ಗುರುವಾರ , ಮೇ 19, 2022
21 °C

ಹೆಣುತ ತಣು ಮಣದೊಳಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿ. ಎನ್. ಕೃಷ್ಣಮಾಚಾರ್ಮುಳ್ಳೂರು ಮಾರವ್ವನಾಣೆ! ಕಲಿಯೂರು ಕಾಳವ್ವನಾಣೆ! ಬ್ರಹ್ಮಾಂಡವನ್ನೆ ಬುಗುರಿಯಾಡಿಸಿದರೂ ನಮ್ಮೂರಿನಂಥ ಮತ್ತೊಂದೂರು ಕಾಣೆ; ಇದು ಬೇಸಿಗೆ ಬೆಳುದಿಂಗಳಂತೆ ತಂಪು. ಚಳಿಗಾಲದಲ್ಲಿ ಮಳೆ; ಮಳೆಯಲ್ಲಿ ಬೆಚ್ಚನೆಯ ಬಿಸಿಯುಸಿರು. ಎಲ್ಲ ಪುಕ್ಕಟೆ! ಯಾರಿಗುಂಟು ಯಾರಿಗಿಲ್ಲ! ಇಲ್ಲಿ ಅರಸನ ಅಂಕೆಯಿಲ್ಲ, ಪುರುಷನ ಶಂಕೆಯಿಲ್ಲ. ಕಾವೇರಿ, ನಿಮ್ಮೂರಿನಲ್ಲೂ ಹರಿದಾಳು. ಆದರೆ ನಮ್ಮೂರಿನಂತಲ್ರಿ. ಒಂದಡಿ ನೀರಿನೊಳಗೆ, ಅಪರಂಜಿ ಮರಳಿನ ಕಣಗಳ ಮೇಲೆ ಕೈಯೂರಿ ಅಂಗಾತ ಮಲಗಿದ್ದುಂಟೆ ಅಲ್ಲಿ? ಇಲ್ಲಿ ಮಲಗಿ ನೋಡಿ. ಕೋಲಾರದ ಕರೆಕಂಬಳಿ ಹೊದ್ದು ಮುಸುಕಿನೊಳಗೆ ಮುಲುಗಿದಂತೆ ಮಜವೋ ಮಜ. ಏನಾದರೇನು, ಕೆಟ್ಟು ಪಟ್ಟಣ ಸೇರಿದನಲ್ಲೋ ಮಲೆಯ ಮಾದೇವ!ಅದೊಂದು ಬೇಸಿಗೆ. ನಡುರಾತ್ರಿಯಲ್ಲಿ ಗಿರಿರಾಜ ಕೋಳಿ ‘ಕೊಕ್ಕರೆ ಕೋ’ ಎಂದು ಕೂಗಿದರೂ ಅದು ಮುಂಜಾವ ಎಂದೇ ತಿಳಿದು ಏಳಬೇಕು. ಏಕೆಂದರೆ ಅದು ಮತ್ತೆ ಕೂಗಲಾರದು. ಅದಕ್ಕೆ ನಿದ್ದೆ ಬೇಕು. ಪ್ರಶ್ನೆ ಅದಲ್ಲ. ಕೋಳಿ ಯಾಕಾದರೂ ಕೊಕ್ಕರೆಯ ಹೆಸರು ಹಿಡಿದೇ ಕೂಗುತ್ತದೆ? ಕೋಳಿ ‘ಕೋ’ ಎಂದು ಮಗ್ಗುಲಲ್ಲೆ ಮಲಗಿರುವ ಹುಂಜವನ್ನು ಎಬ್ಬಿಸಬಾರದೇಕೆ? ಇದೂ ಒಂದು ನಮೂನೆ ಕೋಳಿ - ಕೊಕ್ಕರೆಯ ಕಳ್ಳ ಪ್ರಣಯವೆ ಎಂದು ನನ್ನ ಪಕ್ಕದಲ್ಲಿ ಕುಳಿತು ಸುಗಮ ಸಂಗೀತ ಕೇಳುತ್ತಿದ್ದ ಯುವ ಕವಯಿತ್ರಿ (ನನ್ನ ಸಾರಸ್ವತ ಗೆಳತಿ)ಯನ್ನು ಕೇಳಿದೆ. ಅವಳು ಸಿಡಿದೆದ್ದಳು. ‘ಶಟಪ್ ಡೊಂಟ್ ಬಿ ಸಿಲ್ಲಿ’ ಇದು ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿ ಅಸಹ್ಯ ಚಿಂತನೆಗೂ, ಅನ್ಯಭಾಷೆಗೂ ಅವಕಾಶವಿಲ್ಲ. ‘ಐ ಹೇಟ್ ಯೂ’ ಎನ್ನುತ್ತ ಕುರ್ಚಿ ಬಿಟ್ಟು ಮುಂದಣ ಸಾಲಿನಲ್ಲಿ ಆಗಷ್ಟೆ ತಮ್ಮ ಶತಾಬ್ಧಿ ಆಚರಿಸಿ ಸಮ್ಮೇಳನಕ್ಕೆ ಬಂದಿದ್ದ ಉದಯೋನ್ಮುಖ ಕವಿಯೋರ್ವರ ಪಕ್ಕ ಕುಳಿತಳು. ನಾನು ಎಸ್.ಎಂ.ಎಸ್. ಕಳುಹಿಸಿದೆ. ‘ಕೊಟ್ಟ ಕುರ್ಚಿಯಲ್ಲಿ ಕೂರದೆ ಬಿಟ್ಟ ಕುರ್ಚಿಯಲ್ಲಿ ಕೂರುವವಳು ವೀರಳೂ ಅಲ್ಲ ಧೀರಳೂ ಅಲ್ಲ’ ಎಸ್.ಪಿ.ಬಿ. ಅನುಭವಿಸಿ ಹಾಡುತ್ತಿದ್ದರು - ‘ಕುರಿಗಳು ಸಾರ್ ಕುರಿಗಳು/ ನಾವ್ ಕುರಿಗಳು, ನೀವ್ ಕುರಿಗಳು’/ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಎವೆಯಿಕ್ಕದೆ ಕೇಳುತ್ತಿದ್ದರು. ಕಣ್ಣೆಲ್ಲ ಕಿವಿಯಾಗಿ, ಸಮಸ್ಯೆ ಅದಲ್ಲ ನನ್ನ ಯುವ ಗೆಳತಿ  ಕ್ಷಮಿಸಿ- ಯುವ ಕವಯಿತ್ರಿ ಗೆಳತಿ ಅವಳಿಗೂ ಹೆಚ್ಚು ಕಡಿಮೆ ನನ್ನಷ್ಟೆ ವಯಸ್ಸು. ಸ್ಪಿರಿಟ್‌ನಲ್ಲಿ ನನ್ನಂತೆಯೇ ಎಳಸು. ನಳಿದೋಳಿನ ಮೇಲೆ ನಾನು ಗಲ್ಲವಿಟ್ಟು ಕೇಳಬಾರದಿತ್ತು. ಆಕೆ ಕೊಸರಿಕೊಂಡು ಎದ್ದ ಗಲಿಬಿಲಿಯಲ್ಲಿ ನನ್ನೆರಡು ಹಲ್ಲು ಕಳಚಿ ದಿಗ್ದಂತಿಯಾದೆ (ದಿಕ್ಕುಕೆಟ್ಟದಂತ ಪಂಕ್ತಿಯುಳ್ಳವ) ಬೇಂದ್ರೆ ‘ಗಂಗಾವತರಣ’ ಮುಗಿಯುತ್ತಿದ್ದಂತೆ ಆಕೆ ಮತ್ತೆ ಎದ್ದು ನನ್ನೆಡೆಗೆ ಬಂದು ‘ಸಾರಿ... ನೀನೇನೋ ಹೇಳುತ್ತಿದ್ದೆ, ನಿಮ್ಮೂರ ಗಿರಿರಾಜ ಕೋಳಿಯ ಕತೆ ಹೇಳು’ ಎಂದು ಅಲವತ್ತು ಕೊಂಡಳು. ಹರಳೆಣ್ಣೆ ಸವರಿದ ಜಾರು ಬಂಡೆಯ ಮೇಲೆ ಅಂಡೂರಿದಂತಾಗಿತ್ತು ನನ್ನ ಅವಸ್ಥೆ. ಕತೆ ಎತ್ತೆತ್ತಲಾಗೋ ಹೋಗುತ್ತಿತ್ತು. ಹ್ಞಾ! ನೆನಪಾಯಿತು ಆ ನಡುರಾತ್ರಿ ಗಿರಿರಾಜ ಕೋಳಿ ‘ಕೊಕ್ಕರೆ ಕ್ಕೋ’ ಎಂದು ಕೂಗಿದಾಗ ನಮ್ಮಪ್ಪ ‘ಇದು ಮುಂಜಾವ’ ಎಂದು ತಲೆಗೆ ಉತ್ತರೀಯ ಸುತ್ತಿ ಕಿವಿಗೆ ಜನಿವಾರ ಸುತ್ತಿ ಪಂಚೆ ಮೇಲೆತ್ತಿ ಕಟ್ಟಿ ಹೊರಟ. ಕೈಯಲ್ಲೊಂದು ಹಿತ್ತಾಳೆ ಚೊಂಬು. ನಮ್ಮಜ್ಜಿ ಬಿಟ್ಟಾಳೆ! ‘ತಡಿಯೋ ನರಸಿಂಹ. ನಾನೂ ಕಾವೇರಿಗೆ ಹೋಗಬೇಕು. ಆ ಸೀತಮ್ಮನೊಡನೆ ಬರುತ್ತೇನೆ ನಿನ್ನ ಜೊತೆ’ - ಕಂಕುಳಲ್ಲಿ ಮಡಿ ಸಂಚಿ ಸಿಕ್ಕಿಸಿ, ಚಿದಂಬರ ನಟರಾಜನ ಪೋಸ್ ಕೊಟ್ಟು ಮುನ್ನಡೆದಳಾ ಮಹಾತಾಯಿ. ಕಾವೇರಿಗೆ ಕಟ್ಟೆಗೋ ಹೋಗಬೇಕಿದ್ದರೆ ಪರಿವಾರ ಕೇರಿ ದಾಟಿ, ಉಪ್ಪಲಿನ ಕೇರಿ ಮೀಟಿ ಮಂಟಪ ತಡವಿ, ಮುಂದೆ ಎಡವಿಬಿದ್ದರೆ ಕಾವೇರಿ, ಹಿಂದೆಯೇ ಉಳಿಯಿತೊಂದು ಪ್ರಭ ಹೊಂಡ - ಅದೇ ದಂಡಿನ ದಾರಿಯ ಕಟ್ಟೆ. ಪರಿವಾರದ ಕೇರಿಯ ತಿರುಗಣೆಯಲ್ಲಿ, ಹಿಂದಿನ ರಾತ್ರಿ ಶುರುವಾದ ಬಯಲಾಟ ನಡುರಾತ್ರಿಯನ್ನು ಮೀರಿ ಮುಂಜಾವ ಮುಗಿಯದಿದ್ದರೆ ಅದು ಆಟವೇ ಅಲ್ಲ. ಅಂದು ‘ಅಹಲ್ಯಾ’ ಶಾಪ ವಿಮೋಚನೆ’ ಶ್ರೀರಾಮ ಚಂದ್ರ ಅಹಲ್ಯೆಗೆ ಪೊಡಮಟ್ಟು ಗೌತಮನಡಿಗೆ ಶಿರವಿಟ್ಟು ಪ್ರಾರ್ಥಿಸುತ್ತಾನೆ.  ‘ಹೆಣುತ ತಣುಮಣದೊಳಗೆ ಹೇಚಣೆಯ ಮಾಡಿ - ಅಣ್ಣಪ್ಪಿಂಕ್ರ ಸುಣ್ಣ ಕೊಡಯ್ಯ - ಮುಣಿಪ ಗೌತಮಣಣ್ಣು ಹಿಣಯದಿಂ ಕೇಳ್ದೋ’ ಕವಯಿತ್ರಿ ಕಕ್ಕಾಬಿಕ್ಕಿ ‘ಏನು ಭಾಷೆಯೋ ಇದು?’ ನಾನೆಂದೆ - ‘ನೋಡೆ ನೀನು ನವ್ಯ ಕವನ ಬರೀತೀಯೆ. ‘ಸಂಜೆ ಬಂತು ಸತ್ತ ಇಲಿಯ ನಾತದಂತೆ/ ದೆಹಲಿಯಲ್ಲಿ ಜಡಿ ಮಳೆ/ ಗಾಂಧಿ ಬಜಾರಿನಲ್ಲಿ ಕೊಡೆ ಹಿಡಿದಂತೆ/ ಧುತ್ತೆಂದು ನೆನಪಾಯಿತು. ನಮ್ಮಪ್ಪನ ಒದ್ದೆ ಹೆಣ’ ಇದು ತಾನೆ ನವ್ಯ? ನಮ್ಮ ಹಳ್ಳಿ ಹಾಡು ಹೀಗಿದೆ, ಕೇಳು - ‘ಎನುತ ತನುಮನದೊಳಗೆ ಯೋಚನೆಯ ಮಾಡಿ (ಅಣ್ಣಪಿಂಕ್ರ ಸುಣ್ಣ ಕೊಡಯ್ಯ ಎಂಬ ಸಾಲು ರಿಲೀಫ್ ಕೊಡೋಕ್ಕೆ) ಮುಂದೆ ಮುನಿಪ ಗೌತಮನನ್ನು ವಿನಯದಿಂ ಕೇಳ್ದ’ - ಇದು ಸಾಹಿತ್ಯ. ನಮ್ಮ ಹಳ್ಳಿಗರ ಉಚ್ಚಾರ ಕಚ್ಚಾ ಇರಬಹುದು. ಆದರೆ ಗಾಯನದಲ್ಲಿ ಜೋಶ್ ಇರುತ್ತೆ. ಸಂಭಾಷಣೆ ಮರೆತು ಹೋದಾಗೆಲ್ಲ, ಪಾತ್ರಧಾರಿ ‘ಯಾರಲ್ಲಿ?’ ಎಂದು ಕೇಳುತ್ತಾನೆ. ಭಟನೊಬ್ಬ ದಿಢೀರನೆ ಎದ್ದು ಬಂದು ‘ಏನಪ್ಪಣೆ?’ ಎಂದು ಕೇಳಬೇಕು. ಅವತ್ತು ರಾತ್ರೆ ಯಾಕೋ ಏನೋ - ಮುಂದೆ ಸಂಭಾಷಣೆಯೇ ಮರೆತು ಹೋಗಿ ಪಾತ್ರಧಾರಿ ಮೂರು ಮೂರು ಬಾರಿ ‘ಯಾರಲ್ಲಿ?’ ಎಂದು ಕೇಳುತ್ತಿದ್ದಂತೆ ಭಟ ‘ಹೇನಪ್ಪಣೆ?’ ಎಂದು ಕೇಳುತ್ತಿರುವಂತೆ, ಏಕತಾನತೆಯನ್ನು ಮುರಿಯಲು ನಮ್ಮಪ್ಪ ಪ್ರೇಕ್ಷಕರ ಗುಂಪಿನಿಂದ ‘ಮುಕು....ಮೂರ್ ನೀರ್ ತತ್ತಾ’ ಎಂದು ಕೂಗಿ, ಸದ್ದಿಲ್ಲದೆ ಜಾಗ ಖಾಲಿ ಮಾಡಿದ. ನಟ ವರ್ಗ ಹೌಹಾರಿ ‘ಯಾವನ್ಲೆ ಅವ? ಆಕ್ಲಾ ಆ ನನ್ಮಗನ್ ಬುಂಡೆ ಕೊಚ್ಚೋಗೋ ಅಂಗೆ’ ಅಂತ ಚೀರಾಡಿದರು. ಒಂದು ತುಣುಕು ಸಂಭಾಷಣೆಯೇ ಈಸೊಂದು ಖುಷಿ ಕೊಡುವಾಗ ಇನ್ನು ಇಡೀ ಬಯಲಾಟ? ಈ ಮಜ ಬೆಂಗಳೂರಿನಲ್ಲಿ ಉಂಟೆ ಗೆಳತಿ? ಅಹೋ! ಧಿಕ್ ನವ್ಯಂ!ಆ ಯುವ ಕವಯಿತ್ರಿಯ ಮೂಗು ಹುಳಿಯಾಯಿತು. ‘ನೀನೇನೆ ಹೇಳು ‘ಯೂ ಆರ್ ಲೌಸಿ ಗೈ’.  ಅಡಿಗರ ಅಡುಗೆ ಕಾಯ್ತಿದೆ ನಡಿ ನಡಿ ಎಂದು ಎಳೆದೊಯ್ದಳು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.