ಭಾನುವಾರ, ಡಿಸೆಂಬರ್ 8, 2019
25 °C
ತಗ್ಗಲೂರು ಹತ್ತಿ ಬೆಳೆ ಕ್ಷೇತ್ರೋತ್ಸವ: ತಜ್ಞರ ಅಭಿಮತ

ಹೆಚ್ಚು ಇಳುವರಿಗೆ ವೈಜ್ಞಾನಿಕ ಪದ್ಧತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಚ್ಚು ಇಳುವರಿಗೆ ವೈಜ್ಞಾನಿಕ ಪದ್ಧತಿ

ಚಾಮರಾಜನಗರ: ‘ವೈಜ್ಞಾನಿಕ ಪದ್ಧತಿ ಅನುಸರಿಸಿ ಹತ್ತಿ ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸಿ. ದೊರೆಸ್ವಾಮಿ ಹೇಳಿದರು.



ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ಶುಕ್ರವಾರ ಗುಂಡ್ಲುಪೇಟೆ ತಾಲ್ಲೂಕಿನ ತಗ್ಗಲೂರು ಗ್ರಾಮದ ರೈತ ಮಹೇಶ್‌ಕುಮಾರ್ ಅವರ ಜಮೀನು ಸೇರಿದಂತೆ ಒಟ್ಟು 13 ಎಕರೆ ಪ್ರದೇಶದಲ್ಲಿ ನಡೆದ ‘ಹತ್ತಿಯಲ್ಲಿ ಸಮಗ್ರ ಕೀಟ ನಿರ್ವಹಣೆ’ ಪ್ರಾತ್ಯಕ್ಷಿಕೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.



ಬಿಟಿ ಹತ್ತಿಯ ಸಾಧಕ– ಬಾಧಕ ಹಾಗೂ ರೈತರಿಗೆ ಕೂಳೆ ಹತ್ತಿ ಬೆಳೆಯುವುದರಿಂದ ಆಗುವ ಅನಾಹುತ ಕುರಿತು ಮಾಹಿತಿ ನೀಡಿದರು.



ರೈತರು ಕೃಷಿಯಲ್ಲಿ ಯಾವುದೇ ಸಮಸ್ಯೆ ತಲೆದೋರಿದರೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಅಗತ್ಯ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಕೇಂದ್ರ ಬದ್ಧವಾಗಿದೆ ಎಂದರು.



ಕೇಂದ್ರದ ಬೇಸಾಯ ಶಾಸ್ತ್ರ ತಜ್ಞ ಸಿ. ಶಶಿಕುಮಾರ್ ಮಾತನಾಡಿ, ಹತ್ತಿಯಲ್ಲಿ ಸೂಕ್ತ ತಳಿಗಳು, ಬಿತ್ತನೆ ಕಾಲ, ಸಮಗ್ರ ಪೋಷಕಾಂಶ, ನೀರು ಮತ್ತು ಕಳೆ ನಿರ್ವಹಣೆ ಸೇರಿದಂತೆ ವೈಜ್ಞಾನಿಕ ಕೃಷಿ ಪದ್ಧತಿ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರು.



ಸೂಕ್ತ ಅಂತರ ಬೆಳೆ ಆಯ್ಕೆ ಮಾಡಿ­ಕೊಂಡು ಹತ್ತಿ ಬೆಳೆಯುವುದ­ರಿಂದ ಎಕರೆ­ವಾರು ಆದಾಯ ಹೆಚ್ಚಿಸ­ಬಹುದು, ಕಳೆ ಹತೋಟಿಗೆ ತರಬಹುದು ಎಂದರು.



ಕೀಟಶಾಸ್ತ್ರ ತಜ್ಞ ಡಾ.ಶಿವರಾಯ ನಾವಿ ಹತ್ತಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆ ಮೂಲಕ ರಾಸಾಯನಿಕ ಕೀಟನಾಶಕ ಬಳಕೆಯನ್ನು ಕಡಿಮೆ ಮಾಡುವ ಕುರಿತು ವಿವರಿಸಿದರು.



ಪ್ರಾತ್ಯಕ್ಷಿಕೆಯಲ್ಲಿ ಹತ್ತಿಯಲ್ಲಿ ರಸ­ಹೀರುವ ಕೀಟಗಳ ನಿರ್ವಹಣೆಗಾಗಿ ಬೀಜೋಪಚಾರ, ಬೆಂಡೆಯನ್ನು ಪ್ರತಿ 20 ಸಾಲಿಗೊಂದು ಬೆಳೆಯುವುದು, ಹಳದಿ ಅಂಟುಬಲೆ ಬಳಸುವುದು (ಎಕರೆಗೆ 10 ರಂತೆ), ಇಮಿಡಾ­ಕ್ಲೋ­ಪ್ರಿಡ್‌ ಅನ್ನು (1 ಮಿ.ಲಿ. - 20 ಮಿ.ಲಿ. ನೀರಿನಲ್ಲಿ) ಸುಳಿಗೆ ಹಚ್ಚುವುದು, ಬೆಳೆ 80- 90 ದಿನದ ಹಂತದಲ್ಲಿದ್ದಾಗ ಕುಡಿ ಚಿವುಟುವುದು ಮತ್ತು ಫಿಪ್ರೋನಿಲ್ (1 ಮಿ.ಲಿ./ ಲೀಟರ್‌) ಸಿಂಪಡಿಸುವುದು ಮುಂತಾದ ತಂತ್ರಜ್ಞಾನ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಪ್ರತಿಕ್ರಿಯಿಸಿ (+)