೆ ಇಳಿದಿದ್ದು, ಇದರಿಂದ ಮಕ್ಕಳ ಮೇಲಾಗುವ ಮನೋ-ಸಾಮಾಜಿಕ ಪರಿಣಾಮಗಳನ್ನು ಪೋಷಕರು ಕಡೆಗಣಿಸುವಂತಿಲ್ಲ. ನಗರ ಪ್ರದೇಶದ ಶೇ 20ರಷ್ಟು ಮಕ್ಕಳು ಹೆಚ್ಚು ತೂಕವನ್ನು ಹೊಂದಿದ್ದು, ಇವರಲ್ಲಿ ಶೇ 18ರಷ್ಟು ಮಕ್ಕಳು ಸಾಮಾನ್ಯ ವಯಸ್ಸಿಗಿಂತ ಬೇಗನೇ ಪ್ರೌಢರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.8ನೇ ವರ್ಷಕ್ಕೇ ಮಕ್ಕಳಲ್ಲಿ ಸ್ತನ ಬೆಳವಣಿಗೆಯಂತಹ ಲಕ್ಷಣಗಳು ಕಂಡುಬಂದಾಗ ಅವರು ಗೊಂದಲಕ್ಕೆ ಒಳಗಾಗುತ್ತಾರೆ. ತಮ್ಮ ದೇಹದಲ್ಲಿ ಆಗುತ್ತಿರುವ ಈ ಬದಲಾವಣೆಗಳ ಕುರಿತು ಹೆಚ್ಚು ಆಲೋಚಿಸುವ ಅವರು, ಓದಿನಲ್ಲಿ ಹಿಂದೆ ಬೀಳಬಹುದು. ಮಾನಸಿಕವಾಗಿ ಜರ್ಜರಿತರಾಗಬಹುದು. ಅಲ್ಲದೇ, ಅವರಿಗೆ ಅಂತಹ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದೂ ತಿಳಿದಿರುವುದಿಲ್ಲ. ಇಂತಹ ಮಕ್ಕಳಿಗೆ ಸರಿಯಾದ ತಿಳಿವಳಿಕೆ, ನೈತಿಕ ಮತ್ತು ಮಾನಸಿಕ ಬೆಂಬಲದ ಅಗತ್ಯವಿರುತ್ತದೆ ಎಂದು ಅವರು ವಿವರಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಆದರ್ಶ್ ಸೋಮಶೇಖರ್, ಬೇಗ ಋತುಮತಿಯಾಗುವ ಪ್ರಕರಣಗಳಿಗೆ ಇಂಥದ್ದೇ ನಿರ್ದಿಷ್ಟ ಕಾರಣ ಎಂದು ಹೇಳಲಾಗದು. ಆನುವಂಶಿಕ ಕಾರಣಗಳು ಪ್ರಬಲವಾಗಿ ಕಂಡುಬಂದರೂ, ಬದಲಾಗುತ್ತಿರುವ ಜೀವನ ಶೈಲಿ, ಬಾಹ್ಯ ಪರಿಸರ, ಕಲಬೆರಕೆ ಆಹಾರ ಮುಂತಾದವುಗಳೂ ಕಾರಣಗಳಾಗಿರಬಹುದು ಎಂದರು.ಹೆಣ್ಣು ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ, ವ್ಯಾಯಾಮ ಅಗತ್ಯ. ಈ ಬದಲಾವಣೆಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಮನೋಭೂಮಿಕೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಅಲ್ಲದೇ ಅವರು ಟಿವಿ ಹಾಗೂ ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.