ಹೆಡ್ಲಿ ಮಾತನ್ನು ನಂಬುವಂತಿಲ್ಲ: ಪಾಕ್

ಸೋಮವಾರ, ಜೂಲೈ 22, 2019
27 °C

ಹೆಡ್ಲಿ ಮಾತನ್ನು ನಂಬುವಂತಿಲ್ಲ: ಪಾಕ್

Published:
Updated:

ಇಸ್ಲಾಮಾಬಾದ್ (ಪಿಟಿಐ): `ಲಷ್ಕರ್- ಎ- ತೊಯ್ಬಾದ ಗೂಢಚಾರ ಹಾಗೂ ಮುಂಬೈ ದಾಳಿ ಪ್ರಕರಣದ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ವಿಶ್ವಾಸಾರ್ಹ ವ್ಯಕ್ತಿಯಲ್ಲ. ಆತ ಒಬ್ಬ ಅಪರಾಧಿ. ಆದ್ದರಿಂದ ಅವನ ಮಾತುಗಳನ್ನು ನಂಬುವಂತಿಲ್ಲ~ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.ಅಮೆರಿಕದಲ್ಲಿ ಬಂಧನದಲ್ಲಿರುವ ಹೆಡ್ಲಿ, ಮುಂಬೈ ದಾಳಿಗೆ ಐಎಸ್‌ಐ ಹೊಣೆ ಎಂದು ವಿಚಾರಣೆ ವೇಳೆ ಬಹಿರಂಗಪಡಿಸಿ ಸುಮಾರು ಒಂದು ವಾರ ಕಳೆದರೂ ಯಾವುದೇ ಹೇಳಿಕೆ ನೀಡದೆ ಅಚ್ಚರಿಗೆ ಕಾರಣವಾಗಿದ್ದ ಪಾಕಿಸ್ತಾನ ಇದೇ ಮೊದಲ ಬಾರಿಗೆ ಈ ಪ್ರತಿಕ್ರಿಯೆ ನೀಡಿದೆ.`ಹೆಡ್ಲಿ ತನ್ನ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಾದ ಸಾಕ್ಷ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ~ ಎಂದು `ನ್ಯೂಸ್ ವೀಕ್~ ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.ಮುಂಬೈನಲ್ಲಿ ದಾಳಿ ನಡೆಯುವ ಮುನ್ನ ಸ್ಥಳ ಗುರುತಿಸಲು ತನಗೆ ಐಎಸ್‌ಐನ ಮೇಜರ್ ನಿರ್ದೇಶನ ನೀಡಿದ್ದರು ಎಂಬ  ಹೆಡ್ಲಿ ಹೇಳಿಕೆ ಕುರಿತು ಸುದ್ದಿಗಾರರು ಗಮನಸೆಳೆದಾಗ,  `ಈ ಹೇಳಿಕೆ ಬಗ್ಗೆ ಹೆಡ್ಲಿ ಬಳಿ ಸೂಕ್ತ ದಾಖಲೆಗಳಿವೆಯೇ~ ಎಂದು ಮರು ಪ್ರಶ್ನಿಸಿದರು.`ಮುಂಬೈ ಮೇಲಿನ ದಾಳಿ ವಿಷಯದಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಭಾರತಕ್ಕೂ ಅರಿವಿದೆ. ಆದಾಗ್ಯೂ ಈ ಸಂಬಂಧ ಏಳು ಜನರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ~ ಎಂದರು.`ಸಂಜೌತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಯಲ್ಲಿ ಐಎಸ್‌ಐ ಪಾತ್ರದ ಬಗ್ಗೆ ಪುಕಾರು ಎಬ್ಬಿಸಲಾಗಿತ್ತು. ಆದರೆ ಐಎಸ್‌ಐ ನಿರ್ದೋಷಿ ಎಂಬುದು ನಂತರ ಸಾಬೀತಾಗಲಿಲ್ಲವೇ ಎಂದ ಮಲಿಕ್, ಇದೇ ತೆರನಾಗಿ ಮುಂಬೈ ದಾಳಿಯ ಪ್ರಕರಣದಲ್ಲೂ ನ್ಯಾಯಾಲಯದ ಫಲಿತಾಂಶ ಹೊರಹೊಮ್ಮುತ್ತದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಾಕಿಸ್ತಾನದಲ್ಲಿನ ಬಂಧಿತರ ವಿಚಾರಣೆ ವಿಳಂಬ ಗತಿಯಲ್ಲಿ ಸಾಗುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ, `ಈ ಸಂಬಂಧ ನಾವು ಭಾರತಕ್ಕೆ ಸೂಕ್ತ ಸಾಕ್ಷ್ಯ ಒದಗಿಸುವಂತೆ ಕೇಳಿದ್ದೇವೆ. ಆದರೆ ಇನ್ನೂ ಆ ಬಗ್ಗೆ ನಮಗೆ ಸೂಕ್ತ ದಾಖಲೆ ಲಭ್ಯವಾಗಿಲ್ಲ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ನ್ಯಾಯಾಲಯದ ಆದೇಶದ ಅನುಸಾರವೇ ಬಿಡುಗಡೆ ಮಾಡಲಾಗಿದೆ~ ಎಂದು ಪ್ರತಿಕ್ರಿಯಿಸಿದರು.`ತಾಲಿಬಾನ್ ಮತ್ತು ಉಗ್ರರ ಗುಂಪುಗಳಿಗೆ ವಿದೇಶಿ ಹಣದ ನೆರವು ದೊರೆಯುತ್ತಿರುವುದು ಕೇವಲ ಊಹೆಯಲ್ಲ. ಇದು ನಿಜ~ ಎಂದೂ ಮಲಿಕ್ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇತ್ತೀಚೆಗೆ ಭಾರತಕ್ಕೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋದಾಗ ತಾವು ಇಂತಹ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅವರ ಜೊತೆ ಮಾತನಾಡಿದ್ದಾಗಿಯೂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry