ಹೆಚ್ಚುವರಿ ಶುಲ್ಕ ಹಿಂದಿರುಗಿಸಲು ಸೂಚನೆ

7

ಹೆಚ್ಚುವರಿ ಶುಲ್ಕ ಹಿಂದಿರುಗಿಸಲು ಸೂಚನೆ

Published:
Updated:

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2013–14ನೇ ಸಾಲಿನ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಿದ್ದ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳಿಗೆ ತಕ್ಷಣವೇ ಹಿಂತಿರುಗಿಸಬೇಕು ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಕಾಲೇಜುಗಳ ಪ್ರಾಚಾರ್ಯರಿಗೆ ಸೂಚಿಸಿದ್ದಾರೆ.ವಿಶ್ವವಿದ್ಯಾಲಯದ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷೆ ಶುಲ್ಕಗಳನ್ನು ಸರ್ಕಾರಿ ಹಾಗೂ ವಿಶ್ವವಿದ್ಯಾಲಯದ ಆದೇಶದ ವಿರುದ್ಧವಾಗಿ ಕೆಲ ಕಾಲೇಜಿನ ಪ್ರಾಚಾರ್ಯರು ಅಧಿಕ ಸಂಗ್ರಹಿಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಕೂಡಲೇ ಹೆಚ್ಚುವರಿ ಸಂಗ್ರಹಿಸಿದ ಶುಲ್ಕವನ್ನು ಹಿಂತಿರುಗಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ವಿಶ್ವವಿದ್ಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಕುಲಸಚಿವರು ಎಚ್ಚರಿಸಿದ್ದಾರೆ.ಸ್ವಾಗತ: ರಾಣಿ ಚನ್ನಮ್ಮ ವಿಶ್ವವಿದ್ಯಾಲ­ಯವು ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಇಳಿಸಿರುವುದಕ್ಕೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಜೇಶನ್‌ (ಎಐಡಿವೈಒ) ಮತ್ತು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್‌ ಆರ್ಗನೈಜೇಶನ್‌ (ಎಐಡಿಎಸ್‌ಒ) ಸ್ವಾಗತಿಸಿದೆ.ಪರೀಕ್ಷಾ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಈ ಎರಡು ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಐಡಿವೈಒ ರಾಜ್ಯ ಸಮಿತಿ ಪರಿಷತ್‌ ಸದಸ್ಯ ಗಂಗಾಧರ ಬಡಿಗೇರ ನೇತೃತ್ವದ ನಿಯೋಗವು ಕುಲಪತಿ ಪ್ರೊ. ಬಿ.ಆರ್‌. ಅನಂತನ್‌ ಅವರನ್ನು ಬುಧವಾರ ಭೇಟಿ ಮಾಡಿ ಶುಲ್ಕ ಇಳಿಸುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಕುಲಪತಿಗಳು ಪರೀಕ್ಷಾ ಶುಲ್ಕವನ್ನು 820 ರೂಪಾಯಿಯಿಂದ 160 ರೂಪಾಯಿಗೆ (ಸಾಮಾನ್ಯ ವರ್ಗ ಹೊರತುಪಡಿಸಿ) ಇಳಿಸಲು ಒಪ್ಪಿಕೊಂಡಿದ್ದಾರೆ ಎಂದು ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಕುಲಪತಿಗಳನ್ನು ಎರಡು ಸಂಘಟನೆಗಳ ಮುಖಂಡರು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry