ಹೆಜ್ಜೆಗೆಜ್ಜೆ ನಂಟು

7

ಹೆಜ್ಜೆಗೆಜ್ಜೆ ನಂಟು

Published:
Updated:

ಹಾಡು, ಗೆಜ್ಜೆ, ಹೆಜ್ಜೆಗಳ ಮೋಡಿಗೆ ಬಿದ್ದು ನೃತ್ಯಗಾರ್ತಿಯಾದವಳು ಸಂಗೀತಾ ಫಣೀಶ್‌. ವಿದ್ಯಾವರ್ಧಕ ಸಂಘದ ಸರ್ದಾರ್‌ ಪಟೇಲ್‌ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗಿಗೆ ಒಲಿದಿದ್ದು ಭರತನಾಟ್ಯ, ಕೂಚಿಪುಡಿ ಹಾಗೂ ಕಥಕ್‌.ನೃತ್ಯದಲ್ಲಿ ವಿಶೇಷ ಆಸಕ್ತಿ ಇದ್ದ ಜಯಶ್ರೀ ಅವರಿಗೆ ಮಗಳನ್ನು ನೃತ್ಯಗಾರ್ತಿಯನ್ನಾಗಿಸಬೇಕೆಂಬ ಹಂಬಲ. ವಿವಿಧ ಕಲಾವಿದರ ಸೀಡಿಗಳನ್ನು ತಂದು ಅವರು ಮಗಳಿಗೆ ತೋರಿಸುತ್ತಿದ್ದರಂತೆ. ಚಿಕ್ಕಂದಿನಿಂದ ಹಾಡು, ನೃತ್ಯದ ಸವಿ ಆಸ್ವಾದಿಸುತ್ತಾ ಬೆಳೆದ ಸಂಗೀತಾ, ಕ್ರಮೇಣ ತಾನೂ ಹೆಜ್ಜೆ ಇಡಲು ಪ್ರಾರಂಭಿಸಿದಳು. ಯಾವುದೇ ಹಾಡಿಗಾದರೂ ಅವಳದ್ದೇ ಕುಣಿತ ಪ್ರಾರಂಭವಾಗುತ್ತಿತ್ತು. ಇದೇ ಸಂದರ್ಭ ಎಂದು ಜಯಶ್ರೀ ಮಗಳನ್ನು ಮೊದಲು ಸೇರಿಸಿದ್ದು ಭರತನಾಟ್ಯ ತರಗತಿಗೆ.ಒಂದು ವರ್ಷ ಭರತನಾಟ್ಯ ಕಲಿತ ಪುಟ್ಟ ಹುಡುಗಿಗೆ ಕೂಚಿಪುಡಿ ಪ್ರಕಾರ ಕೈಬೀಸಿ ಕರೆಯಿತು. ವೀಣಾಮೂರ್ತಿ ವಿಜಯ್‌ ಅವರ ಬಳಿ ಕಲಿಕೆ ಪ್ರಾರಂಭವಾಯಿತು. ಸುಮಾರು ಆರು ವರ್ಷಗಳಿಂದ ಕೂಚಿಪುಡಿ ಕಲಿಯುತ್ತಿರುವ ಇವರು ರಂಗಪ್ರವೇಶವನ್ನೂ ಮುಗಿಸಿದ್ದಾರೆ. ಇದೀಗ ಒಂದೂವರೆ ವರ್ಷದಿಂದ ಕಥಕ್‌ ತಾಳಕ್ಕೆ ಹೆಜ್ಜೆ ಇಡುತ್ತಿದ್ದಾರೆ ಸಂಗೀತಾ.

ಸೌಮ್ಯ ಹಾಗೂ ಸೋಮಶೇಖರ್‌ ಅವರ ಶಿಷ್ಯೆಯಾಗಿ ಇತ್ತೀಚೆಗೆ ಕಥಕ್‌ನಲ್ಲಿ ರಂಗಪ್ರವೇಶ ಮಾಡಿದ್ದಾರೆ. ಈಗ ವಾರದ ಎಲ್ಲಾ ದಿನಗಳೂ ಕಥಕ್‌ ಹಾಗೂ ಕೂಚಿಪುಡಿ ನೃತ್ಯ ಕಲಿಕೆಗೆ ಮೀಸಲು. ‘ಸದ್ಯಕ್ಕೆ ಓದುವುದು ಹೆಚ್ಚು ಇಲ್ಲ ಎಂಬ ಕಾರಣಕ್ಕೆ ನೃತ್ಯ ಸಾಧನೆಗೆ ಅಡ್ಡಿ ಆಗಿಲ್ಲ. ಆದರೆ ನಾನು ಅಪ್ಪ ಫಣೀಶ್‌ ಅವರಂತೆ ವೈದ್ಯೆ ಆಗಬೇಕು ಎಂಬ ಕನಸು ಹೊತ್ತಿದ್ದೇನೆ. ಮುಂದಿನ ತರಗತಿಗೆ ಹೋದಂತೆ ಹೆಚ್ಚು ಹೆಚ್ಚು ಓದಬೇಕು. ಆಗ ಎಲ್ಲವನ್ನೂ ಹೇಗೆ ನಿಭಾಯಿಸುತ್ತೇನೆ ಗೊತ್ತಿಲ್ಲ. ನೃತ್ಯವನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ ಸಂಗೀತಾ.ದೇಶ ಹಾಗೂ ವಿದೇಶಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಸೋಲೊ ಪ್ರದರ್ಶನ ನೀಡುವ ಈಕೆಗೆ ಸಂದ ಪ್ರಶಸ್ತಿಗಳೂ ಅನೇಕ. ‘ಕರುನಾಡ ಪದ್ಮಶ್ರೀ’, ‘ಸುವರ್ಣ ಕರ್ನಾಟಕ ಚೇತನ’, ‘ಅಮೋಘ ವರ್ಷ ನೃಪತುಂಗ’, ‘ಸ್ವಾತಿ ಮುತ್ತು’, ‘ನಾಟ್ಯ ಮಯೂರಿ’, ‘ರಾಜೀವ್‌ಗಾಂಧಿ ಸದ್ಭಾವನಾ’, ‘ನಾಟ್ಯ ರಾಣಿ ಶಾಂತಲಾ’, ‘ಕರುನಾಡ ಕಲಾತಿಲಕ’, ‘ಕರ್ನಾಟಕ ಕಲಾಶ್ರೀ’, ‘ನಾಟ್ಯ ಸರಸ್ವತಿ’, ‘ಕಿಶೋರ್‌ ಪ್ರತಿಭೆ’ ಮುಂತಾದ ಪ್ರಶಸ್ತಿಗಳು ಸಂದಿವೆ. ಕೂಚಿಪುಡಿ ಸಿಂಹನಂದಿ ನೃತ್ಯದಲ್ಲಿ ಈಕೆ ಮಾಡಿದ ಸಾಧನೆಗೆ ‘ಗ್ಲೋಬಲ್‌ ವರ್ಲ್ಡ್‌ ರೆಕಾರ್ಡ್‌’ ಹಾಗೂ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ಪ್ರಶಸ್ತಿ ಲಭಿಸಿದೆ. ಈ ನೃತ್ಯದ ಪ್ರಕಾರ 128 ಬೀಟ್ಸ್‌ಗೆ ರಂಗೋಲಿಯ ಮೇಲೆ ಹೆಜ್ಜೆಗಳಿಂದಲೇ ಸಿಂಹದ ಚಿತ್ರವನ್ನು ಬಿಡಿಸಬೇಕು. ಇಂಥ 111 ಪ್ರದರ್ಶನಗಳನ್ನು ನೀಡಿದ್ದಾರೆ.ದೇಶದಲ್ಲಿ ಮಾತ್ರವಲ್ಲ ವಿದೇಶದ ಬಫೆಲೊ ವಿಶ್ವವಿದ್ಯಾಲಯ, ಪಿಟ್ಸ್‌ಬರ್ಗ್‌ನಲ್ಲಿರುವ ವೆಂಕಟೇಶ್ವರ ದೇವಸ್ಥಾನ, ಸ್ಯಾನ್‌ ಆಂಟೊನಿಯೊದಲ್ಲಿರುವ ಕುವೆಂಪು ಕನ್ನಡ ಸಂಘ, ಬಫೆಲೊ ಬಾಲಾಜಿ ದೇವಸ್ಥಾನ, ವಾಷಿಂಗ್ಟನ್‌ನಲ್ಲಿರುವ ಡಿ.ಸಿ.ಕನ್ನಡ ಸಂಘ, ಆಸ್ಟಿನ್‌ನಲ್ಲಿರುವ ರಾಮ ದೇವಾಲಯದಲ್ಲಿ ಇವರು ಪ್ರದರ್ಶನ ನೀಡಿದ್ದಾರೆ. ಇವರು ಏಪ್ರಿಲ್‌ನಲ್ಲಿ ಮಾರಿಶಿಯಸ್‌ನಲ್ಲಿ ಪ್ರದರ್ಶನ ನೀಡಲಿದ್ದಾರೆ. ‘ನಮ್ಮ ಸಂಸ್ಕೃತಿ ಬಗ್ಗೆ ತಿಳಿಯದಿರುವವರು ನೃತ್ಯ ನೋಡಿ ಖುಷಿಯಿಂದ ಸ್ಪಂದಿಸುತ್ತಾರೆ. ಭಾರತೀಯ ನೃತ್ಯ ಪ್ರಕಾರಗಳನ್ನು ವಿದೇಶಿಗರಿಗೆ ಪರಿಚಯಿಸುವ ಅವಕಾಶ ಲಭಿಸುವುದು ತುಂಬಾ ಖುಷಿ ನೀಡುತ್ತದೆ. ಒಂದು ಕಡೆ ಕಾರ್ಯಕ್ರಮ ನೋಡಿದವರು ಇನ್ನೊಂದೆಡೆ ಬಂದು ನೃತ್ಯ ಮಾಡುವಂತೆ ಕೇಳಿಕೊಳ್ಳುತ್ತಾರೆ. ಅನೇಕ ವಿದೇಶೀಯರೂ ಇಲ್ಲಿಗೆ ಬಂದು ಕಲಿಯುವ ಹುಮ್ಮಸ್ಸು ತೋರುತ್ತಾರೆ’ ಎಂದು ಖುಷಿಯಲ್ಲಿ ಕಣ್ಣರಳಿಸುತ್ತಾರೆ ಸಂಗೀತಾ.ನೃತ್ಯ ಸಾಧನೆಯಲ್ಲಿ ಗುರುಗಳೇ ಈಕೆಗೆ ಸ್ಫೂರ್ತಿ. ಬೆಂಗಳೂರಿನಲ್ಲಿ ಭರತನಾಟ್ಯ ಕಲಿತ ಅನೇಕರಿದ್ದಾರೆ, ಕಲಿಸುವವರೂ ಇದ್ದಾರೆ. ಆದರೆ ಕಥಕ್‌ ಹಾಗೂ ಕೂಚಿಪುಡಿ ಎರಡೂ ವೇಗವಾದ ಹೆಜ್ಜೆಗಳನ್ನು ಬೇಡುವ ನೃತ್ಯ. ಹೀಗಾಗಿಯೇ ಸಂಗೀತಾಗೆ ಇದೇ ಪ್ರಕಾರಗಳು ಹೆಚ್ಚು ಇಷ್ಟವಾದವಂತೆ. ಇನ್ನು ಪ್ರತಿದಿನ ಮನೆಯಲ್ಲಿ ಎರಡು ಗಂಟೆ ನೃತ್ಯಾಭ್ಯಾಸ ಮಾಡುತ್ತಾಳೆ. ಪ್ರದರ್ಶನವಿದ್ದಾಗ ತರಗತಿಯಲ್ಲೇ ಅಭ್ಯಾಸ ಮುಗಿಯುತ್ತದೆ. ಕಥೆ ತಿಳಿದಿರುವುದರಿಂದ ಹಾಗೂ ಹೆಜ್ಜೆಗಳ ಅಭ್ಯಾಸ ನಡೆದಿರುವುದರಿಂದ ವೇದಿಕೆ ಮೇಲೆ ಎಂದೂ ಭಯ ಉಂಟಾಗಲೇ ಇಲ್ಲವಂತೆ.ಸ್ನೇಹಿತರಿಗೆ ತಾನೆಂದರೆ ತುಂಬಾ ಪ್ರೀತಿ ಎನ್ನುವಾಗ ಈಕೆಯ ಮುಖ ಅರಳುತ್ತದೆ. ಶಾಲೆಯಲ್ಲಿ ನೀಡುವ ಪ್ರೋತ್ಸಾಹಕ್ಕೆ ತಾನು ವಿಧೇಯಳು ಎನ್ನುತ್ತಾ ಪಾಶ್ಚಾತ್ಯ ನೃತ್ಯಗಳನ್ನೂ ಕಲಿಬೇಕು ಅಂತ ಎನಿಸುತ್ತದೆ ಎಂಬುದನ್ನೂ ಈಕೆ ಹೇಳುತ್ತಾಳೆ. ಆದರೆ ಸಮಯದ ಅಭಾವ ಕಾಡುತ್ತದೆ ಎಂಬುದನ್ನು ಆಕೆಯ ಮುಖವೇ ಉತ್ತರಿಸುತ್ತದೆ.ಸಿನಿಮಾಗಳಲ್ಲಿ ಅಭಿನಯಿಸುವ ಬಗ್ಗೆ ಈಕೆ ಇನ್ನೂ ಯೋಚಿಸಿಲ್ಲ. ಸದ್ಯಕ್ಕೆ ಆ ಬಗ್ಗೆ ಒಲವೂ ಇಲ್ಲವಂತೆ. ‘ಇನ್ನೂ ಚಿಕ್ಕವಳು. ಓದಬೇಕಲ್ಲ. ಹತ್ತನೇ ತರಗತಿ ಮುಗಿದ ಮೇಲೆ ಸಿನಿಮಾ ಮುಂತಾದ ಅವಕಾಶಗಳ ಬಗ್ಗೆ ಯೋಚಿಸುತ್ತೇವೆ’ ಎನ್ನುತ್ತಾರೆ ಸಂಗೀತಾಳ ತಾಯಿ ಜಯಶ್ರೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry