ಸೋಮವಾರ, ಮಾರ್ಚ್ 1, 2021
23 °C

ಹೆಣ್ಣು ಮಕ್ಕಳಿಗಾಗಿ ಓಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ್ಣು ಮಕ್ಕಳಿಗಾಗಿ ಓಟ...

ಸೂರ್ಯೋದಯಕ್ಕೂ ಮುಂಚೆಯೇ ಎದ್ದು ಶಿಸ್ತಿನಿಂದ ಸಾವಿರಕ್ಕೂ ಹೆಚ್ಚು ಮಂದಿ ಓಟದ ಸ್ಪರ್ಧೆಗೆ ಅಣಿಯಾದರು. ಏಳು ವರ್ಷದವರಿಂದ ಎಪ್ಪತ್ತು ವರ್ಷ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡಿದ್ದರು. ನಾಮುಂದು ತಾಮುಂದು ಎಂದು ಗುರಿ ತಲುಪಲು ಮುಂದಾದ ಅವರು ಬರೋಬ್ಬರಿ 10 ಕಿಲೋ ಮೀಟರ್ ಓಡಿದರು.ಮಹಿಳಾ ಆರೋಗ್ಯ ಮತ್ತು ಫಿಟ್‌ನೆಸ್ ಕೇಂದ್ರ ಕಾಂಟೂರ್ಸ್‌ ಇಂಡಿಯಾ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ‘ಕಾಂಟೂರ್ಸ್‌ ವುಮೆನ್ಸ್‌ ಡೇ ರನ್‌’ನಲ್ಲಿ (10 ಮತ್ತು 5ಕೆ) ನಗರದ ವಿವಿಧ ಕಂಪೆನಿಗಳ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಬೆಳಿಗ್ಗೆ 6ಕ್ಕೆ ಕಬ್ಬನ್‌ ಪಾರ್ಕ್‌ನಿಂದ ಆರಂಭವಾದ ಜಾಗೃತಿ ಓಟ ಕಂಠೀರವ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.‘ಭಾರತೀಯ ಮಹಿಳೆಯರ ಸಬಲೀಕರಣಕ್ಕಾಗಿ ಎಲ್ಲ ವಯೋಮಾನದ ಮಹಿಳೆ ಮತ್ತು ಪುರುಷರಿಗಾಗಿ ಓಟ ಏರ್ಪಡಿಸಲಾಗಿತ್ತು. ನೋಂದಣಿ ಮೂಲಕ ಸಂಗ್ರಹವಾದ ಹಣದ ಒಂದು ಭಾಗ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ತೊಡಗಿಸಿಕೊಂಡ ‘ಆಶಾ’ ಫೌಂಡೇಶನ್‌ಗೆ ನೀಡಲಿದ್ದೇವೆ. ಆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತವೆ. ಕಾಂಟೂರ್ಸ್‌ ಇಂಡಿಯಾ ವಿಶ್ವದಾದ್ಯಂತ 750 ಫಿಟ್‌ನೆಸ್ ಕೇಂದ್ರಗಳನ್ನು ಒಳಗೊಂಡಿದೆ.ಹಲಸೂರು, ಕೋರಮಂಗಲ, ಆರ್‌.ಟಿ.ನಗರ, ಜಯಮಹಲ್‌ ಸೇರಿದಂತೆ ಬೆಂಗಳೂರಿನಲ್ಲಿ ಐದು ಕಡೆ ಕೇಂದ್ರಗಳಿವೆ. ಒಟ್ಟು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 25ರಿಂದ 55ವರ್ಷದೊಳಗಿನ ಮಹಿಳೆಯರು ನಮ್ಮ ಫಿಟ್‌ನೆಸ್ ಕೇಂದ್ರಕ್ಕೆ ಬರುತ್ತಾರೆ. ಹೆಚ್ಚಾಗಿ ತೂಕ ಇಳಿಸಿಕೊಳ್ಳಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಬರುತ್ತಾರೆ. ನಗರದಲ್ಲಿ 5ನೇ ವರ್ಷದ ಓಟದ ಸ್ಪರ್ಧೆ ಆಯೋಜಿಸಿದ್ದೇವೆ. ನಾನು ಸಹ ಮ್ಯಾರಥಾನ್ ಕ್ರೀಡಾಪಟು. ಪ್ರತಿ ವರ್ಷವೂ ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಕಾಂಟೂರ್ಸ್‌ ಇಂಟರ್‌ನ್ಯಾಷನಲ್‌ನ ನಿರ್ದೇಶಕಿ ಚಂದ್ರಾ ಗೋಪಾಲನ್.‘ಕೆಪಿಎಂಜಿ’, ‘ಸ್ಯಾಸ್‌ಕೆನ್‌’, ‘ಮೈಕ್ರೋಸಾಫ್ಟ್‌’, ‘ಐಬಿಎಂ’ ಹಾಗೂ ‘ಇನ್‌ಟು ಇಟ್’ ಸೇರಿದಂತೆ ನಗರದ ಅನೇಕ ಕಂಪೆನಿಗಳು, ಅದರಲ್ಲೂ ಸಾಫ್ಟ್‌ವೇರ್‌ ಕಂಪೆನಿಗಳ ಉದ್ಯೋಗಿಗಳು ಓಟದಲ್ಲಿ ಪಾಲ್ಗೊಂಡಿದ್ದರು. ಸದುದ್ದೇಶದ ಓಟದ ಸ್ಪರ್ಧೆಗೆ ವಯಸ್ಸು, ಲಿಂಗ ಭೇದವಿಲ್ಲದೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದ್ದರು.47 ನಿಮಿಷಕ್ಕೆ ಗುರಿ ತಲುಪಿದೆ

‘ನಾನು ವಾಸ್ತುಶಿಲ್ಪಿ. ರನ್ನರ್ಸ್‌ ಹೈ ಕ್ಲಬ್‌ನಿಂದ ಬಂದಿದ್ದೇನೆ. ಬೆಳಿಗ್ಗೆಯೇ ಎದ್ದು ಒಳ್ಳೆಯ ಪರಿಸರದಲ್ಲಿ ಓಡುವುದಕ್ಕೆ ಖುಷಿಯಾಗುತ್ತದೆ. ಬಹಳ ಮಂದಿ ಪಾಲ್ಗೊಂಡು ಚಿಯರ್‌ ಮಾಡಿದರು. ಒಳ್ಳೆ ಕಾರಣಕ್ಕಾಗಿ ಆಯೋಜಿಸಿರುವ ಈ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಕಬ್ಬನ್‌ ಪಾರ್ಕ್‌ನಲ್ಲಿ ಎರಡು ಸುತ್ತು ಓಡಿ ಅಲ್ಲಿಂದ ಕಂಠೀರವ ಕ್ರೀಡಾಂಗಣಕ್ಕೆ ಬಂದೆವು. 47 ನಿಮಿಷಕ್ಕೆ ಗುರಿ ತಲುಪಿದೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ಸ್ಪರ್ಧಿ ಡ್ಯಾರಿಯಸ್‌.ಖುಷಿ ನೀಡಿತು

‘ಬಳ್ಳಾರಿ ರಸ್ತೆಯ ವಿದ್ಯಾಶಿಲ್ಪ ಅಕಾಡೆಮಿಯಲ್ಲಿ ನಾಲ್ಕನೇ ತರಗತಿ ಅಭ್ಯಾಸ ಮಾಡುತ್ತಿದ್ದೇನೆ. 5 ಕಿಲೋ ಮೀಟರ್‌ ಸ್ಪರ್ಧೆಯಲ್ಲಿ ಪಾಲ್ಗೊಂಡೆ. 35 ನಿಮಿಷಕ್ಕೆ ಓಡಿದೆ. ಕೊನೆಕೊನೆಗೆ ಸುಸ್ತಾಯಿತು. ಆದರೆ ಅಪ್ಪ ಜೊತೆಯಲ್ಲಿದ್ದರಿಂದ ದಣಿವು ಮಾಯವಾಯಿತು’ ಎಂದು ಹೇಳುತ್ತಾನೆ ಶೆರಾಯ್‌.ಐದನೇ ಬಾರಿ ಅನುಭವ

‘ನಾನು ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಉದ್ಯೋಗಿ. ನಮ್ಮ ಕಂಪೆನಿಯಿಂದ ಬಹಳಷ್ಟು ಮಂದಿ ಭಾಗವಹಿಸಿದ್ದೆವು. 10 ಕಿಲೋ ಮೀಟರ್‌ ಸ್ಪರ್ಧೆಗೆ ಓಡಿದೆ.  ಪಿಂಕಥಾನ್‌, ಕಾವೇರಿ ಟ್ರೆಲ್‌ ಮ್ಯಾರಥಾನ್ ಸೇರಿದಂತೆ ಇದು ನನ್ನ ಐದನೇ ಓಟದ ಸ್ಪರ್ಧೆ. ವಾರಕ್ಕೆ ನಾಲ್ಕು ದಿನ 8ರಿಂದ 10 ಕಿಲೋ ಮೀಟರ್‌ ಓಡುತ್ತೇನೆ. ಹಾಗಾಗಿ ಈ ಸ್ಪರ್ಧೆ ಹೆಚ್ಚು ಕಷ್ಟವೆನಿಸಲಿಲ್ಲ. ಈ ಕಾರ್ಯಕ್ರಮದ ಉದ್ದೇಶ ಇಷ್ಟವಾಯಿತು. ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಆದ್ದರಿಂದ ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರು ಸುರಕ್ಷಿತ ನಗರ’ ಎನ್ನುತ್ತಾರೆ ಹಿಮಾನಿ ಗುಪ್ತಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.