ಬುಧವಾರ, ಮೇ 12, 2021
19 °C

ಹೆಣ್ಣಿನ ಮೇಲೆ ದೌರ್ಜನ್ಯ ಸಾಮಾನ್ಯ ಸಂಗತಿಯೇ ?

ಜಿ.ಕೆ. ಗೋವಿಂದರಾವ್, ಬೆಂಗಳೂರು Updated:

ಅಕ್ಷರ ಗಾತ್ರ : | |

ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಮುಂತಾದವರ ಆದರ್ಶವನ್ನು ಮೈಗೂಡಿಸಿಕೊಂಡು ಸದಭಿರುಚಿಯ ಚಿತ್ರವನ್ನು ನೀಡುವುದರ ಮೂಲಕ ಕನ್ನಡಿಗರ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಳ್ಳುವುದರ ಬದಲಾಗಿ, ಪತ್ನಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಈಗ ಜೈಲು ಸೇರಿರುವ ನಟ ದರ್ಶನ್ ತಮ್ಮ ಸಾಂಸಾರಿಕ ದುರ್ವರ್ತನೆಯಿಂದಾಗಿ ನೈತಿಕ ಅಧಃಪತನಕ್ಕಿಳಿದಿದ್ದಾರೆ.ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಿಂಸೆ ನೀಡುವ ಮೂಲಕ ಪತ್ನಿಯ ಪಾಲಿಗೆ ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೆ ಖಳನಾಯಕರಾಗಿದ್ದಾರೆ, ನಟ ದರ್ಶನ್. ತನ್ನ ಕೌಟಂಬಿಕ ಕಲಹದಲ್ಲಿ ಕ್ರೂರವಾಗಿ ವರ್ತಿಸಿ ತಮ್ಮ ನೈಜ ರೌಡಿತನವನ್ನು ಹೊರಗೆಡವಿದ್ದಾರೆ.ಚಿತ್ರರಂಗದ ದಿಗ್ಗಜರಲ್ಲೊಬ್ಬರೆಂದು ಹೆಸರಾಗಿರುವ ಅಂಬರೀಷ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಹೆಣ್ಣಿನ ಬಗ್ಗೆ ಅವರಿಗಿರುವ ಮನೋಧೋರಣೆ ಎಂಥದ್ದು ಎಂಬುದು ತಿಳಿಯುತ್ತದೆ.ಗಂಡ ಹೆಂಡತಿಯ ಮೇಲೆ, ಮಗ ತಾಯಿಯ ಮೇಲೆ ಹಲ್ಲೆ ಮಾಡುವುದು ಅವರ ದೃಷ್ಟಿಯಲ್ಲಿ ಸಾಮಾನ್ಯವಾದ ಸಂಗತಿಯಂತೆ!

ಅಷ್ಟಕ್ಕೂ ಈ ಚಿತ್ರರಂಗದ `ಗಣ್ಯರು~ ಸಂಧಾನಕ್ಕೆ ಮುಂದಾಗಿರುವುದು ಯಾತಕ್ಕಾಗಿ ತಿಳಿಯುತ್ತಿಲ್ಲ.ಒಡೆದುಹೋಗಿರುವ ಸಂಸಾರವನ್ನು ಒಂದು ಮಾಡುವ ಪ್ರಯತ್ನವಿರಬಹುದಾದರೂ, ಅದರೊಳಗೆ ದರ್ಶನ್ ಪ್ರಭಾವ ಕೆಲಸ ಮಾಡುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಗಂಡನ `ಕೃಷ್ಣಾವತಾರ~ಗಳನ್ನು ನೋಡಿ, ನಿತ್ಯ ನೋವನ್ನು ಅನುಭವಿಸಿರುವ ಪತ್ನಿ ವಿಜಯಲಕ್ಷ್ಮೀಯವರಿಗೆ ಬೆಂಗಾವಲಾಗಿ ನಿಲ್ಲುವ ಬದಲಿಗೆ, ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ಪೋಲಿಸರ ಮೇಲೆ ಚಿತ್ರರಂಗದ ಗಣ್ಯರು ಪ್ರಭಾವ ಬೀರುತ್ತಿರುವುದು ಖಂಡನೀಯ.`ಕ್ಷಮಯಾ ಧರಿತ್ರಿ ನಾರಿ~ಎಂದು ಹೇಳುತ್ತಲೇ ಅವಳನ್ನು ಗುಲಾಮಳನ್ನಾಗಿಸುವ ಸಮಾಜದ ಹುನ್ನಾರ ಮುಂದುವರಿಯುತ್ತಲೇ ಇದೆ.

 

ಇಂದಿನ ಯುವಜನಾಂಗ ಹೆಚ್ಚಾಗಿ ಆಕರ್ಷಿತರಾಗುವುದು ಒಂದು ಸಿನಿಮಾ, ಮತ್ತೊಂದು ಕ್ರೀಡೆಯಿಂದ. ಆದರೆ ಲಾಂಗು, ಮಚ್ಚು, ಚೈನು ಹಿಡಿಯುವ ಗೂಂಡಾಗಿರಿ ಯಾರಿಗೂ ಮಾದರಿಯಾಗದಿರಲಿ. 

ರೂಪ, ಮೈಸೂರುಕುರುಡು ಕಾಂಚಾಣದ ಕುಣಿತವೋ..

ನಟ ದರ್ಶನ್ ಅವರ ಅಮಾನವೀಯ ವರ್ತನೆಗೆ ಸಿಗುತ್ತಿರುವ ಬೆಂಬಲ ನೋಡಿದರೆ ನಮ್ಮ ಜನತೆಯ ಅವಿವೇಕತನ ಹಾಗೂ ಧನಿಕರ ಪ್ರಭಾವ ಎಷ್ಟೆಂಬುದು ಅರಿವಾಗುವುದು. ನಟಿ ನಿಖಿತಾಳಿಗೆ ಮೂರು ವರ್ಷ ಚಿತ್ರರಂಗದಿಂದ ಬಹಿಷ್ಕಾರ ಹಾಕಿರುವುದು ಉಚಿತವೆನಿಸಿದರೆ, ದರ್ಶನ್‌ಗೂ ಅದೇ `ಕಾನೂನು~ ಜಾರಿಯಾಗಬೇಕು. ದರ್ಶನ್ ಮಾತ್ರ ಹೇಗೆ ಅಮಾಯಕ? ಎರಡೂ ಕೈ ಸೇರಿದರೆ ತಾನೆ ಚಪ್ಪಾಳೆ!ಸಿನಿಮಾರಂಗದಲ್ಲಿ ಇಂತಹ ಉದಾಹರಣೆಗಳನ್ನು ತೆಗೆದುಕೊಂಡು ನಿಷೇಧ ಹಾಕಿದರೆ ಬಹುತೇಕ ನಟ-ನಟಿಯರು ತಮ್ಮ ವೃತ್ತಿ ಕಳೆದುಕೊಂಡು ಮನೆಯಲ್ಲೇ ಕೂಡಬೇಕಾದೀತು.ಈ ಗಂಡ ಹೆಂಡಿರ ಜಗಳದಲ್ಲಿ ನಿಖಿತಾಳೆಂಬ ನಟಿಯ ನಡತೆಗೆ ಮಸಿ ಬಳಿದು ಅವಳ ಭವಿಷ್ಯಕ್ಕೆ ನಮ್ಮ ಸಿನಿಮಾರಂಗದ ಹಿತೈಷಿಗಳೇ ಧಕ್ಕೆ ತರುತ್ತಿದ್ದಾರೆ. ನಿಖಿತಾಳಿಗೆ ಮಾತ್ರ ಚಿತ್ರರಂಗ ನಿಷೇಧ ಹೇರುವುದರಿಂದ ಪ್ರಬಲ ವ್ಯಕ್ತಿಗಳ ಕಾಂಚಾಣ ಪ್ರಭಾವದಿಂದ ನಮ್ಮ `ಕಾನೂನು~ ಕುರುಡಾಗಿದೆ ಎಂಬುದು ಸಾಬೀತಾಗುತ್ತದೆ. ಇಷ್ಟಕ್ಕೂ ಯಾವ ಕಾನೂನು ಆಧರಿಸಿ ಈ ನಿಷೇಧ ಎಂಬುದನ್ನು ಚಿತ್ರರಂಗದ ಮಂದಿ ಜನತೆಗೆ ತಿಳಿಸುವರೇ?

 ಧಾರಿಣಿ ಎಚ್.ಬಿ.  ಬೆಂಗಳೂರು ಕಲಾವಿದ ದರ್ಶನ್‌ಗೆ ಒಂದು ಪತ್ರ


ಪ್ರಿಯ ದರ್ಶನ್,

ಕಳೆದ ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳಿಂದ ಕರ್ನಾಟಕದ ಸಾವಿರಾರು ಮಂದಿಯಂತೆ ನಾನೂ ವಿಚಲಿತಗೊಂಡಿದ್ದೇನೆ.

ಆದರೆ ನಿಮ್ಮ ಜೊತೆ ಮಾತನಾಡಬಹುದು ಎಂಬ ವಿಶ್ವಾಸ ನನ್ನದು.

 

ನೀವು ಇನ್ನೂ ತುಂಬ ಚಿಕ್ಕ ವಯಸ್ಸಿನ ಹುಡುಗ, ಕಲಾವಿದ; ನೀವು ಬೆಳೆಯಬೇಕಾದದ್ದು ಬೇಕಾದಷ್ಟಿದೆ. ಅನುಭವ, ಜೀವನ ದೃಷ್ಟಿಗಳು ಮತ್ತೂ ಮತ್ತೂ ವಿಶಾಲವಾಗಬೇಕಾಗಿದೆ. ಕಲಾವಿದನಿಗೆ ಅತ್ಯವಶ್ಯವಾದ ಮಾನವೀಯ ಗುಣಗಳನ್ನು ನಿಮ್ಮದನ್ನಾಗಿಸಿಕೊಳ್ಳಬೇಕಾಗಿದೆ.ನಿಮ್ಮ ವೈಯಕ್ತಿಕ ಬದುಕಿನಲ್ಲಿ ನಡೆದ ದುರದೃಷ್ಟದ ಪ್ರಸಂಗದ ಸತ್ಯಾಸತ್ಯತೆ ನಿಮಗೆ ಗೊತ್ತು, ನಿಮ್ಮ ಮನೆಯವರಿಗೆ ಗೊತ್ತು. ನಿಮ್ಮ ಅಂತಃಸಾಕ್ಷಿಯೇ ನಿಮಗೆ ಆಧಾರ. ಅದೂ ಅಲ್ಲದೆ ಈ ಇಡೀ ವಿಷಯ ನ್ಯಾಯಾಲಯದಲ್ಲಿದೆ.ನಾನು ನಿಮಗೆ ಸಲಹೆಯ ರೂಪದಲ್ಲಿ ಹೇಳಬೇಕೆಂದಿರುವ ಮಾತೇ ಬೇರೆ.

ನಿರ್ಮಾಪಕರ ಸಂಘವು ನಿಮ್ಮ ಮನೆಯಲ್ಲಿ ನಡೆದ ಘಟನೆಗೆ ಮತ್ತೊಬ್ಬ ಕಲಾವಿದೆ ನಿಖಿತಾ ಅವರನ್ನು ಜವಾಬ್ದಾರಿ ಮಾಡಿ ಅವರಿಗೆ ಮೂರು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಈ ಬಗ್ಗೆ ನಿಮಗೂ ಬೇಸರವಾಗಿರಲೇಬೇಕು. ಈಗ ನೀವು ಮಾಡಬೇಕಾದದ್ದು, ನನಗೆ ಅನ್ನಿಸುವಂತೆ, ಇಷ್ಟೆ:

1. ನಿಖಿತಾ ಅವರ ಮೇಲಿನ ನಿಷೇಧವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಬೇಕು.

2. ಅದು ಸಾಧ್ಯವಿಲ್ಲ ಎಂದರೆ ನಿಮಗೂ ಶಿಕ್ಷೆ ವಿಧಿಸಿ, ನಿಮ್ಮನ್ನೂ ನಿಷೇಧಗೊಳಿಸಿ ಎಂದು ಒತ್ತಡ ತರಬೇಕು.

3. ಈ ಎರಡೂ ಸಾಧ್ಯವಿಲ್ಲದಿದ್ದರೆ, ಈ ವಿಷಯದ ಕುರಿತಾಗಿ, ನಿಮ್ಮ ಮನಸ್ಸಮಾಧಾನಕ್ಕೆ ತಕ್ಕ ಹಾಗೆ ತೀರ್ಮಾನಗಳು ಆಗುವವರೆಗೂ ನೀವು ಯಾವ ಚಿತ್ರದಲ್ಲಿಯೂ ನಟಿಸುವುದಿಲ್ಲ ಎಂಬ ಸ್ವಯಂ ನಿಷೇಧವನ್ನು ಅನ್ವಯಿಸಿಕೊಳ್ಳಬೇಕು.

ಅಭಿಮಾನಿಗಳ ಕರತಾಡನ, ಶಿಳ್ಳೆ, ಜೈಕಾರಗಳು, ಕೊರಳಿಗೆ ಹಾಕುವ ಗಜಗಾತ್ರದ ಹಾರಗಳು, ಅಥವಾ ನಿಮ್ಮ ಹೆಸರಿನಲ್ಲಿ ನಡೆಸುವ ದಾಂಧಲೆಗಳು ಇವುಗಳಿಂದ ನೀವು ಪರವಶವಾಗಿ ಬಿಟ್ಟಿಲ್ಲವೆಂದು ನಾನು ನಂಬಿದ್ದೇನೆ.ಮನಸ್ಸಿನಾಳದ ನಮ್ಮ ದನಿ ಏನು ಹೇಳುತ್ತದೆ ಅಷ್ಟು ಮಾತ್ರ ಸತ್ಯ. ಕಲಾವಿದನೊಬ್ಬನಲ್ಲಿ ಅಂಜದೆ, ಅಳುಕದೆ ಇಡೀ ಸಮಾಜಕ್ಕೆ ಮುಖಕೊಟ್ಟು ಮಾತನಾಡುವ ಆತ್ಮವಿಶ್ವಾಸ ಅರಳುತ್ತ ಹೋಗಬೇಕಲ್ಲವೆ? ತೆರೆಯ ಮೇಲೆ ನ್ಯಾಯನಿಷ್ಠೆ, ದುಷ್ಟ ಶಿಕ್ಷಣ, ಸುಖೀ ಸಮಾಜ ಸೃಷ್ಟಿ - ಇಂಥ ಆದರ್ಶ ಪಾತ್ರಗಳಲ್ಲಿ ವಿಜೃಂಭಿಸುತ್ತೀರಿ.ಈ ಗುಣಗಳು ನಿಮ್ಮ ವ್ಯಕ್ತಿತ್ವದಲ್ಲಿಯೂ ಮೈಗೂಡಿದೆ ಎಂದು ತೋರಿಸಲು ಇದೊಂದು ಅವಕಾಶ. ಹಾಗಿಲ್ಲದಿದ್ದರೆ ಇವೆಲ್ಲ ಇಡೀ ಸುಳ್ಳುಲೋಕದ ಗಾಳಿಯಲ್ಲಿ ತೂರಿಬಿಟ್ಟ ಹೊಟ್ಟು, ದೂಳು ಮಾತ್ರವಾಗಿ ಬಿಡುತ್ತದೆ.ನಿಮ್ಮ ತಂದೆಯವರ ಜೊತೆ, ನಿಮ್ಮ ಜೊತೆ ಇಬ್ಬರ ಜೊತೆಯೂ ಅಭಿನಯಿಸಿ, ಬೆಳೆದ ತಾತ್ಕಾಲಿಕವಾದರೂ ಮರೆಯದ ದಿನಗಳ ಸಿಹಿ ಅನುಭವಗಳಿಂದ ಕೊಂಚ ಸ್ವಾತಂತ್ರ್ಯ ವಹಿಸಿ ಈ ಪತ್ರ ಬರೆಯುತ್ತಿದ್ದೇನೆ. ಅದೂ ಅಲ್ಲದೆ, ನಿಮಗಿಂತ ಹಲವು ದಶಕಗಳಷ್ಟೆ ವಯಸ್ಸಿನಲ್ಲಿ ಹಿರಿಯನೂ ಅಲ್ಲವೆ ನಾನು?

ಜಿ.ಕೆ. ಗೋವಿಂದರಾವ್, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.