ಹೆಚ್ಚುವರಿ ಗೋಶಾಲೆ ಆರಂಭಕ್ಕೆ ಸೂಚನೆ

7

ಹೆಚ್ಚುವರಿ ಗೋಶಾಲೆ ಆರಂಭಕ್ಕೆ ಸೂಚನೆ

Published:
Updated:
ಹೆಚ್ಚುವರಿ ಗೋಶಾಲೆ ಆರಂಭಕ್ಕೆ ಸೂಚನೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಗೋಶಾಲೆ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಅಸ್ನೋಟಿಕರ್ ಸೂಚಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ 2011-12ನೇ ಸಾಲಿನ 1ನೇ ಮತ್ತು 2ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೆಚ್ಚುವರಿ ಗೋಶಾಲೆ ಆರಂಭಿಸಲು ಚಳ್ಳಕೆರೆ, ಮೊಳಕಾಲ್ಮುರು, ಐಮಂಗಲದಿಂದ ಬೇಡಿಕೆಗೆ ಬಂದಿದೆ. ಜಿಲ್ಲಾಧಿಕಾರಿ ಅವರು ಬೇಡಿಕೆ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ನಂತರ ಗೋಶಾಲೆ ಆರಂಭಿಸಬೇಕು ಹಾಗೂ ಅವ್ಯವಹಾರ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಸೂಚಿಸಿದರು. ಬರ ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ಗೋಶಾಲೆ ನಿರ್ವಹಣೆ ಮತ್ತು ದನಕರುಗಳಿಗೆ ಮೇವಿನ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳಬೇಕು. ನೀರಿನ ವ್ಯವಸ್ಥೆ ಇರುವ ಸರ್ಕಾರಿ ಭೂಮಿ, ಫಾರಂಗಳಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.ಈಗಾಗಲೇ ಜಿಲ್ಲೆಯಲ್ಲಿ ರೂ.35ಲಕ್ಷ ವೆಚ್ಚದಲ್ಲಿ ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಗೋಶಾಲೆ, ಚಿತ್ರದುರ್ಗ ತಾಲ್ಲೂಕಿನಲ್ಲಿ 2, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನಲ್ಲಿ ತಲಾ 1, ಚಳ್ಳಕೆರೆ ತಾಲ್ಲೂಕಿನ 4, ಹಿರಿಯೂರು ತಾಲ್ಲೂಕಿನಲ್ಲಿ 4 ಗೋಶಾಲೆ ಆರಂಭಿಸಲಾಗಿದೆ. ರೂ.50ಲಕ್ಷದಲ್ಲಿ ಆಂಧ್ರಪ್ರದೇಶದಿಂದ ಜಾನುವಾರುಗಳಿಗೆ ಮೇವು ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾಹಿತಿ ನೀಡಿದರು.ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಸರ್ಕಾರಕ್ಕೆ ಸೇರಿದ ಜಾಗಗಳಲ್ಲಿ, ನೀರಿನ ಅನುಕೂಲವಿರುವ ಸ್ಥಳಗಳಲ್ಲಿ ಮೇವು ಬಿತ್ತನೆ ಆರಂಭಿಸಿದ್ದರೆ ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿತ್ತು. ಈ ರೀತಿ ಮೇವು ಬೆಳೆಸಲು ಸರ್ಕಾರದ ನಿರ್ದೇಶನವಿದ್ದರೂ ಅಧಿಕಾರಿಗಳು ಮಾತ್ರ ಉದಾಸೀನ ಮಾಡುತ್ತಿದ್ದಾರೆ ಎಂದರು.ಮುಂದಿನ ಜನವರಿ, ಫೆಬ್ರುವರಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಹೆಚ್ಚಿನ ಅಭಾವ ಎದುರಾಗಲಿದೆ. ಸ್ಥಳೀಯವಾಗಿ ಮೇವು ಬೆಳೆಸುವುದರಿಂದ ಬೇರೆಡೆಗಳಿಂದ ಮೇವು ಖರೀದಿ ತಪ್ಪಲಿದ್ದು, ಸರ್ಕಾರಕ್ಕೆ ಹಣ ಉಳಿಯಲಿದೆ. ಈಗಾಗಲೇ ತೆರೆದಿರುವ ಗೋಶಾಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಶಾಸಕರು ಹರಿಹಾಯ್ದರು.ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ ಕೆಲವು ಭಾಗದಲ್ಲಿ ಮಳೆ ಬಂದು ಬೆಳೆ ಚೆನ್ನಾಗಿ ಬಂದಿದ್ದರೂ ಕೂಡ ಕಾಳು ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆ ಪೂರ್ಣವಾಗಿ ನಾಶವಾಗಿದೆ. ಈ ಬಗ್ಗೆ ಬೆಳೆ ಪರಿಹಾರವನ್ನು ನೀಡಲು ಕಂದಾಯ, ಕೃಷಿ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಿ ನಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ. ಚಂದ್ರಪ್ಪ  ತಿಳಿಸಿದರು.ನಾಲ್ಕು ಗೋಶಾಲೆಗೆ ಬೇಡಿಕೆ

ಜಿಲ್ಲೆಯಲ್ಲಿ ಈಗಾಗಲೇ 14 ಗೋಶಾಲೆಗಳನ್ನು ಪ್ರಾರಂಭ ಮಾಡಿದ್ದು ಇನ್ನೂ 4 ಗೋಶಾಲೆ ಪ್ರಾರಂಭಿಸಲು ಬೇಡಿಕೆ ಬಂದಿದೆ. 300 ಟನ್ ಮೇವು ಖರೀದಿ ಮಾಡಿ ಗೋಶಾಲೆಗಳಿಗೆ ಪೂರೈಸಲಾಗಿದೆ ಎಂದು ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಭೆಗೆ ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ 41 ಗ್ರಾಮಗಳಲ್ಲಿ ನೀರು ಪೂರೈಸುವ ಕಾರ್ಯ ಕೈಗೊಳ್ಳಲಾಗಿದೆ. 139 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು ರೂ.74 ಲಕ್ಷ  ವೆಚ್ಚ ಮಾಡಲಾಗಿದೆ ಎಂದು ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಅಧಿಕಾರಿ ಹನುಮಂತಪ್ಪ ತಿಳಿಸಿದರು.ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗಾಗಿ ರೂ.67 ಕೋಟಿ  ವಾರ್ಷಿಕ ಕ್ರಿಯಾಯೋಜನೆ ಅನುಮೋದನೆಯಾಗಿದ್ದು, ಇದರಲ್ಲಿ ಪೂರ್ಣ ಹಾಗೂ ಮುಂದುವರಿದ 674 ಕಾಮಗಾರಿಗಳು ಸೇರಿದಂತೆ ಹೊಸದಾಗಿ 300 ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.ಕ್ರಿಯಾಯೋಜನೆ ಹೊರತುಪಡಿಸಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ರೂ.10 ಕೋಟಿ ವಿಶೇಷ ಅನುದಾನ ನೀಡಲು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಇದರಲ್ಲಿ 2.20 ಲಕ್ಷ ಹೆಕ್ಟೇರಿನಲ್ಲಿದ್ದ ಬೆಳೆಯು ಸಂಪೂರ್ಣವಾಗಿ ಒಣಗಿ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮದಾಸ್ ಸಭೆಯಲ್ಲಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry