ಹೆಚ್ಚುವರಿ ಸಾಲ: ನಿರೀಕ್ಷೆ ಅಪಾರ

7

ಹೆಚ್ಚುವರಿ ಸಾಲ: ನಿರೀಕ್ಷೆ ಅಪಾರ

Published:
Updated:

ನವದೆಹಲಿ (ಪಿಟಿಐ): ಉದ್ಯಮ ವಲಯ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಭಾರ­ತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಹಣಕಾಸು ನೀತಿ ಪರಾಮರ್ಶೆ ಸೆ. 20ರಂದು ಪ್ರಕಟ­ಗೊಳ್ಳಲಿದೆ. ‘ಆರ್‌ಬಿಐ’ನ ಹೊಸ  ಗವರ್ನರ್‌ ರಘುರಾಂ ಜಿ.ರಾಜನ್‌ ಅವರ ಮೊದಲ ಹಣ­ಕಾಸು ನೀತಿ ಕೂಡ ಇದಾಗಿ­ರುವುದರಿಂದ ಹೂಡಿಕೆದಾರರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಹಣದುಬ್ಬರ ತಗ್ಗಿಸಲು ಬಿಗಿ ಹಣ ಕಾಸು ನೀತಿಯನ್ನೇ ಮುಂದು­ವರಿಸಿ ಕೊಂಡು ಹೋಗುವ ‘ಆರ್‌ಬಿಐ’ನ ಸಂಪ್ರದಾಯ ಮುರಿಯುವ ಸುಳಿವನ್ನು ಈಗಾಗಲೇ ರಾಜನ್‌ ನೀಡಿದ್ದಾರೆ. ಇನ್ನೊಂದೆಡೆ, ಬ್ಯಾಂಕುಗಳು  ಹಬ್ಬಗಳ ಸರಣಿ ಆರಂಭವಾ­ಗಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಬಡ್ಡಿ ದರ(ರೆಪೊ) ತಗ್ಗಿಸದಿ ದ್ದರೂ, ನಗದು ಮೀಸಲು ಅನುಪಾತ (ಸಿಆರ್‌ಆರ್) ತಗ್ಗಿಸಬೇಕು ಎಂದು ‘ಆರ್‌ಬಿಐ’ಗೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ನಿರೀಕ್ಷೆ ಗರಿಷ್ಠ ಮಟ್ಟದಲ್ಲಿದೆ.‘ಸಿಆರ್ಆರ್’ ತಗ್ಗಿದರೆ ಮಾರು­ಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಇದರಿಂದ ಹಬ್ಬಗಳ ಸಂದರ್ಭ ದಲ್ಲಿ ವಾಹನ, ಗೃಹ, ವಾಣಿಜ್ಯ, ಕಾರ್ಪೊ­ರೇಟ್‌ ಸಾಲಗಳ ಹೆಚ್ಚುವರಿ ಬೇಡಿಕೆ ಗಳನ್ನು ಪೂರೈಸಬಹುದು. ಹಣಕಾಸು ಸಚಿವಾಲಯ ಕೂಡ ಈ ವಿಚಾರವನ್ನು ‘ಆರ್‌ಬಿಐ’ ಗಮನಕ್ಕೆ ತಂದಿದೆ. ಪ್ರಧಾನಿ ಮನಮೋಹನ್‌ ಸಿಂಗ್‌, ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಗವರ್ನರ್‌ ರಘುರಾಂ ರಾಜನ್‌ ಮಂಗಳವಾರ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ.ಸಾಲ ಯೋಜನೆ:  ಬ್ಯಾಂಕುಗಳಿಗೆ ಹೆಚ್ಚುವರಿಯಾಗಿ ಬೇಕಿರುವ ಸಾಲದ ಬೇಡಿಕೆ ಪೂರೈಸಲು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ 2012ರಲ್ಲಿ   ‘ವಿಶೇಷ ಸಾಲ ಯೋಜನೆ’ ಪ್ರಕಟಿಸಿದೆ.  ಇದರಡಿ ಅಗ್ಗದ ಬಡ್ಡಿ ದರದಲ್ಲಿ ಬ್ಯಾಂಕು ಗಳು ಗ್ರಾಹಕರಿಗೆ ಸಾಲ ನೀಡಬಹುದಾಗಿದೆ. ಈ ಮಾದರಿಯಲ್ಲೇ ವಿಶೇಷ ಯೋಜನೆಯೊಂದನ್ನು ಜಾರಿಗೊ­ಳಿಸುವ ಕುರಿತು ‘ಆರ್‌ಬಿಐ’ ಚಿಂತಿ­ಸುತ್ತಿದೆ.ಇದರಿಂದ ಮಾರುಕಟ್ಟೆಗೆ ನಗದು ಹರಿವು ಪ್ರಮಾಣ ಹೆಚ್ಚುತ್ತದೆ. ಈ ಯೋಜನೆಯಡಿ ಗೃಹ, ವಾಹನ ಖರೀದಿಗೆ ಹಾಗೂ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಕ್ಷೇತ್ರಕ್ಕೆ, ವಾಹನ ತಯಾರಿಕಾ ಕಂಪೆನಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬಹುದಾಗಿದೆ. ಇದರಿಂದ ಹೂಡಿಕೆ ಚಟುವಟಿಕೆಗಳಿಗೂ ಉತ್ತೇಜನ ಲಭಿಸಿ ಆರ್ಥಿಕತೆ ಕೂಡ ಚೇತರಿಕೆ ಕಾಣಲಿದೆ. ಹೊಸ ಗವರ್ನರ್‌ ಈ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸದ್ಯ  ರೆಪೊ ದರ ಶೇ 7.25 ಮತ್ತು ರಿವರ್ಸ್ ರೆಪೊ ದರ ಶೆ 6.25ರಷ್ಟಿದೆ. ನಗದು ಮೀಸಲು ಅನುಪಾತ ಶೇ 4ರಷ್ಟಿದೆ. ಹಿಂದಿನ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ‘ಆರ್‌ಬಿಐ’ ಈ ಮೂರು ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.ಸಾಧ್ಯತೆ ಕ್ಷೀಣ

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಆಗಸ್ಟ್‌ನಲ್ಲಿ ಮತ್ತೆ 6 ತಿಂಗಳ ಗರಿಷ್ಠ  ಮಟ್ಟವಾದ ಶೇ 6.1ಕ್ಕೆ ಏರಿಕೆ ಕಂಡಿರುವುದು ‘ಆರ್‌ಬಿಐ’ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಿಸುವಂತೆ ಮಾಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.‘ಫಿಕ್ಕಿ’ ಸಲಹೆ

ಆರ್ಥಿಕ ಪ್ರಗತಿ ಮತ್ತು ಹೂಡಿಕೆ ಉತ್ತೇಜಿಸುವಂತಹ ಕ್ರಮಗಳನ್ನು ‘ಆರ್‌ಬಿಐ’ನಿಂದ ನಿರೀಕ್ಷಿಸುತ್ತಿದ್ದೇವೆ ಎಂದು ಉದ್ಯಮ ವಲಯ ಪ್ರತಿಕ್ರಿಯಿ ಸಿದೆ. ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದು­ಕೊಂ­ಡರೂ, ಹಣಕಾಸು ಮಾರುಕಟ್ಟೆ­ಯಲ್ಲಿ ಸ್ಥಿರತೆ ತಂದು ಹೂಡಿಕೆದಾರರ ವಿಶ್ವಾಸ ಮರಳುವಂತೆ ಮಾಡಲು  ಹೊಸ ಗವರ್ನರ್‌ ಕೆಲವು ಕ್ರಮಗಳನ್ನು ಪ್ರಕಟಿ­ಸಬಹುದು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟದ(ಫಿಕ್ಕಿ) ಉಪಾಧ್ಯಕ್ಷ ಸಿದ್ಧಾರ್ಥ್ ಬಿರ್ಲಾ ಅಭಿಪ್ರಾಯ­ಪಟ್ಟಿದ್ದಾರೆ.‘ಮಾರುಕಟ್ಟೆಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲದ ಲಭ್ಯತೆ ಹೆಚ್ಚುವಂತೆ ಮಾಡಲು ‘ಆರ್‌ಬಿಐ’ ಖಂಡಿತ ಕೆಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ವಿಶ್ವಾಸ ಇದೆ’ ಎಂದು ‘ಅಸೋಚಾಂ’ ಅಧ್ಯಕ್ಷ ರಾಣಾ ಕಪೂರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry