ಮಂಗಳವಾರ, ಡಿಸೆಂಬರ್ 10, 2019
16 °C

ಹೆಚ್ಚುವರಿ ಎಂಜಿನಿಯರ್‌ಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಚ್ಚುವರಿ ಎಂಜಿನಿಯರ್‌ಗಳ ನೇಮಕ

ವಿಜಾಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಯ ತ್ವರಿತ ಅನುಷ್ಠಾನಕ್ಕೆ ಅಗತ್ಯವಿರುವ ಹೆಚ್ಚುವರಿ ಎಂಜಿನಿಯರ್‌ಗಳ ನೇಮಕ ಹಾಗೂ ಕಚೇರಿಯ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.17,000 ಕೋಟಿ ರೂಪಾಯಿ ಮೊತ್ತದ ಈ ಯೋಜನೆಗೆ ಸಂಪುಟ ಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದೆ. ಐದು ವರ್ಷಗಳ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಹಣ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಒದಗಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಈ ಯೋಜನೆಯಿಂದ 12 ಲಕ್ಷ ಎಕರೆ ಜಮೀನು ನೀರಾವರಿ ಸೌಲಭ್ಯ ಹೊಂದಲಿದೆ ಎಂದರು.ಬರಪೀಡಿತ ವಿಜಾಪುರ ಜಿಲ್ಲೆಯ ಬಬಲೇಶ್ವರ, ಅರಕೇರಿ, ಗುಣಕಿ, ಚಡಚಣ, ಜಿಗಜಿಣಗಿ, ಜೋಡಗುಡಿ, ಹಳಗುಣಕಿಯಲ್ಲಿ ಗೋಶಾಲೆಗಳನ್ನು ಆರಂಭಿಸಲಾಗಿದೆ. ಬೇಡಿಕೆಗನುಸಾರ ಗೋಶಾಲೆಗಳನ್ನು ತೆರೆಯಲು ಆದೇಶಿಸಲಾಗಿದೆ. 36 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಹೊಸದಾಗಿ 1500 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲಗೃಹ ನಿರ್ಮಾಣಕ್ಕೆ 2.25 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದರು.ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಅಪ್ಪು ಪಟ್ಟಣಶೆಟ್ಟಿ, ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಎಸ್ಪಿ ಡಾ. ಡಿ.ಸಿ.ರಾಜಪ್ಪ, ಹೆಚ್ಚುವರಿ ಎಸ್ಪಿ ಎಫ್.ಎ. ಟ್ರಾಸ್ಗರ್, ಉಪ ವಿಭಾಗಾಧಿಕಾರಿ ಸುರೇಶ ಜಿರ್ಲಿ ಇತರರು ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)