ಬುಧವಾರ, ನವೆಂಬರ್ 13, 2019
18 °C

ಹೆಜ್ಜೆ ನಡೆದಾವ ಹೆಜ್ಜೆ ಕುಣಿದಾವ

Published:
Updated:
ಹೆಜ್ಜೆ ನಡೆದಾವ ಹೆಜ್ಜೆ ಕುಣಿದಾವ

ಅಂದು ಕೋರಮಂಗಲದ ಫೋರಂ ಮಾಲ್ ಮದುವೆ ಮನೆಯಂತಿತ್ತು. ವಿನ್ಯಾಸಗೊಳಿಸಲಾಗಿದ್ದ ದಿರಿಸನ್ನು ತೊಟ್ಟುಕೊಂಡು, ನಗು ಬೀರುತ್ತಾ ಓಡಾಡುತ್ತಿದ್ದ ಹೆಂಗಳೆಯರು, ವೇದಿಕೆಯ ಸುತ್ತಲೂ ತುಂಬಿಕೊಂಡಿರುವ ಜನ ಎಲ್ಲರ ಕಣ್ಣಲ್ಲೂ ಕಾತರ, ಕುತೂಹಲ.ಆಧುನಿಕ ವಿನ್ಯಾಸದ ಉಡುಪು ತಯಾರಿಕೆ ಬ್ರಾಂಡ್ `ಖ್ವಾಯಿಷ್', ಫೋರಂನಲ್ಲಿ ತನ್ನ ಬೇಸಿಗೆ ಉಡುಪುಗಳ ಮಳಿಗೆಗೆ ಫ್ಯಾಷನ್ ಶೋ ಮೂಲಕ ಚಾಲನೆ ನೀಡಿತು.ರೂಪದರ್ಶಿಗಳು ಬೆಕ್ಕಿನ ಹೆಜ್ಜೆ ಇಡುತ್ತಾ ಕಾಣಿಸಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದರೆ, ವೇದಿಕೆಯ ಮೇಲೆ ನೃತ್ಯ ತಂಡದ ಹುಡುಗರು ಹೆಜ್ಜೆ ಇಟ್ಟರು. `ದೇವ ಶ್ರೀ ಗಣೇಶ' ಎಂಬ ಹಾಡಿಗೆ ಹುಡುಗ-ಹುಡುಗಿಯರು ಕುಣಿದ ಪರಿ ನೋಡುಗರ ಕಣ್ಣಿಗೆ ಹಬ್ಬ.ಅಂತೂ ಸುಂದರಿಯರು ನಿಧಾನವಾಗಿ ವೇದಿಕೆಯ ಮೇಲೆ ಬರಲು ಶುರು ಮಾಡಿದರು. ಹಿನ್ನೆಲೆಯಲ್ಲಿ ಕೇಳಿ ಬರುತ್ತಿದ್ದ `ಮೋಸಂ ಯಾ ಡಾ ಮೋಸಂ' ಹಾಡಿಗೆ ತೆಳು ಹಳದಿ ಬಣ್ಣದ ಟಾಪ್, ಟೈಟ್ ಫಿಟ್ ಜಿನ್ಸ್ ಧರಿಸಿ ತನ್ನ ಹಾಲು ಬಣ್ಣದ ಉದರ ತೋರಿಸುತ್ತಾ, ಹೈ ಹೀಲ್ಡ್ ಚಪ್ಪಲಿ ತೊಟ್ಟು ಬೆಕ್ಕಿನ ನಡಿಗೆ ಹಾಕುತ್ತಾ ಬಂದ ರೂಪದರ್ಶಿಗೆ ಸಿಳ್ಳೆಗಳ ಸುರಿಮಳೆ. ರೂಪದರ್ಶಿಗಳು ಒಬ್ಬೊಬ್ಬರಾಗಿ ರ್‍ಯಾಂಪ್ ಮೇಲೆ ಕಾಲಿಟ್ಟಾಗ ಹುಡುಗರಿಗೆ ಯಾರನ್ನು ನೋಡುವುದು ಎಂಬ ಗೊಂದಲ. ಹುಡುಗಿಯರಲ್ಲಿ ಯಾವ ದಿರಿಸು ಸುಂದರ ಎಂಬ ಚರ್ಚೆ.ತಲೆಯ ಮೇಲೆ ಕೃತಕ ಹೂವಿನ ಪುಟ್ಟ ಕಿರೀಟ ತೊಟ್ಟು, ಬಣ್ಣಬಣ್ಣದ ವಿನ್ಯಾಸದ ಉಡುಪಿನಲ್ಲಿ ಇದ್ದ ಆ ರೂಪದರ್ಶಿಗಳು ಮುಸ್ಸಂಜೆಯಲ್ಲಿ ಮಿಂಚುವ ರಾಜಕುಮಾರಿಯರಂತೆ ಕಂಡರು.ಹುಡುಗಿಯರ ನಂತರ ನಾಲ್ಕೈದು ಹುಡುಗರು ವೇದಿಕೆಯ ಮೇಲೆ ಹೆಜ್ಜೆ ಇಟ್ಟರು. ಪ್ಯಾಂಟ್ ತೊಟ್ಟು ಬರಿ ಮೈಗೆ ಹುಡುಗಿಯರ ದುಪ್ಪಟ ಹಾಕಿಕೊಂಡು ಅವರು ಬಂದು ನಿಂತಾಗ ಸಿಳ್ಳೆ ಇರಲಿ ಚಪ್ಪಾಳೆ ಕೂಡ ಬೀಳಲಿಲ್ಲ!ಆ ದಿನ ಮಾಲ್ ಕೇವಲ ಫ್ಯಾಷನ್ ಶೋಗೆ ಮೀಸಲಾಗಿರಲಿಲ್ಲ. ಅಲ್ಲಿ ಸಂಗೀತ, ನೃತ್ಯ, ವಿಶೇಷ ಪ್ರತಿಭೆ ಉಳ್ಳವರು ವೇದಿಕೆ ಹಂಚಿಕೊಂಡರು. ಪಾಶ್ಚಾತ್ಯ ಹಾಡನ್ನು ಹಾಡಿಕೊಂಡು ಇಂಚರ ಎಂಬ ಹುಡುಗಿ ಬಂದಾಗ ವೇದಿಕೆಯಲ್ಲಿ ಮತ್ತೆ ಚಪ್ಪಾಳೆ ಸದ್ದು.ಆಧುನಿಕ ಉಡುಪು ಧರಿಸಿದ ನಂತರ ಸಾಂಪ್ರದಾಯಿಕ ಉಡುಪು ಇಲ್ಲದಿದ್ದರೆ ಹೇಗೆ? ಬಿಳಿ ಮತ್ತು ಕೆಂಪು ಬಣ್ಣದ ಚಿತ್ತಾಕರ್ಷಕ ವಿನ್ಯಾಸವಿರುವ ಘಾಗ್ರಾ ಧರಿಸಿ, ಮೂಗಿಗೆ ದೊಡ್ಡ ರಿಂಗ್ ಹಾಕಿಕೊಂಡು, ಲಜ್ಜೆ ನಟಿಸುತ್ತಾ ಮೆಲ್ಲಗೆ ನಡೆಯುತ್ತಾ ಪ್ರೇಕ್ಷಕರತ್ತ ತಣ್ಣನೆಯ ನಗು ಬೀರಿದಳು. ಹೊಟ್ಟೆ ತೋರಿಸುತ್ತಾ ಬಂದವಳು ಇವಳೇ ಅಲ್ಲವೆ. ಈಗ ಅದೆಷ್ಟು ಮುದ್ದಾಗಿ ಕಾಣುತ್ತಾಳೆ ಎಂದುಕೊಂಡ ಮನಸ್ಸುಗಳ ಪಿಸುಮಾತು ಸ್ಪಷ್ಟವಾಗಿ ಕೇಳುತ್ತಿತ್ತು. ಉಡುಪಿನಿಂದ ಮದುಮಗಳ ಕಳೆ ಅವಳ ಮುಖಕ್ಕೆ. ರೂಪದರ್ಶಿಯರು ತೊಟ್ಟ ಒಂದೊಂದು ಬಣ್ಣವೂ ಕಣ್ಣಿಗೆ ಮುದ ನೀಡುತ್ತಿತ್ತು. ನೀಲಿ, ಹಸಿರು, ಹಳದಿ, ಕೆನೆಬಣ್ಣದ ಉಡುಪು ಎಲ್ಲರನ್ನೂ ಆಕರ್ಷಿಸುತ್ತಿತ್ತು. ನೀಲಿ ಬಣ್ಣದ ಸಲ್ವಾರ್ ಧರಿಸಿ ಬಂದ ಆ ರೂಪದರ್ಶಿಯ ಕುತ್ತಿಗೆಯ ಬಳಿಯ ವಿನ್ಯಾಸ ಕಂಠಭರಣದ ಹಂಗಿಲ್ಲದೇ ಬೀಗುತ್ತಿತ್ತು.ರೂಪದರ್ಶಿಯರು ಹೋಗುತ್ತಿದ್ದಂತೆಯೇ ಅಭಿಷೇಕ ಭಾಸ್ಕರ್ ಎಂಬ ಯುವಕ ವೇದಿಕೆಗೆ ಬಂದರು. ರೂಪದರ್ಶಿಯರನ್ನು ನೋಡಿದ್ದ ಕಣ್ಣಗಳು ಇವರೇನು ಮಾಡುತ್ತಾರೆ ಎಂಬ ಉದಾಸೀನದಿಂದ ಸಮಯ ಎಷ್ಟಾಯಿತೆಂದು ನೋಡಲು ಶುರು ಮಾಡಿದವು. `ಗಡಿಯಾರ ನೋಡಬೇಡಿ, ನನ್ನನ್ನು ನೋಡಿ' ಎಂದು ಎಲ್ಲರನ್ನು ತಮ್ಮತ್ತ ಸೆಳೆಯಲು ಮಾತಿನ ಚಟಾಕಿ ಹಾರಿಸಿದರು. ಬಾಯಲ್ಲಿ ಸಂಗೀತದ ಉಪಕರಣಗಳ ಶಬ್ದ ಮಾಡುವ `ಬೀಟ್ ಬಾಕ್ಸಿಂಗ್' ಶುರು ಮಾಡಿದರು. ಐದೇ ನಿಮಿಷದಲ್ಲಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡರು. ಜನರಿಂದ ಹಾಡು ಹೇಳಿಸಿಕೊಂಡು ಅದಕ್ಕೆ ತಕ್ಕ ಬೀಟ್ ಬಾಕ್ಸಿಂಗ್ ನುಡಿಸಿದರು. ಬಾಯಿ, ತುಟಿ, ನಾಲಿಗೆ, ಸ್ವರ ಇವಿಷ್ಟನ್ನೇ ಬಳಸಿಕೊಂಡು ಅವರು ಮಾಡಿದ ಚಮತ್ಕಾರ ಮಕ್ಕಳನ್ನು ರಂಜಿಸಿತ್ತು.`ಮೇರೆ ಫೋಟೋಂ ಕೋ', `ಹಲ್ಕಟ್ ಜವಾನಿ' ಹಿಂದಿ ಹಾಡುಗಳಿಗೆ ನೃತ್ಯ ತಂಡದ ಹುಡುಗ-ಹುಡುಗಿಯರು ಮೈ ಚಳಿ ಬಿಟ್ಟು ಕುಣಿದರು.ಮತ್ತೆ ವೇದಿಕೆಯ ಮೇಲೆ `ಚಲಿಯಾ ಚಲಿಯಾ' ಹಿಂದಿ ಹಾಡಿನ ತುಣುಕೊಂದನ್ನು ಗುನುಗುತ್ತಾ ಇಂಚರ ಮತ್ತು ರೂಪದರ್ಶಿಗಳು ಬಂದರು. ಬೆಕ್ಕಿನ ನಡಿಗೆ ನಡೆಯುತ್ತಾ ನಗುವುದಕ್ಕೂ ಅತ್ತಿತ್ತ ನೋಡುವ ರೂಪದರ್ಶಿಗಳು `ಚಲಿಯಾ ಚಲಿಯಾ' ಹಾಡಿಗೆ ಮೈ ಕುಣಿಸಿದರು, ಬಾಯಿತುಂಬಾ ನಕ್ಕರು.

 

ಪ್ರತಿಕ್ರಿಯಿಸಿ (+)