ಹೆಚ್ಚುವರಿ ಕಾರ್ಮಿಕರ ನಿಯೋಜನೆ ನಿರ್ಧಾರ

7
ಗವಿಮಠದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ -ಸಾಮಾನ್ಯ ಸಭೆಯಲ್ಲಿ ನಿರ್ಧಾರ

ಹೆಚ್ಚುವರಿ ಕಾರ್ಮಿಕರ ನಿಯೋಜನೆ ನಿರ್ಧಾರ

Published:
Updated:

ಕೊಪ್ಪಳ: ಜಿಲ್ಲೆಯ ಆರಾಧ್ಯ ದೈವ, ಸಂಸ್ಥಾನ ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಸ್ವಚ್ಛತಾ ಕಾರ್ಯ, ರಸ್ತೆ ದುರಸ್ತಿ ಮತ್ತಿತರ ಕಾಮಗಾರಿಗಳಿಗಾಗಿ ಅಗತ್ಯವಿರುವ ಸಂಖ್ಯೆಯಷ್ಟು ಕಾರ್ಮಿಕರ ಸೇವೆಯನ್ನು ಪಡೆಯಲು ಬುಧವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತಲ್ಲದೇ, ಜಾತ್ರಾ ಸಂದರ್ಭದಲ್ಲಿ ನಗರಕ್ಕೆ ಬರುವ ಜನರಿಗೆ ಎಲ್ಲ ಸೌಲಭ್ಯ ಒದಗಿಸಲು ತೀರ್ಮಾನಿಸಲಾಯಿತು.ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭಗೊಳ್ಳಲು ಸಾಕಷ್ಟು ಸಮಯ ಇದೆ. ಹೀಗಾಗಿ ಹೆಚ್ಚು ಜನ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಬೇಡ. ಅಗತ್ಯವಿರುವ ಸಂಖ್ಯೆಯಷ್ಟು ಮಾತ್ರ ತೆಗೆದುಕೊಂಡು ಕಾಮಗಾರಿಗಳನ್ನು ನಿರ್ವಹಿಸುವಂತೆ ಅಧ್ಯಕ್ಷ ಸುರೇಶ ದೇಸಾಯಿ ಅಧಿಕಾರಿಗಳಿಗೆ ಸೂಚಿಸಿದರು.ನಗರಸಭೆಯ ಎರಡು ಪೋಕ್‌ಲೇನ್ ಯಂತ್ರಗಳಿವೆ. 5 ಟ್ರ್ಯಾಕ್ಟರ್‌ಗಳಿವೆ. ಇವುಗಳನ್ನೇ ಬಳಸಿ ಕಾಮಗಾರಿಯನ್ನು ನಿರ್ವಹಿಸಿ. ಯಾವುದೇ ಕಾರಣಕ್ಕೂ ಗುತ್ತಿಗೆ ನೀಡುವುದು ಬೇಡ ಎಂದೂ ತಾಕೀತು ಮಾಡಿದರು.ನಗರದ ಮೂಲಕ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ವಿಸ್ತರಣಾ ಕಾರ್ಯ ನಿಧಾನ ಗತಿಯಲ್ಲಿ ಸಾಗಿದೆ. ಹೆದ್ದಾರಿಯ ಎರಡೂ ಬದಿಗಳಲ್ಲಿ ತೋಡಲಾಗಿದೆ. ಹೀಗಾಗಿ ಜಾತ್ರೆ ಸಂದರ್ಭದಲ್ಲಿ ನಗರಕ್ಕೆ ಲಕ್ಷಾಂತರ ಜನರು ಬರಲಿದ್ದು ಯಾವುದೇ ಅವಘಡ ಸಂಭವಿಸಬಹುದು ಎಂದು ಸದಸ್ಯ ಬಿಜೆಪಿ ವಿಷ್ಣುತೀರ್ಥ ಗುಬ್ಬಿ ಆತಂಕ ವ್ಯಕ್ತಪಡಿಸಿದರು.ಹೆದ್ದಾರಿ ಪಕ್ಕಗಳಲ್ಲಿ ತೋಡಿರುವುದನ್ನು ಮಣ್ಣು ಹಾಕಿ ಮುಚ್ಚುವ ಮೂಲಕ ಸಂಚಾರ ಯೋಗ್ಯ ಮಾಡುವಂತೆ ಆಗ್ರಹಿಸಿದರು. ಈ ಮಾತಿಗೆ ದನಿಗೂಡಿಸಿದ ಕಾಂಗ್ರೆಸ್ ಸದಸ್ಯ ಕಾಟನ್‌ಪಾಷಾ, ಜಾತ್ರಾ ಮಹೋತ್ಸವಕ್ಕೆ ಇನ್ನೂ ತಿಂಗಳು ಇದ್ದು, ಅಷ್ಟರೊಳಗಾಗಿ ರಸ್ತೆಯನ್ನು ಸುಧಾರಿಸುವಂತೆ ಒತ್ತಾಯಿಸಿದರು.ಕಾಂಗ್ರೆಸ್ ಸದಸ್ಯ ಮಾನ್ವಿ ಪಾಷಾ ಮಾತನಾಡಿ, ನಗರದ ವಿವಿಧ ಕಡೆಗಳಲ್ಲಿ ನೀರಿನ ಪೈಪ್‌ಗಳು ಒಡೆದು ಸಾಕಷ್ಟು ನೀರು ಪೋಲಾಗುತ್ತಿರುವುದನ್ನು ಕೂಡಲೇ ತಡೆಯಬೇಕು ಎಂದು ಒತ್ತಾಯಿಸಿದರು.ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಕುರಿತು ಸದಸ್ಯೆ ಇಂದಿರಾ ಭಾವಿಕಟ್ಟಿ ಸಭೆಯ ಗಮನ ಸೆಳೆದರು. 20 ಶೌಚಾಲಯಗಳು ನಿರ್ಮಾಣಗೊಂಡಿವೆ. ಅವುಗಳ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆ ದೊರೆತ ತಕ್ಷಣ ಸದರಿ ಶೌಚಾಲಯಗಳು ಬಳಕೆಗೆ ಮುಕ್ತವಾಗಲಿವೆ ಎಂದು ಎಇಇ ಆರ್.ಆರ್.ಪಾಟೀಲ ಸಭೆಗೆ ತಿಳಿಸಿದರು.ಬೇಸಿಗೆ ಸಂದರ್ಭದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಹ ಸದಸ್ಯರು ಪ್ರಸ್ತಾಪಿಸಿದರು. ಕುಡಿಯುವ ನೀರಿನ ಸಂಭಾವ್ಯ ಸಮಸ್ಯೆಯನ್ನು ತಪ್ಪಿಸಲು ಕೊಳವೆಬಾವಿಗಳನ್ನು ಕೊರೆಸಬೇಕು, ಅಗತ್ಯ ಬಿದ್ದರೆ ಹೆಚ್ಚುವರಿ ಟ್ಯಾಂಕರ್‌ಗಳನ್ನು ನಿಯೋಜಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಒಳಚರಂಡಿ ಕಾಮಗಾರಿಗೆ ಪರಿಷ್ಕೃತ ಅಂದಾಜಿನಂತೆ ನಗರಸಭೆಯು 8.90 ಕೋಟಿ ರೂಪಾಯಿ ಭರಿಸಬೇಕು ಎಂಬುದಕ್ಕೆ ಜೆಡಿಎಸ್ ಸದಸ್ಯ ಗವಿಸಿದ್ಧಪ್ಪ ಮುಂಡರಗಿ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿದ್ದ ಕರ್ನಾಟಕ ರಾಜ್ಯ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಈ ವರೆಗಿನ ವೆಚ್ಚದ ವಿವರಗಳನ್ನು ನೀಡುವಂತೆ ಪಟ್ಟು ಹಿಡಿದರು.ನಂತರ ಈ ಕುರಿತು ಮಾತನಾಡಿದ ಅಧ್ಯಕ್ಷ ದೇಸಾಯಿ, ಈ ಹಣವನ್ನು ನಗರಸಭೆ ಭರಿಸಲು ಆಗುವುದಿಲ್ಲ ಎಂದರು. ಅಲ್ಲದೇ, ಈ ಹಣಕ್ಕಾಗಿ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿಕೊಂಡು ಬರುವಂತೆ ಶಾಸಕ ಸಂಗಣ್ಣ ಕರಡಿ ತಿಳಿಸಿದ್ದು, ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದೂ ಸಭೆಗೆ ತಿಳಿಸಿದರು.ರಾ.ಹೆ. 63ರ ಬದಿ ಡಾ.ಬಾಬು ಜಗಜೀವನ್‌ರಾಂ ವೃತ್ತಕ್ಕೆ ಹೊಂದಿಕೊಂಡಿರುವ 0.31 ಗುಂಟೆ ಜಾಗೆಯಲ್ಲಿ ಉದ್ಯಾನವನ ನಿರ್ಮಿಸುವ ಯೋಜನೆಯನ್ನು ಕೈಬಿಡುವುದಾಗಿ ಅಧ್ಯಕ್ಷ ದೇಸಾಯಿ ಪ್ರಕಟಿಸಿದರು. ಪೌರಾಯುಕ್ತೆ ಬಿ.ಎಂ.ಅಶ್ವಿನಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry