ಗುರುವಾರ , ಜೂನ್ 24, 2021
27 °C

ಹೆಚ್ಚುತ್ತಿರುವ ಸರ್ಕಾರಿ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಚ್ಚುತ್ತಿರುವ ಸರ್ಕಾರಿ ಸಾಲ

ನವದೆಹಲಿ (ಪಿಟಿಐ):  ಸರ್ಕಾರವು ಹಣಕಾಸು ಸಂಪನ್ಮೂಲದ ಕೊರತೆ ಎದುರಿಸುತ್ತಿದ್ದು 2012-13ರಲ್ಲಿ ತಾನು ವ್ಯಯಿಸಲಿರುವ ಪ್ರತಿ 1 ರೂಪಾಯಿಯಲ್ಲಿ 29 ಪೈಸೆಗೆ ಸಾಲವನ್ನು ಅವಲಂಬಿಸಿದೆ.

2012-13ರಲ್ಲಿ ಸಾಲದ ಮೇಲಿನ ಅವಲಂಬನೆ ಹಿಂದಿನ ವರ್ಷಕ್ಕಿಂತ ಅಧಿಕವಾಗಲಿದೆ. ಕಳೆದ ವರ್ಷ ಪ್ರತಿ 1 ರೂಪಾಯಿಯಲ್ಲಿ 27 ಪೈಸೆ ಇದ್ದ ಸಾಲದ ಪ್ರಮಾಣ ಈ ಬಾರಿ 29 ಪೈಸೆಗೆ ಏರಲಿದೆ.

ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮಾಡಿದ ಸಾಲದ ಮೊತ್ತ 4.36 ಲಕ್ಷ ಕೋಟಿ ರೂಪಾಯಿ ಆಗಿದ್ದರೆ 2012-13ರಲ್ಲಿ ಅದು 4.79 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಲಿದೆ. ವೆಚ್ಚದ ಭಾಗವಾಗಿ, ಕೇಂದ್ರ ಯೋಜನೆಗಳಿಗೆ ಪ್ರತಿ 1 ರೂಪಾಯಿಯಲ್ಲಿ 22 ಪೈಸೆ ಹೋದರೆ 18 ಪೈಸೆ ಬಡ್ಡಿ ಪಾವತಿ ಬಾಬ್ತಿಗೆ ಹೋಗಲಿದೆ.

ರಕ್ಷಣಾ ಇಲಾಖೆಗಾಗಿ ಪ್ರತಿ 1 ರೂಪಾಯಿಯಲ್ಲಿ 11 ಪೈಸೆ ಮೀಸಲಿಡಲಾಗಿದೆ.

ಸರ್ಕಾರಕ್ಕೆ ಬರುವ ಪ್ರತಿ ಒಂದು ರೂಪಾಯಿ ಆದಾಯದಲ್ಲಿ ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಶೇ 24ರಿಂದ ಶೇ 21ಕ್ಕೆ ಇಳಿಸಲಾಗಿದೆ. ಉದ್ಯಮದಲ್ಲಿ ಮಂದಗತಿಯ ಬೆಳವಣಿಗೆಯೇ ಇದಕ್ಕೆ ಕಾರಣವೆನ್ನಲಾಗಿದೆ.

2011-12ರಲ್ಲಿ ಸರ್ಕಾರಕ್ಕೆ ಬರುತ್ತಿದ್ದ ಪ್ರತಿ ಒಂದು ರೂಪಾಯಿ ಆದಾಯದಲ್ಲಿ ಆರು ಪೈಸೆಯು ಸೇವಾ ತೆರಿಗೆ ರೂಪದಲ್ಲಿ ಬರುತ್ತಿತ್ತು. ಆದರೆ ಇದೀಗ ಸೇವಾ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಈ ಪ್ರಮಾಣ ಏಳು ಪೈಸೆಗೆ ಹೆಚ್ಚಾಗಲಿದೆ.

ಇದನ್ನು ಹೊರತುಪಡಿಸಿ, ಇನ್ನಿತರ ಪರೋಕ್ಷ ತೆರಿಗೆ, ಉತ್ಪಾದನಾ ತೆರಿಗೆ ಹಾಗೂ ಆಮದು ಸುಂಕಗಳ ರೂಪದಲ್ಲಿ ಸರ್ಕಾರಕ್ಕೆ 21 ಪೈಸೆ ಬರಲಿದೆ.

ತೆರಿಗೆದಾರರಿಗೆ ವೈಯಕ್ತಿಕವಾಗಿ ಕೆಲವು ವಿನಾಯಿತಿಗಳನ್ನು ನೀಡಲಾಗಿದ್ದರೂ ನೇರ ತೆರಿಗೆ ಪ್ರಮಾಣವನ್ನು 9 ಪೈಸೆಯ ಮಟ್ಟದಲ್ಲೇ ಉಳಿಸಲಾಗಿದೆ.

ಆದರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹೊರೆ ಪ್ರತಿ 1 ರೂಪಾಯಿಯಲ್ಲಿ 9 ಪೈಸೆಯಿಂದ 10 ಪೈಸೆಗೆ ಏರಲಿದೆ.

ಸರ್ಕಾರ 2012-13ರಲ್ಲಿ ವ್ಯಯಿಸುವ ಪ್ರತಿ ಒಂದು ರೂಪಾಯಿಯಲ್ಲಿ 11 ಪೈಸೆ ಇತರೆ ಯೋಜನೇತರ ವೆಚ್ಚಕ್ಕೆ ಹೋಗಲಿದೆ.

ಕೇಂದ್ರ ಸರ್ಕಾರ ಗಳಿಸಲಿರುವ ಪ್ರತಿ ಒಂದು ರೂಪಾಯಿ ಆದಾಯದಲ್ಲಿ ರಾಜ್ಯಗಳಿಂದ ಸಂದಾಯವಾಗುವ  ತೆರಿಗೆ ಮತ್ತು ಸುಂಕದ ಪಾಲು 17 ಪೈಸೆ ಆಗಿರಲಿದೆ.

2012-13ರಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡುವ ಯೋಜನಾ ನೆರವಿನ ಪ್ರಮಾಣವನ್ನು  ಈ ಹಿಂದಿನ ವರ್ಷದಂತೆ 7 ಪೈಸೆಯಲ್ಲೇ ಉಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.