ಬುಧವಾರ, ಏಪ್ರಿಲ್ 14, 2021
23 °C

ಹೆಣ್ಣು ಶಿಶು ಹತ್ಯೆಯ ಅಸಹಾಯಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಇಲ್ಲಿಯ ಕೆಲವು ಲಂಬಾಣಿ ತಾಂಡಾಗಳಲ್ಲಿ ಬಡತನ, ಅಜ್ಞಾನ ಮತ್ತು ಕುಟುಂಬಕ್ಕೆ ಗಂಡು ಮಗುವೇ ದಿಕ್ಕು ಎನ್ನುವ ನಂಬಿಕೆ ಮತ್ತಿತರ ಕಾರಣಕ್ಕೆ ಹೆಣ್ಣು ಶಿಶುಗಳನ್ನು ಕೊಲ್ಲುವ ಆಘಾತಕಾರಿ ಪ್ರಕರಣಗಳು ವರದಿಯಾಗುತ್ತಿವೆ.

ಅಜ್ಞಾನ, ಬಡತನದಿಂದ ಬಳಲುತ್ತಿರುವ ಲಂಬಾಣಿಗರು, ಗಂಡು ಮಗು ಕುಟುಂಬಕ್ಕೆ ದಿಕ್ಕಾಗುತ್ತಾನೆ ಎಂಬ ದೃಢ ನಂಬಿಕೆ ಹೊಂದಿದ್ದಾರೆ. ಬಾಣಂತನಕ್ಕೆಂದು ತವರಿಗೆ ತೆರಳುವ ಗರ್ಭಿಣಿಯರು ಹೆಣ್ಣು ಮಗು ಹುಟ್ಟಿದರೆ  ಮಗುವಿನ ಬಾಯಿಗೆ ಹತ್ತಿ ತುರುಕಿ, ಮೊಲೆ ಹಾಲು ಕುಡಿಸುತ್ತಾರೆ. ಒದ್ದೆಯಾಗುವ ಹತ್ತಿ, ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲು ಆಗದೇ ಮಗು ಸಾವನ್ನಪ್ಪುತ್ತದೆ. ಹೀಗೆ ನಿರ್ದಯವಾಗಿ ಹೆಣ್ಣು ಶಿಶು ಹತ್ಯೆ ಮಾಡಲು ಮನಸ್ಸಾಗದೇ ಗಂಡನ ಮನೆಗೆ ಮಗುವಿನೊಂದಿಗೆ ಬಂದರೆ ಅಲ್ಲಿ ಕಿರುಕುಳಕ್ಕೆ ಒಳಗಾಗಬೇಕಿದೆ.

ನಾಲ್ಕೈದು ಹೆಣ್ಣು ಮಕ್ಕಳು ಹುಟ್ಟಿದರೆ ಮಕ್ಕಳ ಲಾಲನೆ ಪೋಷಣೆ ಕಷ್ಟವಾಗುತ್ತದೆ ಎಂದು ಭಾವಿಸಿ ಹಸುಗೂಸುಗಳನ್ನೇ ಚಿವುಟಿ ಹಾಕುತ್ತಿದ್ದಾರೆ. ದುಡಿಯಲು ಕೆಲಸವಿಲ್ಲದ ಕಾರಣ ಶೇ 60ರಷ್ಟು ಮಂದಿ ಗುಳೆ ಹೋಗುವುದು ಸಾಮಾನ್ಯ. ಹೀಗಾಗಿ ಜೂನ್‌ನಿಂದ ಡಿಸೆಂಬರ್‌ವರೆಗೆ ತಾಂಡಾದಲ್ಲಿ ವಾಸ. ಉಳಿದ ದಿನಗಳಲ್ಲಿ ಮುಂಬೈ, ಹೈದರಾಬಾದ್, ಪುಣೆಗಳತ್ತ ಮುಖ ಮಾಡುತ್ತಾರೆ.

ಗುಡಿಸಲು ಹೋಲುವ ಮನೆಗಳಲ್ಲಿ ಅತ್ತೆ ಮಾವ, ಪತಿ, ಪತ್ನಿ ಹಾಗೂ ನಾಲ್ಕೈದು ಮಕ್ಕಳೊಂದಿಗೆ ವಾಸಿಸುವುದು ಇವರಿಗೆ ಅನಿವಾರ್ಯ. ಒಂದೇ ಕೋಣೆಯ ಚಿಕ್ಕ ಮನೆಯಲ್ಲಿಯೇ ದವಸ-ಧಾನ್ಯಗಳು, ಬಟ್ಟೆ- ಬರೆಗಳು, ಹಾಸಿಗೆ- ಹೊದಿಕೆಗಳಿಗೆ ಜಾಗ ಬಿಟ್ಟು, ಮೂಲೆಯಲ್ಲಿ ಒಲೆಯನ್ನಿಟ್ಟು ಅಡುಗೆ ಮಾಡಬೇಕು.  ಕಾಲು ಚಾಚುವುದಕ್ಕೂ ಜಾಗವಿಲ್ಲದಂತೆ ಮೈಮುದುಡಿಕೊಂಡೇ ಇರುಳು ಕಳೆಯಬೇಕು.

-ಇದು ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕೊಂಚಾವರಂ ಬಳಿಯ ಒಂಟಿಗುಡ್ಸಿ ತಾಂಡಾದ ಕವಿತಾ ತಾರಾಸಿಂಗ್ ದಂಪತಿಯ ವಾಸದ ಮನೆಯ ಚಿತ್ರಣ.

ಕವಿತಾ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಡು, ಒಂದು ಹೆಣ್ಣು ಮಗು ಸಾವನ್ನಪ್ಪಿದೆ. ವಾರದ ಹಿಂದೆ ಮತ್ತೊಂದು ಮಗುವಿಗೆ ಜನ್ಮವಿತ್ತಿದ್ದಾರೆ, ಅದು ಮಗು ಹೆಣ್ಣು. ಯಾರಿಗಾದರೂ ಕೊಡಿ ಇಲ್ಲವೇ ಮಾರಾಟ ಮಾಡುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ.

ಪರಿಹಾರ ಶೂನ್ಯ:  ತಾಂಡಾಗಳಲ್ಲಿ 2000-01ರಲ್ಲಿ ಬಡತನದಿಂದ ಮಕ್ಕಳ ಮಾರಾಟ ಪ್ರಕರಣ ನಡೆದಿತ್ತು. ಅಂದು ನೂರಾರು ಹೆಣ್ಣು ಶಿಶುಗಳ ಮಾರಾಟ ನಡೆದರೂ ಸರ್ಕಾರ ದಾಖಲಿಸಿಕೊಂಡಿದ್ದು ಅತ್ಯಲ್ಪ. ಆದರೆ ಇದೀಗ ಮತ್ತೆ ಆ ಸಮಸ್ಯೆ ಕಂಡು ಬಂದಿದೆ. ಮಕ್ಕಳ ಮಾರಾಟ ನಂತರ ಸರ್ಕಾರ ರೂ 10 ಕೋಟಿಗಳ ಪ್ಯಾಕೇಜ್ ಘೋಷಿಸಿತ್ತು. ಆದರೆ ಅಲ್ಲಿ ಆದ ಅಭಿವೃದ್ಧಿ ಶೂನ್ಯ~ ಎನ್ನುತ್ತಾರೆ, ಬಿಜೆಪಿ ಮುಖಂಡ ಡಾ. ತುಕಾರಾಮ ಪವಾರ್.

ಮಾರಾಟ ಪ್ರಕರಣದ ಬಳಿಕ ಒಂಟಿಗುಡ್ಸಿಯಲ್ಲಿ ಆಶ್ರಮ ಶಾಲೆ ತೆರೆಯಲಾಯಿತು. ಆದರೆ ಶಿಕ್ಷಕರನ್ನು ನೇಮಿಸಲೇ ಇಲ್ಲ. ಹೀಗಾಗಿ ಇಲ್ಲಿನ ಮಕ್ಕಳು ಸರ್ಕಾರಿ ಶಾಲೆಯನ್ನೇ ಅವಲಂಬಿಸಿದರು. ಶಿಶುಗಳನ್ನು ಮಾರಾಟ ಮಾಡಿದವರಿಗೆ ಹೈನುಗಾರಿಕೆಗೆ ಸಾಲ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಮತ್ತು ಭಾಗ್ಯಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ, ಸ್ವಂತ ಸೂರು ಕಲ್ಪಿಸಲಾಗಿದೆ. ಕೊಳವೆಬಾವಿಗಳಿಗೆ 4 ವರ್ಷಗಳ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ನೀರು ಬತ್ತಿ ಹೋಗಿವೆ ಎಂದು ಭಿಕ್ಕು ಹರ್ಜು ಚವ್ಹಾಣ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.