ಹೆಚ್ಚು ನೀರು ಹರಿದಿದೆ ಸುಪ್ರೀಂಗೆ ರಾಜ್ಯ ಪ್ರತಿಪಾದನೆ

7

ಹೆಚ್ಚು ನೀರು ಹರಿದಿದೆ ಸುಪ್ರೀಂಗೆ ರಾಜ್ಯ ಪ್ರತಿಪಾದನೆ

Published:
Updated:

ನವದೆಹಲಿ: `ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಸೂಚಿಸಿದ ಪ್ರಮಾಣಕ್ಕಿಂತ ಹೆಚ್ಚುವರಿ ನೀರನ್ನು ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ~ ಎಂದು ಕರ್ನಾಟಕವು ಶುಕ್ರವಾರ ಸುಪ್ರೀಂ ಕೋರ್ಟ್ ಮುಂದೆ ಪ್ರತಿಪಾದಿಸಿತು.ಕರ್ನಾಟಕದಿಂದ ಪ್ರತಿನಿತ್ಯ ಎರಡರಂತೆ 24 ದಿನ 48 ಟಿಎಂಸಿ ಅಡಿ ನೀರು ಬಿಡುಗಡೆಗೆ ಆದೇಶಿಸಬೇಕೆಂದು ಮನವಿ ಮಾಡಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾ. ಡಿ.ಕೆ. ಜೈನ್ ಮತ್ತು ನ್ಯಾ. ಮದನ್ ಬಿ. ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠ  ವಿಚಾರಣೆ ನಡೆಸಿತು. ಕರ್ನಾಟಕ `ಸಿಆರ್‌ಎ~ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲನೆ ಮಾಡಿಲ್ಲ ಎಂದು ತಮಿಳುನಾಡು ಆರೋಪಿಸಿತು.ತಮಿಳುನಾಡು ಪರ ಹಾಜರಾದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್, ಪ್ರಧಾನಿ ನೇತೃತ್ವದ `ಸಿಆರ್‌ಎ~ ನಿರ್ದೇಶನದ ಅನ್ವಯ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಇನ್ನೂ ನಾಲ್ಕು ಟಿಎಂಸಿ ಅಡಿ ನೀರು ಹರಿಯಬೇಕಿದೆ. 

ಸರದಿ ಉಪವಾಸ: ತಾತ್ಕಾಲಿಕ ಸ್ಥಗಿತ
ಮಂಡ್ಯ:  ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿ ನಡೆಸುತ್ತಿದ್ದ ಸರದಿ ಉಪವಾಸ ಸತ್ಯಾಗ್ರಹವನ್ನು  ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದಕ್ಕೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂಕೋರ್ಟ್ ಅ. 19ರ ವರೆಗೆ ಮುಂದೂಡಿರುವುದರಿಂದ  ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.ಕಾವೇರಿ ಉಸ್ತುವಾರಿ ಸಮಿತಿ ಸಭೆಯ ಸಲಹೆಯಂತೆ ಅ.16 ರಿಂದ ನೀರು ಬಿಡಲು ಸರ್ಕಾರ ಮುಂದಾದರೆ, ಹೋರಾಟ ಮತ್ತೆ ತೀವ್ರಗೊಳಿಸಲಾಗುವುದು ಎಂದು ಸಮಿತಿ ಉಪಾಧ್ಯಕ್ಷ ಎಂ.ಎಸ್. ಆತ್ಮಾನಂದ ತಿಳಿಸಿದ್ದಾರೆ.ಅ.19 ರಂದು ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ನೋಡಿಕೊಂಡು ಮುಂದಿನ ಹೋರಾಟ ಕೈಗೊಳ್ಳಲಾಗುವುದು.ಅಲ್ಲಿಯವರೆಗೆ, ರಸ್ತೆ, ರೈಲು ತಡೆ, ಪ್ರತಿಭಟನೆಯನ್ನು ಸಂಘಟನೆಗಳವರು ಕೈಬಿಡಬೇಕು ಎಂದು ಮನವಿ ಮಾಡಿದರು.ನಿಲುವು ಸ್ಪಷ್ಟಪಡಿಸಿ:

ಕಾವೇರಿ ನದಿ ಪ್ರಾಧಿಕಾರ ಅಥವಾ ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ. ರಾಜ್ಯದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಆಗ್ರಹಿಸಿದರು.ಶುಕ್ರವಾರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ನೀರು ಬಿಡಬಾರದು.ಈಗ ತೆಗೆದುಕೊಂಡಿರುವ ನಿಲುವಿಗೆ ಬದ್ಧರಾಗಿರಬೇಕು. ಇಲ್ಲದಿದ್ದರೆ, ಸಮಿತಿಯು ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ನೈರುತ್ಯ ಮಳೆ ಕೊರತೆಯಿಂದ ಕಾವೇರಿ ಜಲಾಶಯಗಳಿಗೆ ಶೇ 41ರಷ್ಟು ಒಳ ಹರಿವು ಕಡಿಮೆಯಾಗಿದೆ ಎಂದು ಕರ್ನಾಟಕ ಹೇಳುತ್ತಿದೆ. ಈಚೆಗೆ ಕರ್ನಾಟಕಕ್ಕೆ ತೆರಳಿದ್ದ ಕೇಂದ್ರ ಪರಿಣತರ ತಂಡ ಇದನ್ನು ಸಮರ್ಥಿಸಿದೆ. `ಕಾವೇರಿ ನ್ಯಾಯಮಂಡಳಿ ಮಧ್ಯಂತರ ತೀರ್ಪಿನ ಪ್ರಕಾರ ಸಂಕಷ್ಟದ ಸ್ಥಿತಿಯಲ್ಲೂ ತಮಿಳುನಾಡಿಗೆ ಶೇ 59 ರಷ್ಟು ನೀರು ಹರಿಯಬೇಕು. ಆದರೆ, ನಮಗೆ ಬಂದಿರುವುದು ಶೇ 20ರಷ್ಟು ಮಾತ್ರ~ ಎಂದು ಹೇಳಿದರು.ಕಾವೇರಿ ನ್ಯಾಯಮಂಡಳಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕರ್ನಾಟಕ ಬೆಳೆ ಬೆಳೆದಿದೆ ಎಂಬ ಸಂಗತಿಯನ್ನು `ಕಾವೇರಿ ಉಸ್ತುವಾರಿ ಸಮಿತಿ~ (ಸಿಎಂಸಿ) ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಗುರುವಾರದ ಸಭೆಯಲ್ಲೂ ಚರ್ಚೆಯಾಗಿದೆ.ನೆರೆಯ ರಾಜ್ಯ 8.50ಲಕ್ಷ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯಬೇಕು. ಬದಲಿಗೆ 12.50ಲಕ್ಷ ಎಕರೆಯಲ್ಲಿ ಬೆಳೆಯುತ್ತಿದೆ. ಕೃಷಿಗೆ 40ಟಿಎಂಸಿ ಅಡಿ ಬಳಕೆ ಮಾಡುವ ಬದಲು ಇನ್ನೂ 20 ಟಿಎಂಸಿ ಅಡಿ ಹೆಚ್ಚು ಅಂದರೆ, 60 ಟಿಎಂಸಿ ಅಡಿ ಉಪಯೋಗಿಸುತ್ತಿದೆ ಎಂದು ವೈದ್ಯನಾಥನ್ ಆರೋಪಿಸಿದರು.`ಸಿಎಂಸಿ~ಯು ಅಕ್ಟೋಬರ್ ಕೊನೆಯ ಪಾಕ್ಷಿಕದಲ್ಲಿ ತಮಿಳುನಾಡಿಗೆ 8.85ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಹೇಳಿದೆ ಎಂಬ ಅಂಶವನ್ನು ವೈದ್ಯನಾಥನ್ ನ್ಯಾಯಾಲಯದ ಗಮನಕ್ಕೆ ತಂದರು.

 

`ಸಿಎಂಸಿ~ ಸಭೆಯಲ್ಲಿ ನಡೆದ ಚರ್ಚೆ ವಿವರ ಹಾಗೂ ವರದಿ ಒದಗಿಸುವಂತೆ ನ್ಯಾ.ಜೈನ್ ಅವರು ಕೇಳಿದರು. ದಾಖಲೆ ಒದಗಿಸಲು ಶುಕ್ರವಾರದವರೆಗೆ ಕಾಲಾವಕಾಶ ನೀಡುವಂತೆ ತಮಿಳುನಾಡು ವಕೀಲರು ಮನವಿ ಮಾಡಿದರು.ಕರ್ನಾಟಕ ಸಂಕಷ್ಟ ಸಂದರ್ಭದಲ್ಲೂ `ಕಾವೇರಿ ಪ್ರಾಧಿಕಾರ~ ಸೂಚಿಸಿದ 9000ಕ್ಯೂಸೆಕ್‌ಗಿಂತಲೂ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ನಿಗದಿತ ಅವಧಿಯೊಳಗೆ ಒಟ್ಟಾರೆ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ ಎಂಬ ಹಿರಿಯ ವಕೀಲ ಎಫ್.ಎಸ್.ನಾರಿಮನ್ ವಾದವನ್ನು ಒಪ್ಪದ ನ್ಯಾಯಪೀಠ, `ನೀವು ಒಂದು ದಿನ 3000 ಕ್ಯೂಸೆಕ್ ಬಿಡುತ್ತೀರಿ. ಮತ್ತೊಮ್ಮೆ ಹೆಚ್ಚು ನೀರು ಬಿಡುತ್ತೀರಿ. ಇದರಿಂದ ಪ್ರತಿಕೂಲ ಪರಿಣಾಮವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹುದು~ ಎಂದು ಹೇಳಿತು.ಆರಂಭದಲ್ಲಿ ತಮಿಳುನಾಡು ಮತ್ತು ಕರ್ನಾಟಕ ಸಲ್ಲಿಸಿರುವ ಮಧ್ಯಂತರ ಅರ್ಜಿಗಳೆರಡನ್ನು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ನ್ಯಾಯಪೀಠ ಹೇಳಿತು. ತಮಿಳುನಾಡು ಅದಕ್ಕೆ ಆಕ್ಷೇಪವೆತ್ತಿತು. ಕರ್ನಾಟಕ ಸಲ್ಲಿಸಿರುವ ಮಧ್ಯಂತರ ಅರ್ಜಿ ನಿರರ್ಥಕವಾಗಿರುವುದರಿಂದ ತನ್ನ ಅರ್ಜಿ ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ಒತ್ತಾಯಿಸಿತು.ತಮಿಳುನಾಡು ಅರ್ಜಿ ವಿಚಾರಣೆ ನಡೆಸುವುದಕ್ಕೆ ತನ್ನ ಅಭ್ಯಂತರವಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಅರ್ಜಿ ವಿಚಾರಣೆ ನಡೆಯಿತು. ಅನಂತರ ತಮಿಳುನಾಡು ಕೋರಿಕೆ ಮೇಲೆ ವಿಚಾರಣೆಯನ್ನು  ಅಕ್ಟೋಬರ್ 19ಕ್ಕೆ ಮುಂದಕ್ಕೆ ಹಾಕಲಾಯಿತು.ಈ ಮಧ್ಯೆ, ಪ್ರಧಾನಿ ನೇತೃತ್ವದ  `ಸಿಆರ್‌ಎ~ ಕರ್ನಾಟಕಕ್ಕೆ ನೀಡಿರುವ ನಿರ್ದೇಶನ `ರಾಜಕೀಯ ಪ್ರೇರಿತ~ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ನಾಲ್ವರು ರೈತರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತು.ಕರ್ನಾಟಕ ಪ್ರಮಾಣ ಪತ್ರ: ತಮಿಳುನಾಡಿಗೆ ಬಿಡುಗಡೆ ಮಾಡಿರುವ ನೀರಿನ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರವನ್ನು ಕರ್ನಾಟಕ ಸರ್ಕಾರ ಶುಕ್ರವಾರ ಸಲ್ಲಿಸಿತು. ಈ ಪ್ರಮಾಣ ಪತ್ರದಲ್ಲಿ ಸೆ. 19ರ `ಸಿಆರ್‌ಎ~ ನಿರ್ದೇಶನ ಹಾಗೂ ಸೆ. 28ರ ಸುಪ್ರೀಂ  ಕೋರ್ಟ್ ಆದೇಶ ಪಾಲಿಸಲಾಗಿದೆ ಎಂದು ತಿಳಿಸಿದೆ. ಸೆ.20ರಿಂದ ಅ.10ರವರೆಗೆ `ಸಿಆರ್‌ಎ~ ನಿರ್ದೇಶನದಂತೆ ಕರ್ನಾಟಕ ತಮಿಳುನಾಡಿಗೆ 1.89ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಿತ್ತು. 2.07ಲಕ್ಷ ಕ್ಯೂಸೆಕ್ ಬಿಡುಗಡೆ ಮಾಡಿದೆ. 18ಸಾವಿರ ಕ್ಯೂಸೆಕ್ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಖಚಿತಪಡಿಸಲಾಗಿದೆ.ಕರ್ನಾಟಕ ಸೆ.10ರಂದು ಸುಪ್ರೀಂ ಕೋರ್ಟ್‌ಗೆ ನೀಡಿದ ಲಿಖಿತ ಬದ್ಧತೆಯಂತೆ ಸೆ.12ರಿಂದ 19ರವರೆಗೆ ನಿತ್ಯ 10ಸಾವಿರ ಕ್ಯೂಸೆಕ್ ಹರಿಸಬೇಕಿತ್ತು. ಆದರೆ, ಸುಮಾರು 14 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡುಗಡೆ ಆಗಿದೆ. ಇದರಿಂದಾಗಿ ನೆರೆ ರಾಜ್ಯಕ್ಕೆ ಸುಮಾರು 32 ಸಾವಿರ ಕ್ಯೂಸೆಕ್ ನೀರು ಹೆಚ್ಚುವರಿಯಾಗಿ ಹರಿದಿದೆ ಎಂದು ಮುಖ್ಯ ಎಂಜಿನಿಯರ್ (ಅಂತರರಾಜ್ಯ ನೀರು) ಎಂ. ಬಂಗಾರಸ್ವಾಮಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ.ಮೇಲ್ಮನವಿ ತಿರಸ್ಕಾರ ಪ್ರಶ್ನಿಸಲು ನಿರ್ಧಾರ

ತಮಿಳುನಾಡಿಗೆ ಸೆ.20 ರಿಂದ ಅ.15ರವರೆಗೆ ಪ್ರತಿನಿತ್ಯ 9000 ಕ್ಯೂಸೆಕ್ ನೀರು ಬಿಡಬೇಕೆಂಬ ನಿರ್ದೇಶನದ ಮರು ಪರಿಶೀಲನೆಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ `ಕಾವೇರಿ ನದಿ ಪ್ರಾಧಿಕಾರ~ದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಕರ್ನಾಟಕ ತೀರ್ಮಾನಿಸಿದೆ.`ಸಿಆರ್‌ಎ~ ಕ್ರಮ ಪ್ರಶ್ನಿಸಿ ಕರ್ನಾಟಕ ಶನಿವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.`ಸಿಎಂಸಿ~ ತೀರ್ಪು ಪಾಲನೆಗೆ ಸಲಹೆ

ಅ.16ರಿಂದ 31ರವರೆಗೆ 8.85 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕೆಂಬ `ಸಿಎಂಸಿ~ ತೀರ್ಪನ್ನು, ಅಲ್ಪಸ್ವಲ್ಪ ಮಟ್ಟಿಗೆ ಪಾಲಿಸುವಂತೆ ನಾರಿಮನ್ ನೇತೃತ್ವದ ವಕೀಲರ ತಂಡ ರಾಜ್ಯಕ್ಕೆ ಸಲಹೆ ಮಾಡಿದೆ. ನೀರು ಹಂಚಿಕೆ ವಿವಾದದಲ್ಲಿ ಭಾಗಿಯಾಗಿರುವ ರಾಜ್ಯಗಳು ಕಾನೂನು ಮೀರಿ ನಡೆಯಬಾರದು. ಇಂಥ ನಡವಳಿಕೆ ನ್ಯಾಯಾಲಯಕ್ಕೆ ತಪ್ಪು ಸಂದೇಶ ಕಳುಹಿಸುತ್ತದೆ ಎಂಬ ಅಭಿಪ್ರಾಯವನ್ನು ವಕೀಲರ ತಂಡ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry