ಶುಕ್ರವಾರ, ಮೇ 14, 2021
31 °C

`ಹೆಣಗಳ ರಾಶಿ ಮೇಲೆಯೇ ಮಲಗಿದ್ದೆವು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಐಎಎನ್‌ಎಸ್): ನಾಲ್ಕು ದಿನಗಳಿಂದ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ, ಸ್ವಂತ ಊರುಗಳಿಗೆ ತೆರಳುತ್ತೇವೋ ಇಲ್ಲವೋ ಎಂಬ ಭಯ. ಜೊತೆಯಲ್ಲಿ ಬಂದವರು ಕಾಣದಿರುವ ಆತಂಕ...ಉತ್ತರಾಖಂಡದಲ್ಲಿ ಉಂಟಾದ ಜಲಪ್ರಳಯದಲ್ಲಿ ಸಿಲುಕಿರುವ ಸಂತ್ರಸ್ತರ ಮನದಲ್ಲಿ ಇಂತಹ ಆಂತಕಗಳ ಪಟ್ಟಿ ಬೆಳೆಯುತ್ತಲೇ ಇದೆ. ಸಂತ್ರಸ್ತರಲ್ಲಿ ಒಂದಷ್ಟು ಜನರನ್ನು  ಹೆಲಿಕಾಪ್ಟರ್ ಮೂಲಕ ಡೆಹ್ರಾಡೂನ್‌ಗೆ ತಲುಪಿಸಲಾಯಿತು. ಸಾವನ್ನು ಗೆದ್ದು ಬಂದವರ ಮಾತುಗಳು ಇಲ್ಲಿವೆ.ಎಲ್ಲೆಲ್ಲೂ ಪ್ರವಾಹ, ಭೂಕುಸಿತ, ಪ್ರವಾಹ, ರಸ್ತೆ ಮಾರ್ಗ ಬಂದ್, ಸೇತುವೆಗಳಿಗೆ ಹಾನಿ ಹೀಗೆ ಸಮಸ್ಯೆಗಳ ಸರಮಾಲೆ ಎದುರಾಗಿ ಇನ್ನಿಲ್ಲದ ಬವಣೆ ಅನುಭವಿಸುವ ಸ್ಥಿತಿ ನಮ್ಮದಾಗಿತ್ತು. ಇನ್ನೂ ಅನೇಕ ಜನ ಐದು ದಿನಗಳಿಂದ ಆಹಾರ, ನೀರು ಸಿಗದೆ ಕಂಗಾಲಾಗಿದ್ದಾರೆ. ಐದು ರೂಪಾಯಿ ಬಿಸ್ಕತ್ ಪ್ಯಾಕ್ ರೂ 200. ನೀರಿನ ಬಾಟಲಿಗೆ ರೂ 100 ತೆತ್ತು ಕೊಳ್ಳುವ ಪರಿಸ್ಥಿತಿ ಅಲ್ಲಿಯವರದ್ದು.ಕುಟುಂಬದೊಂದಿಗೆ ಕೇದಾರನಾಥ ಯಾತ್ರೆಗೆ ಹೋಗಿದ್ದ ಬಿಹಾರದ ಮಾಜಿ ಸಚಿವ ಅಶ್ವನಿ ಕಮಾರ್ ಚೌಬಿಯಾ `ಶವಗಳ ಮೇಲೆ ಮಲಗುವ' ಪರಿಸ್ಥಿತಿ ಎದುರಾದ ಘೋರ ಅನುಭವವನ್ನು ಹಂಚಿಕೊಂಡಿದ್ದಾರೆ.`ಕಣ್ಣೆದುರಲ್ಲೇ ಅನೇಕ ಜನ ಸಾವಿನ ಮನೆ ಸೇರುವ ದೃಶ್ಯ ಎದುರಿಗಿದ್ದರೂ ಏನು ಮಾಡಲಾಗದ ಅಸಾಹಯಕತೆ. ಶವಗಳ ಮೇಲೆಯೇ ಮಲಗಿ ನಮ್ಮ ಜೀವವನ್ನು ಉಳಿಸಿಕೊಳ್ಳುವ ದುಸ್ಥಿತಿ ಎದುರಾಯಿತು. ಅಲ್ಲಿರುವವರೆಗೂ ನಾವೆಷ್ಟು ದಿನ ಸುರಕ್ಷಿತ ಎಂಬ ಪ್ರಶ್ನೆ ಕಾಡುತಿತ್ತು. ಇಲ್ಲಿಗೆ ಬಂದಿಳಿದ ಮೇಲೆಯೇ ಬದುಕುವ ಆಸೆ ಬಂದದ್ದು'

`ನನ್ನನ್ನೂ ಒಳಗೊಂಡಂತೆ ತಂಡದ 5 ಜನರಿಗೆ ಒಂದು ಹೊತ್ತಿನ ಊಟಕ್ಕೆ ರೂ 5 ಸಾವಿರ ತೆರಬೇಕಾಯಿತು.ಅಷ್ಟು ಹಣ ಕೊಟ್ಟು ಕೊಂಡುಕೊಳ್ಳದೆ ಬೇರೆ ದಾರಿಯಿರಲಿಲ್ಲ. ಕೈಯಲ್ಲಿ ಹಣ ಖಾಲಿಯಾಗುವವರೆಗಾದರೂ ಹೊಟ್ಟೆ ತುಂಬಲಿ ಎಂಬ ನಿರ್ಧಾರಕ್ಕೆ ಬದಿದ್ದೆವು' ಎಂದು ಪರಿಸ್ಥಿತಿಯ ಘೋರತೆಯನ್ನು ವಿವರಿಸುತ್ತಾರೆ ಉತ್ತರ ಪ್ರದೇಶದ ನೂತನ್ ಶುಕ್ಲಾ.ನನ್ನ ಜೀವಿತಾವಧಿಯಲ್ಲಿ ಮತ್ತೆ ಇತ್ತ ಬರುವುದಿಲ್ಲ: `ಕಳೆದ ನಾಲ್ಕು-ಐದು ದಿನಗಳಿಂದ ಕಂಡ ದೃಶ್ಯಗಳು ಎಂದೂ ಮರೆಯಲಾಗದ ದಃಸ್ವಪ್ನವಾಗಿ ಕಾಡುತ್ತಿವೆ. ಬದುಕುಳಿದು ಬಂದಿದ್ದಕ್ಕೆ ದೇವರಿಗೆ ನಮನ ಸಲ್ಲಿಸುತ್ತೇನೆ. ಇನ್ನೆಂದೂ ಅತ್ತ ಕಡೆ ಪ್ರವಾಸ ಬೆಳೆಸುವುದಿಲ್ಲ. ಅತಿ ಶೀತ, ಆಯಾಸ, ಹಸಿವಿನಿಂದ ಕಣ್ಣೆದುರಲ್ಲೇ  24ಕ್ಕೂ ಅಧಿಕ ಮಂದಿ ಪ್ರಾಣ ತೆತ್ತರು' ಎಂದು ನಿಟ್ಟುಸಿರು ಬಿಟ್ಟರು ರಾಜಸ್ಥಾನದ ನಂದಕಿಶೋರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.