ಹೆಜ್ಜೆಗುರುತು

7
ಸಿನಿಹಬ್ಬ

ಹೆಜ್ಜೆಗುರುತು

Published:
Updated:
ಹೆಜ್ಜೆಗುರುತು

ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಐದನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಇಂಥ ಚಿತ್ರೋತ್ಸವಗಳ ಮೊದಲ ಬೀಜ ಮೊಳೆತದ್ದು ನಾಲ್ಕು ದಶಕಗಳ ಹಿಂದೆ. ಕೆಲವು ಉತ್ಸಾಹಿಗಳು ನಡೆಸಿದ ಹಠಮಾರಿ ಸಾಹಸವೇ ನಾಡಿನಲ್ಲಿ ಚಿತ್ರೋತ್ಸವಗಳ ಉಗಮಕ್ಕೆ ನಾಂದಿ ಹಾಡಿತು. ಒಂದು ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಕೆಲವು ಯುವಮನಸ್ಸುಗಳು ಮಾಡಿ ಮುಗಿಸಿದ್ದವು.ಐವತ್ತರ ದಶಕದಲ್ಲಿ ದೆಹಲಿಯಲ್ಲಿ ದೇಶದ ಮೊದಲ ಚಿತ್ರೋತ್ಸವ ಆರಂಭವಾದರೂ ಅದು ನಿರಂತರವಾಗಿ ನಡೆಯುವ ಪ್ರಕ್ರಿಯೆಯೇನೂ ಆಗಿರಲಿಲ್ಲ. ಅನೇಕ ವರ್ಷಗಳು ಕಳೆದ ಮೇಲೆ ಅದಕ್ಕೆ ಸಾತತ್ಯ ದೊರೆತದ್ದು ಇತಿಹಾಸ. ದೆಹಲಿಯಲ್ಲಿ ಒಂದು ವರ್ಷ ಚಿತ್ರೋತ್ಸವ ನಡೆದರೆ ಮತ್ತೊಂದು ವರ್ಷ ದೇಶದ ವಿವಿಧೆಡೆ ಚಿತ್ರೋತ್ಸವ ನಡೆಯುತ್ತಿದ್ದವು. ಕೇಂದ್ರ ಸರ್ಕಾರಕ್ಕೆ ಇದ್ದ ಅಷ್ಟಿಷ್ಟು ಆಸಕ್ತಿ ಆಗ ರಾಜ್ಯ ಸರ್ಕಾರಗಳಿಗೆ ಇರಲಿಲ್ಲ.ಎಪ್ಪತ್ತರ ದಶಕ. ರಾಜ್ಯದ ಅತಿ ಹಳೆಯ ಫಿಲ್ಮ್ ಕ್ಲಬ್‌ಗಳಲ್ಲಿ ಒಂದಾದ `ಮಯೂರ ಚಲನಚಿತ್ರ ಸಮಾಜ'ವನ್ನು ಸ್ಥಾಪಿಸಿದ ಎಂ.ವಿ.ಕೃಷ್ಣಸ್ವಾಮಿ ಅವರೇ ಚಲನಚಿತ್ರೋತ್ಸವಗಳಿಗೂ ನಾಂದಿ ಹಾಡಿದರು. ಬೇರೆ ಭಾಷೆಯ ಬೇರೆ ದೇಶಗಳ ಚಲನಚಿತ್ರಗಳು ಕನ್ನಡಿಗರಿಗೆ ನೋಡಲು ದೊರೆತವು. ಖ್ಯಾತ ನಿರ್ದೇಶಕರಾದ ಸತ್ಯಜಿತ್ ರೇ, ಗೊಡ್ಡಾರ್ಡ್‌ರ ಹೆಸರಿನಲ್ಲಿ ಪ್ರತ್ಯೇಕ ಚಿತ್ರೋತ್ಸವಗಳನ್ನೇ ನಡೆಸಿದರು ಎಂದು ಅಂದಿನ ದಿನಗಳನ್ನು ನೆನೆಯುತ್ತಾರೆ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಎನ್.ಶಶಿಧರ.ಚಿತ್ರೋತ್ಸವಗಳ ಇತಿಹಾಸದೊಂದಿಗೆ `ಸುಚಿತ್ರ'ದ ಹೆಸರು ಕೂಡ ತಳಕು ಹಾಕಿಕೊಂಡಿದೆ. 1971ರಲ್ಲಿ ಆರಂಭವಾದ ಸುಚಿತ್ರ ಚಲನಚಿತ್ರ ಸಮಾಜ ರಾಜ್ಯದಲ್ಲಿ ಚಿತ್ರೋತ್ಸವಗಳಿಗೆ ಉತ್ತಮ ಬುನಾದಿ ಹಾಕಿತು. ವಿಶ್ವದಲ್ಲಿ ನಡೆಯುವ ಚಲನಚಿತ್ರ ಪ್ರಯೊಗಗಳನ್ನೆಲ್ಲಾ ಇಲ್ಲಿನ ಜನರಿಗೆ ಉಣಬಡಿಸುವುದು ಅದರ ಆರಂಭದ ಉದ್ದೇಶವಾಗಿತ್ತು. ಭಾರತೀಯ ಚಿತ್ರಗಳನ್ನು ಪ್ರಚುರಪಡಿಸುವ ಉದ್ದೇಶದಿಂದ `ಚಿತ್ರ ಭಾರತಿ' ಹೆಸರಿನ ಚಿತ್ರಹಬ್ಬವನ್ನು ಏರ್ಪಡಿಸಿತು. ವರ್ಷವಿಡೀ ವಿವಿಧ ಚಿತ್ರೋತ್ಸವಗಳು, ಸಿನಿಮಾ ಕುರಿತ ಕಾರ್ಯಾಗಾರಗಳು, ಸಿನಿಮಾಕ್ಕೆ ಸಂಬಂಧಿಸಿದ ಇತರೆ ಕಲಾ ಪ್ರಕಾರಗಳ ಪ್ರಚಾರದ ಕುರಿತಂತೆ ಆಸಕ್ತಿ ವಹಿಸಿದೆ.  

ಹೊಸ ಪ್ರಯೋಗಗಳು...

ಚಿತ್ರೋತ್ಸವಗಳು, ಚಿತ್ರ ಸಮಾಜಗಳು ಒಬ್ಬರ ಸ್ವತ್ತಾಗಬಾರದು ಎಂಬ ಆಶಯದೊಂದಿಗೆ `ಅಸೀಮಾ' ಕಣ್ತೆರೆಯಿತು. ಖ್ಯಾತ ಛಾಯಾಗ್ರಾಹಕ ರಾಮಚಂದ್ರ ಐತಾಳರು ಅದರ ಸ್ಥಾಪಕರು. ಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದ ಉತ್ಸಾಹಿಗಳಿಂದಲೇ ಕೆಲವು ಚಿತ್ರಗಳನ್ನು ನಿರ್ಮಿಸಲು ಮುಂದಾಯಿತು ಸಂಘಟನೆ. ಮೂರರಿಂದ ಐದು ನಿಮಿಷಗಳ ಪುಟಾಣಿ ಸಿನಿಮಾಗಳ ಪ್ರಯೋಗ ನಡೆದದ್ದು ಆ ಕಾಲದಲ್ಲಿಯೇ. ಹಾಗೆ ತಯಾರಿಸಿದ ಚಿತ್ರಗಳನ್ನು ಅದೇ ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡುವ ಅವಕಾಶವೂ ದೊರೆಯುತ್ತಿತ್ತು.1970ರಿಂದ 85ರ ಅವಧಿಯ ನಡುವೆ `ವಿ ತ್ರೀ', `ಸೃಜನಾ'ದಂತಹ ಹತ್ತು ಹನ್ನೆರಡು ಚಲನಚಿತ್ರ ಸಂಘಟನೆಗಳು ರಾಜ್ಯದಲ್ಲಿ ತಲೆ ಎತ್ತಿದವು. ಹೀಗೆ ಸಂಘಟನೆಗಳ ಸಂಖ್ಯೆ ಹೆಚ್ಚಿದಂತೆ ಪ್ರತ್ಯೇಕ ಚಲನಚಿತ್ರೋತ್ಸವಗಳ ಬದಲು ಒಂದೇ ವೇದಿಕೆಯಲ್ಲಿ ಹಲವು ಸಿನಿಮಾಗಳ ಪ್ರದರ್ಶನಕ್ಕೆ ಮುಂದಾದವು. ಇದೇ ಹೊತ್ತಿಗೆ ವಿಜ್ಞಾನ, ಪರಿಸರ ಮಾಲಿನ್ಯ, ಕಾರ್ಮಿಕರ ಸಮಸ್ಯೆ ಇತ್ಯಾದಿ ವಿಷಯಾಧಾರಿತ ಚಿತ್ರೋತ್ಸವಗಳ ಭರಾಟೆ ವಿಶ್ವದ್ಲ್ಲೆಲೆಡೆ ಜೋರಾಯಿತು. ಅದುವರೆಗೆ ನಿರ್ದೇಶಕರು, ದೇಶ- ಭಾಷೆಯ ಹೆಸರಿನಲ್ಲಿ ನಡೆಯುತ್ತಿದ್ದ ನಾಡಿನ ಚಿತ್ರೋತ್ಸವಗಳು ಇದ್ದಕ್ಕಿದ್ದಂತೆ ಬಣ್ಣ, ರೂಪ ಬದಲಿಸಿದವು. ವಿಷಯಾಧಾರಿತ ಚಿತ್ರೋತ್ಸವಗಳ ಸಂಖ್ಯೆ ಹೆಚ್ಚಿತು.`ನಾಸ್ಟಾಲ್ಜಿಯಾ' ಎಂಬ ರೂಪಕ

ನಾಸ್ಟಾಲ್ಜಿಯಾ ಎಂಬ ಪದಕ್ಕೆ ನೆನಪು ಎಂಬ ಅರ್ಥವಿದೆ. ಅದೇ ಹೆಸರಿನ ಚಿತ್ರೋತ್ಸವವೊಂದು 1977ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ಚಿತ್ರೋದ್ಯಮದಲ್ಲಿ ದುಡಿದ ಹಲವು ಗಣ್ಯರನ್ನು ಕರೆಸಿ ವಿಂಟೇಜ್ ಕಾರಿನಲ್ಲಿ ಕೂರಿಸಿ ಟೌನ್‌ಹಾಲ್‌ವರೆಗೂ ಮೆರವಣಿಗೆ ಮಾಡಲಾಯಿತು. ದೇಶ ವಿದೇಶಗಳ ಚಿತ್ರ ತಯಾರಕರೆಲ್ಲಾ ಉತ್ಸವದಲ್ಲಿ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲಿ ಚಿತ್ರೋತ್ಸವ ಮತ್ತು ತಂತ್ರಜ್ಞಾನ ಕುರಿತಂತೆ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಚಲನಚಿತ್ರ ಚಿಂತಕ ಎನ್. ವಿದ್ಯಾಶಂಕರರ ಪ್ರಕಾರ ಉತ್ಸವದ ಜತೆಗೆ ಪ್ರದರ್ಶನವೂ ನಡೆದದ್ದು ಅದೇ ಮೊದಲ ಬಾರಿ.ತೊಂಬತ್ತರ ದಶಕ. `ನಟರಂಗ'ದ ಎಂ.ಎ. ಶ್ರೀನಿವಾಸ್ ಏಕಾಂಗಿ ಹೋರಾಟ ನಡೆಸಿದ್ದರು. ಅಂದಿನ ಕಲ್ಕತ್ತಾ, ಬಾಂಬೆಯಲ್ಲಿ ನಡೆಯುತ್ತಿದ್ದ ಚಲನಚಿತ್ರೋತ್ಸವಗಳ ಮಾದರಿಯಲ್ಲೇ ಬೆಂಗಳೂರಿನಲ್ಲೂ ಚಿತ್ರಹಬ್ಬ ಮಾಡಬೇಕು ಎಂಬ ಕನಸು ಮೊಳಕೆಯೊಡೆದಿತ್ತು. ವೃತ್ತಿಯಿಂದ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಅವರು ಎಲ್ಲಿಂದಲೋ ಒಂದಷ್ಟು ಹಣ ಒಗ್ಗೂಡಿಸಿದರು. ಅದೇ ಹಠಮಾರಿತನದಿಂದ ನಗರದ ಲಿಡೋ ಚಿತ್ರಮಂದಿರವನ್ನು ಬುಕ್ ಮಾಡಿಯೇ ಬಿಟ್ಟರು. ಅದರ ಪರಿಣಾಮವಾಗಿ ಒಂದಷ್ಟು ಚಿತ್ರಗಳು, ಚಿತ್ರೋತ್ಸವ ಕುರಿತ ಕಾರ್ಯಾಗಾರಗಳು ನಡೆದವು.ಈ ಮಧ್ಯೆ ಮೆಟ್ರೊಪಾಲಿಟನ್ ನಗರಗಳಲ್ಲಿ ಚಿತ್ರೋತ್ಸವಗಳನ್ನು ನಡೆಸುತ್ತಿದ್ದ ರಾಯಭಾರ ಕಚೇರಿಗಳ ಚಿತ್ತ ದೇಶದ ಇತರೆ ನಗರಗಳತ್ತಲೂ ಹರಿಯಿತು. ಪರಿಣಾಮವಾಗಿ ಜರ್ಮನಿ, ಆಸ್ಟ್ರೇಲಿಯಾ, ಫ್ರೆಂಚ್ ಸಿನಿಮಾ ಉತ್ಸವಗಳು ಬೆಂಗಳೂರಿನಂಥ ನಗರಗಳಲ್ಲಿ ನಡೆಯುವುದು ಸಾಧ್ಯವಾಯಿತು. ಭಾರತದ ಚಲನಚಿತ್ರಗಳು ಕೂಡ ಅಂಥ ಉತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿದ್ದವು. ಮ್ಯಾಕ್ಸ್‌ಮುಲ್ಲರ್ ಭವನ, ಅಲೆಯೆನ್ಸ್ ಫ್ರಾನ್ಸೆನಂಥ ಸಂಸ್ಥೆಗಳು ಇಂಥ ಪ್ರದರ್ಶನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವು. ಬೆಂಗಳೂರು ಫಿಲಂ ಸೊಸೈಟಿಯೊಂದಿಗೆ ಕೈಜೋಡಿಸಿ ಅಲೆಯೆನ್ಸ್ ಫ್ರಾನ್ಸೆ ಚಿತ್ರೋತ್ಸವ ನಡೆಸುತ್ತದೆ.ಇತ್ತೀಚಿನವರೆಗೂ ಪ್ರತ್ಯೇಕವಾಗಿ ನಡೆಯುತ್ತಿದ್ದ ಇಂಡೋ ಜರ್ಮನ್ ಚಲನಚಿತ್ರೋತ್ಸವ ಈ ವರ್ಷ ಬೆಂಗಳೂರು ಚಲನಚಿತ್ರೋತ್ಸವದ ಭಾಗವಾಗಿದೆ.

ಚಿತ್ರೋತ್ಸವಗಳ ಪರಿಕಲ್ಪನೆ ಕುರಿತತಂತೆ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್ ಅವರನ್ನು ಒಳಗೊಂಡ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರ ಬಹುತೇಕ ಅಂಶಗಳನ್ನು ಸರ್ಕಾರ ಪರಿಗಣಿಸಿ ಚಿತ್ರೋತ್ಸವಗಳನ್ನು ಆಯೋಜಿಸುತ್ತಿದೆ. ಆ ಸಮಿತಿ ಮೊದಲ ಬಾರಿಗೆ ಚಿತ್ರೋತ್ಸವಗಳ ಕುರಿತು ಸ್ಪಷ್ಟ ಕಲ್ಪನೆ ನೀಡಿತು ಎನ್ನುತ್ತಾರೆ ಹಿರಿಯ ಲೇಖಕಿ ಡಾ. ವಿಜಯಾ.ಬೆಳ್ಳಿ ಯತ್ನ...

ರಾಜ್ಯದ ಉದ್ದಗಲಕ್ಕೂ ಚಿತ್ರ ಸಂಸ್ಕೃತಿಯನ್ನು ಪಸರಿಸಬೇಕು ಎಂಬ ಉದ್ದೇಶದೊಂದಿಗೆ ಚಲನಚಿತ್ರ ಸಮಾಜಗಳನ್ನು ಸ್ಥಾಪಿಸಿ ಅವುಗಳ ಜತೆಗೆ ಚಿತ್ರೋತ್ಸವಗಳನ್ನು ನಡೆಸುವುದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಉದ್ದೇಶ. ಅದರಂತೆ `ಬೆಳ್ಳಿ ಮಂಡಲ' ಹೆಸರಿನ ಚಿತ್ರ ಸಮಾಜಗಳು ರಾಜ್ಯದ 22 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎನ್ನುತ್ತಾರೆ ಅಕಾಡೆಮಿಯ ಅಧ್ಯಕ್ಷೆ ತಾರಾ ಅನೂರಾಧಾ. ಜತೆಗೆ ಜಿಲ್ಲೆ, ಗಡಿನಾಡು, ಹೊರನಾಡು, ರಾಜ್ಯೋತ್ಸವದ ಸಂದರ್ಭಗಳಲ್ಲಿ ಚಲನಚಿತ್ರೋತ್ಸವಗಳನ್ನು ನಡೆಸುವುದು ಹಾಗೂ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ, ವಿಷಯಾಧಾರಿತ ಚಿತ್ರೋತ್ಸವಗಳನ್ನು ನಡೆಸುವ ಕನಸು ಅಕಾಡೆಮಿಯದು.ಪುಟ್ಟ ಹೆಜ್ಜೆಗಳು...

ರಾಜ್ಯದ ವಿವಿಧೆಡೆ ಅನೇಕ ಪುಟ್ಟ ಸಮುದಾಯಗಳು ಚಿತ್ರೋತ್ಸವಗಳನ್ನು ನಡೆಸುತ್ತಿವೆ. ಕೋಲಾರದ ಆದಿಮ ಸಾಂಸ್ಕೃತಿಕ ಸಂಘಟನೆ, ಮಂಗಳೂರಿನ ಚಿತ್ರ ಸಮಾಜ ನಡೆಸುವ `ಸಹಮತ ಚಿತ್ರೋತ್ಸವ', ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಪೆಡೆಸ್ಟ್ರಿಯನ್ ಪಿಕ್ಚರ್ಸ್‌ನ ಸಿನಿ ಹಬ್ಬ, ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುವ `ನಮ್ಮೂರ ಚಿತ್ರೋತ್ಸವ' ಇವುಗಳಲ್ಲಿ ಪ್ರಮುಖವಾದುವು. ಚಿಲ್ಡ್ರನ್ ಫಿಲಂ ಸೊಸೈಟಿ ಕೂಡ ಆಗಾಗ ರಾಜ್ಯದಲ್ಲಿ ಮಕ್ಕಳ ಚಿತ್ರೋತ್ಸವಗಳನ್ನು ನಡೆಸುತ್ತದೆ.ಚಿತ್ರೋತ್ಸವಗಳ `ಹೆಗ್ಗೋಡು'

`ರಂಗಭೂಮಿಯ ಕೃಷಿಕ' ಹೆಗ್ಗೋಡಿನ ನೀನಾಸಂಗೆ ಚಿತ್ರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಕುರಿತು ಹೆಚ್ಚಿನ ಆಸಕ್ತಿ. ನೀನಾಸಂನ ಕೆ.ವಿ.ಸುಬ್ಬಣ್ಣ ಹೆಗ್ಗೋಡಿನ ಹುಡುಗರನ್ನು ದೆಹಲಿಗೆ ಕರೆದೊಯ್ದು ಸಿನಿಮಾ ತೋರಿಸಲಿಲ್ಲ. ಬದಲಿಗೆ ಸಿನಿಮಾವನ್ನೇ ಆ ಪುಟ್ಟ ಹಳ್ಳಿಗೆ ತಂದರು. ಸಿನಿಮಾ ಕುರಿತು ಪುಸ್ತಕಗಳನ್ನು ಬರೆಯುತ್ತ, ದೇಶ ವಿದೇಶದ ಚಿತ್ರಕರ್ಮಿಗಳನ್ನು ಹೆಗ್ಗೋಡಿಗೆ ಆಹ್ವಾನಿಸುತ್ತ, ವಿಶಿಷ್ಟ ರೀತಿಯಲ್ಲಿ ಚಿತ್ರೋತ್ಸವಗಳನ್ನು ಆಯೋಜಿಸುತ್ತ ಅವರು ನಡೆಸಿದ ಚಿತ್ರಪ್ರಯೋಗವನ್ನು ದಿಲ್ಲಿಯ ಮಂದಿ ಕೂಡ ಮರೆಯಲಾರರು ಎಂದು ನೆನೆಯುತ್ತಾರೆ ಚಿತ್ರೋತ್ಸವ ಪ್ರೇಮಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry