ಶುಕ್ರವಾರ, ಜೂನ್ 18, 2021
28 °C

ಹೆಣ್ಣು ಭ್ರೂಣಹತ್ಯೆ, ಲಿಂಗ ತಾರತಮ್ಯ ನಿಲ್ಲಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಮನುಕುಲಕ್ಕೆ ಮಾರಕವಾಗಿರುವ ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ತಾರತಮ್ಯ ನಿಲ್ಲಬೇಕು. ಇಲ್ಲದಿದ್ದರೆ, ಪುರುಷ-ಸ್ತ್ರೀಯರ ಸಂಖ್ಯೆಯ ಅನುಪಾತ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಆತಂಕ ವ್ಯಕ್ತಪಡಿಸಿದರು.ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಅಧ್ಯಯನ ವೇದಿಕೆಗಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಾನವ ಹಕ್ಕು ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ತಾರತಮ್ಯ ನಿಲ್ಲದಿದ್ದರೆ ಮುಂದೊಂದು ದಿನ ಪುರುಷರಿಗೆ ಮದುವೆಯಾಗಲು ಮಹಿಳೆಯರೇ ಸಿಗುವುದಿಲ್ಲ. ಈಗಾಗಲೇ ರಾಜಸ್ತಾನದಲ್ಲಿ ಪ್ರತಿ ಸಾವಿರ ಪುರುಷರಿಗೆ 800 ಮಹಿಳೆಯರಿದ್ದಾರೆ.ಅಂತಹುದೇ ಪರಿಸ್ಥಿತಿ ಎಲ್ಲೆಡೆ ಬರುವ ದಿನ ದೂರ ಇಲ್ಲ. ಅದಕ್ಕೆ ಮೊದಲು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.ಇಂದು ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುವ ಪದ್ಧತಿ ರೂಢಿಯಲ್ಲಿದೆ. ಆದರೆ, ಶೀಘ್ರದಲ್ಲೇ ವಧುದಕ್ಷಿಣೆ ತೆತ್ತು ಮದುವೆ ಮಾಡಿಕೊಳ್ಳುವ ಕಾಲ ಬರಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.ಇಂದು ದೇಶದ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳಾಗಿ ಮಮತಾ ಬ್ಯಾನರ್ಜಿ, ಜಯಲಲಿತಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಮಾಯಾವತಿ ಕಾರ್ಯನಿರ್ವಹಿಸಿದ್ದಾರೆ. ಇವರೆಲ್ಲಾ ನಮಗೆ ಮಾದರಿಯಾಗಿದ್ದಾರೆ ಎಂದರು.ಶಿವಮೊಗ್ಗ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಎ. ಅನಲಾ ಮಾನವ ಹಕ್ಕು ಹಾಗೂ ಮಹಿಳೆಯರಿಗೆ ಕಾನೂನು ರಕ್ಷಣೆ, ಹರಿಹರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ. ಪೂರ್ಣಿಮಾ ಮಹಿಳಾ ಹಕ್ಕುಗಳು-ಸಬಲೀಕರಣ ಮತ್ತು ಮೈಸೂರಿನ ಸ್ತ್ರೀ ರೋಗ ತಜ್ಞೆ ಡಾ.ಎಸ್. ಸೌಮ್ಯಾ ತಾಯಿ-ಮಗುವಿನ ಬೆಳವಣಿಗೆ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಎಂ. ಮಲ್ಲಿಕಾರ್ಜುನ್, ಡಾ.ಬಿ.ಜಿ. ಚನ್ನೇಶ್, ಬಸವರಾಜಪ್ಪ, ರಾಘವೇಂದ್ರ, ಕೆ.ಬಿ. ಉಮಾಪತಿ, ಹರೀಶ್, ಡಿ.ಸಿ. ಪಾಟೀಲ್, ಪಾಂಡುರಂಗ, ಯು.ಬಿ. ಜಯಪ್ಪ ಇತರರು ಉಪಸ್ಥಿತರಿದ್ದರು.ಎ.ಎಸ್. ಗೀತಾ ಪ್ರಾರ್ಥಿಸಿದರು. ಶಾಂಭವಿ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ಟಿ. ಪವಾರ್ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ, ದೀಪಾ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.