ಬುಧವಾರ, ನವೆಂಬರ್ 20, 2019
25 °C
ತಿಂಗಳಿಗೆ 39,000 ಟನ್ ಅಕ್ಕಿ, 11,000 ಟನ್ ಗೋಧಿ ಖೋತಾ

ಹೆಚ್ಚುವರಿ ಪಡಿತರಕ್ಕೆ ಕೇಂದ್ರದ ಕತ್ತರಿ

Published:
Updated:

ಬೆಂಗಳೂರು: `ಪಡಿತರ ವ್ಯವಸ್ಥೆಯಡಿ ಏಪ್ರಿಲ್ ತಿಂಗಳಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಹಂಚಿಕೆ ಮಾಡಬೇಕಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಕೇಂದ್ರ ಸರ್ಕಾರ ರಾಜಕೀಯ ಕಾರಣಗಳಿಗಾಗಿ ತಡೆ ಹಿಡಿದಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಗುರುವಾರ ಇಲ್ಲಿ ನೇರ ಆರೋಪ ಮಾಡಿದರು.



`ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ಹೆಚ್ಚುವರಿಯಾಗಿ 38,832 ಟನ್ ಅಕ್ಕಿ ಮತ್ತು 11,029 ಟನ್ ಗೋಧ್ಕಿ ನೀಡುತ್ತಿತ್ತು. ಆದರೆ, ಏಪ್ರಿಲ್  ಕೋಟಾದಲ್ಲಿ ಈ ಹೆಚ್ಚುವರಿ ಹಂಚಿಕೆಯನ್ನು ದಿಢೀರ್ ರದ್ದು ಮಾಡಿದ್ದು, ಇದರಿಂದ ಭಾರಿ ತೊಂದರೆ ಆಗಿದೆ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.



`ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದ ಯುಪಿಎ ಸರ್ಕಾರ ರಾಜಕಾರಣ ಮಾಡುತ್ತಿದೆ. ಈ ಕ್ರಮದಿಂದಾಗಿ ಅಕ್ಕಿ ಮತ್ತು ಗೋಧಿಯನ್ನು ಅನಿವಾರ್ಯವಾಗಿ ಕಡಿತ ಮಾಡಬೇಕಾಗಿದೆ' ಎಂದು ಅವರು ಹೇಳಿದರು.



`ಹೆಚ್ಚುವರಿ ಪಡಿತರ ಬಿಡುಗಡೆ ಮಾಡದಿದ್ದಲ್ಲಿ, 16 ಕೆ.ಜಿ ಅಕ್ಕಿ ಪಡೆಯುತ್ತಿದ್ದವರಿಗೆ 15 ಕೆ.ಜಿ ಹಾಗೂ 20 ಕೆ.ಜಿ ಅಕ್ಕಿ ಪಡೆಯುತ್ತಿದ್ದವರಿಗೆ 15 ಕೆ.ಜಿ ಹಂಚಿಕೆ ಮಾಡಬೇಕಾಗುತ್ತದೆ. ಎರಡು ಕೆ.ಜಿ. ಗೋಧಿ ಪಡೆಯುತ್ತಿದ್ದವರಿಗೆ ಒಂದು ಕೆ.ಜಿ ಮತ್ತು ಮೂರು ಕೆ.ಜಿ ಪಡೆಯುತ್ತಿದ್ದವರಿಗೆ ಎರಡು ಕೆ.ಜಿ ವಿತರಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ' ಎಂದು ದೂರಿದರು.



ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್.ಜೀವರಾಜ್ ಮತ್ತು ಸರ್ಕಾರ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ತಕ್ಷಣವೇ ಹೆಚ್ಚುವರಿ ಕೋಟಾದ ಅಕ್ಕಿ ಮತ್ತು ಗೋಧಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.



ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಕಾರ್ಯದರ್ಶಿ ಸುದೀರ್ ಕುಮಾರ್, `ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆದ ನಂತರ ಹೆಚ್ಚುವರಿ ಪಡಿತರ ಬಿಡುಗಡೆ ಮಾಡಲಾಗುವುದು. ಈ ಪ್ರಕ್ರಿಯೆಗೆ ಕೆಲವು ವಾರಗಳೇ ಬೇಕಾಗುತ್ತದೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.



`ಹೆಚ್ಚುವರಿ ಪಡಿತರ ಬಿಡುಗಡೆಗೆ ಸಮಯ ಬೇಕು ಎಂದು ಕೇಳುವುದರ ಅರ್ಥವೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾಮೂಲಿಯಾಗಿ ಬರುತ್ತಿದ್ದ ಪಡಿತರವನ್ನು ತಡೆ ಹಿಡಿದು, ಈಗ ಅದರ ಬಿಡುಗಡೆಗೆ ಸಮಯ ಬೇಕು ಎಂದು ಹೇಳುತ್ತಿರುವುದರ ಹಿಂದೆ ರಾಜಕೀಯ ಇದೆ' ಎಂದು ಅವರು ಟೀಕಿಸಿದರು.



ಆಯೋಗಕ್ಕೆ ದೂರು: ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಈ ಹಿಂದೆ ಬಿಡುಗಡೆ ಮಾಡುತ್ತಿದ್ದ ಹಾಗೆ ಏಪ್ರಿಲ್‌ಗೂ ಹೆಚ್ಚುವರಿ ಪಡಿತರ ಚೀಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಲಾಗುವುದು ಎಂದರು.

ಪ್ರತಿಕ್ರಿಯಿಸಿ (+)