ಹೆತ್ತವರ ಸಮ್ಮುಖದಲ್ಲೇ ಸಂಗೀತ ಪಾಠ

7

ಹೆತ್ತವರ ಸಮ್ಮುಖದಲ್ಲೇ ಸಂಗೀತ ಪಾಠ

Published:
Updated:
ಹೆತ್ತವರ ಸಮ್ಮುಖದಲ್ಲೇ ಸಂಗೀತ ಪಾಠ

ಸಂಗೀತ ಕಲಿಕೆ, ಸಾಧನೆಯಲ್ಲಿ ಮಕ್ಕಳಷ್ಟೇ ಹೆತ್ತವರ ಪಾತ್ರವೂ ಇದೆ. ಪೋಷಕರ ಪ್ರೋತ್ಸಾಹ, ಕಾಳಜಿ ಇದ್ದರೆ ಮಾತ್ರ ಮಗು ಸಾಧಿಸುತ್ತದೆ. ಕಲೆ ಸಿದ್ಧಿಸುತ್ತದೆ. ಈ ಸಿದ್ಧಾಂತ ವೈಟ್‌ಫೀಲ್ಡ್‌ನಲ್ಲಿರುವ ಪರಂಪರಾ ಕರ್ನಾಟಕ ಸಂಗೀತ ಕಲಾ ಸಂಸ್ಥೆಯದ್ದು. ಹೀಗಾಗಿ ಇಲ್ಲಿ ಸಂಗೀತ ಕಲಿಯುವಾಗ ಪ್ರತಿ ಮಗುವಿನ ಜತೆ ಹೆತ್ತವರೂ ಕುಳಿತಿರಬೇಕು. ಕಲಿಕೆಯ ಪ್ರತಿ ಹಂತವನ್ನೂ ಗಮನಿಸಬೇಕು. ಮನೆಯಲ್ಲಿ ಅಭ್ಯಾಸ ಮಾಡಿಸಬೇಕು. ಕರ್ನಾಟಕ ಸಂಗೀತದ ಬಾಲಪಾಠ, ತಾಳಗಳ ಬಗ್ಗೆ ಎಳವೆಯಲ್ಲೇ ಚೆನ್ನಾಗಿ ಬಂದರೆ ಅದು ಸಂಗೀತದ ಮುಂದಿನ ಕಲಿಕೆಗೆ ಭದ್ರ ಬುನಾದಿ ಹಾಕುತ್ತದೆ.ಕಳೆದ 13 ವರ್ಷಗಳಿಂದ `ಪರಂಪರಾ' ಸಾಂಪ್ರದಾಯಿಕ ಸಂಗೀತ ಶಿಕ್ಷಣ ನೀಡುತ್ತಿದೆ. ವಿದುಷಿ ಸವಿತಾ ಕಾರ್ತಿಕ್ ಇದರ ಸ್ಥಾಪಕ ಅಧ್ಯಕ್ಷರು. ಚೆನ್ನೈನ ಸಂಗೀತ ಕಲಾನಿಧಿ ದಿ. ಡಿ.ಕೆ. ಜಯರಾಮನ್ ಮತ್ತು ಸಂಗೀತ ಕಲಾ ಆಚಾರ್ಯ ವಿದ್ವಾನ್ ಸುಬ್ರಹ್ಮಣ್ಯಂ ಅವರಿಂದ ಸಂಗೀತ ಕಲಿತ ಸವಿತಾ, ತಮ್ಮ ಈ ವಿದ್ಯೆಯನ್ನು ಸಂಗೀತಾಸಕ್ತ ಮಕ್ಕಳಿಗೆ ಧಾರೆಯೆರೆಯುವ ಸಲುವಾಗಿಯೇ ಸ್ಥಾಪಿಸಿದ ಸಂಗೀತ ಸಂಸ್ಥೆ ಇದು. ವಿದುಷಿ ಸವಿತಾ ಏಳನೇ ವಯಸ್ಸಿನಲ್ಲಿ ಸಂಗೀತ ಕಲಿಯಲು ಆರಂಭಿಸಿದರು. ಅವರ ಪತಿ ವಿದ್ವಾನ್ ವಿ. ಕಾರ್ತಿಕೇಯನ್ ಅವರೂ ಸಂಗೀತಗಾರರಾಗಿದ್ದು, ವಿದ್ವಾನ್ ಡಾ.ಎನ್. ರಮಣಿ ಅವರ ಬಳಿ ಸಂಗೀತದ ತಾಲೀಮು ನಡೆಸಿದವರು.ಹಾಗೆ ನೋಡಿದರೆ ವಿದುಷಿ ಸವಿತಾ ಓದಿದ್ದು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಅದೂ ಚೆನ್ನೈನಲ್ಲಿ. ಎಳೆಯ ವಯಸ್ಸಿನಲ್ಲೇ ಸಂಗೀತವನ್ನು ಕಲಿತು, ಹಾಡಿ, ಪರಿಣತಿ ಪಡೆದ ಕಾರಣ ಬದುಕಿನಲ್ಲಿ ಗಟ್ಟಿಯಾಗಿ ನೆಲೆನಿಂತದ್ದೂ ಸಂಗೀತದಲ್ಲೇ.`ಪರಂಪರಾ'ದಲ್ಲಿ 45 ಮಕ್ಕಳು ಸಂಗೀತ ಕಲಿಯುತ್ತಿದ್ದಾರೆ. ಕರ್ನಾಟಕ ಸಂಗೀತ ದಿಗ್ಗಜರಾದ ಶೆಮ್ಮಂಗುಡಿ ಮತ್ತು ಡಿ.ಕೆ. ಪಟ್ಟಮ್ಮಾಳ್ ಅವರ `ಬಾನಿ' (ಶೈಲಿ)ಯಲ್ಲಿ ಇಲ್ಲಿ ಸಂಗೀತ ಹೇಳಿಕೊಡಲಾಗುತ್ತದೆ. 7ರಿಂದ 45 ವರ್ಷ ವಯಸ್ಸಿನ ಶಿಷ್ಯಂದಿರು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ.`ಸಂಗೀತ ಕಲಿಸುವಾಗ ಸಂಗೀತ ಗುರು ಕೆಲವು ಆದರ್ಶಗಳನ್ನು ಪಾಲಿಸಬೇಕು. ತಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಯಾವುದೇ ಸ್ವಾರ್ಥವಿಲ್ಲದೆ ಧಾರೆಯೆರೆಯಬೇಕು. ಮಕ್ಕಳೂ ಗುರುವಿಗೆ ಬದ್ಧರಾಗಿರಬೇಕು. ಆಗ ವಿದ್ಯೆ ಸಿದ್ಧಿಸುತ್ತದೆ. ಈ ನಿಯಮವನ್ನು ನಮ್ಮ ಸಂಗೀತ ಶಾಲೆಯಲ್ಲಿ ಪಾಲಿಸುತ್ತಾ ಬಂದಿದ್ದೇವೆ' ಎನ್ನುತ್ತಾರೆ ವಿದುಷಿ ಸವಿತಾ.`ಮಕ್ಕಳು ಯಾವುದರಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಮೊದಲು ಹೆತ್ತವರು ನಿರ್ಧರಿಸಬೇಕು. ತಾಯಿ ತನ್ನ ಮಗುವಿನ ಆಸಕ್ತಿಯನ್ನು ಗುರುತಿಸಿ ತಕ್ಕ ಲಲಿತಕಲಾ ಶಿಕ್ಷಣ ನೀಡಬೇಕು. ಆಕೆಗೂ ಕಲೆಯಲ್ಲಿ ಆಸಕ್ತಿ ಇರಬೇಕು. ಆಗ ಮಗು ಬೇಗನೆ ಸಂಗೀತದಂತಹ ಕಲೆಯನ್ನು ಒಲಿಸಿಕೊಳ್ಳುತ್ತದೆ' ಎನ್ನುತ್ತಾರೆ ಅವರು.ತ್ರಿಮೂರ್ತಿಗಳ ಆರಾಧನೆ

ಸಾಮಾನ್ಯವಾಗಿ ಬಹುತೇಕ ಸಂಗೀತ ಶಾಲೆಗಳಲ್ಲಿ ತ್ಯಾಗರಾಜರ, ಪುರಂದರದಾಸರ ಆರಾಧನೆ ನಡೆಯುತ್ತದೆ. ಸಂಗೀತ ತ್ರಿಮೂರ್ತಿಗಳ ಆರಾಧನೆ ನಡೆಯುವುದು ಬಹಳ ಅಪರೂಪ. ಕರ್ನಾಟಕ ಸಂಗೀತದಲ್ಲಿ ವಾಗ್ಗೇಯಕಾರರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗಳು.. ಈ ಮೂವರನ್ನು ಸಂಗೀತ ತ್ರಿಮೂರ್ತಿಗಳು ಎಂದು ಕರೆಯುತ್ತಾರೆ. ಈ ಮೂವರ ಆರಾಧನೆಯನ್ನು `ಪರಂಪರಾ' ಪ್ರತಿವರ್ಷ ನಡೆಸುತ್ತದೆ. ಈ ಸಲ ಫೆಬ್ರುವರಿ 10ರಂದು `ಟ್ರಿನಿಟಿ ಆರಾಧನಾ' ಕಾರ್ಯಕ್ರಮವಿದೆ. ಅಂದು ಈ ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳು ಹಾಡುತ್ತಾರೆ. ಗೋಷ್ಠಿ ಗಾಯನವೂ ಇದೆ.“ಪರಂಪರಾದಲ್ಲಿ ವರ್ಷಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಿರಂತರ ಚಟುವಟಿಕೆಗಳಿಂದ ಕೂಡಿರುವ ಈ ಸಂಗೀತ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಆಗಾಗ ವೇದಿಕೆಯೂ ಸಿಗುತ್ತದೆ. `ಪರಂಪರಾ ಫನ್ ಫೆಸ್ಟ್' ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಈ ಸಂಗೀತ ಉತ್ಸವದಲ್ಲಿ ಮಕ್ಕಳಿಗಾಗಿ ಸಂಗೀತದ ಕುರಿತಾದ ಫನ್‌ಗೇಮ್ಸ, ಸ್ಕಿಟ್, ರಸಪ್ರಶ್ನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ನಡೆಸಲಾಗುತ್ತದೆ. ಹೀಗಾಗಿ ಮಕ್ಕಳು ಆಟದ ಮೂಲಕವೂ ಸಂಗೀತದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸುಮಾರು ಮೂರು ತಿಂಗಳ ತಯಾರಿ ನಡೆಯುತ್ತದೆ. ಈ ಸಂಗೀತ ಹಬ್ಬ ಮಕ್ಕಳಲ್ಲಿ ಸಂಗೀತದ ಅಭಿರುಚಿ ಹೆಚ್ಚಿಸಲು ಸಹಕಾರಿಯಾಗುತ್ತದೆ” ಎಂದು ವಿವರ ನೀಡುತ್ತಾರೆ ವಿದುಷಿ ಸವಿತಾ.ಸಂಗೀತ ವಿದ್ವಾಂಸರನ್ನು ಆಗಾಗ ಸಂಸ್ಥೆಗೆ ಕರೆಸಿ ಹಾಡುಗಾರಿಕೆ, ಉಪನ್ಯಾಸ, ಗಾನಗೋಷ್ಠಿ ನಡೆಸುವುದು ವಿಶೇಷ. ಈ ಸಂಗೀತ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗಾಗಲೇ ಅನೇಕ ಕಡೆ ಸಂಗೀತ ಕಛೇರಿಗಳನ್ನೂ ನೀಡಿದ್ದಾರೆ. ಪ್ರತಿಷ್ಠಿತ ಸಂಗೀತ ಸಭಾಗಳಾದ ಬೆಳ್ಳಂದೂರಿನ ರಂಜನಿ ಫೈನ್ ಆರ್ಟ್ಸ್, ಕೋರಮಂಗಲದ ನಾದುಸುರಭಿ ಕಲ್ಚರಲ್ ಅಸೋಸಿಯೇಷನ್ ಸಂಗೀತ ಕಾರ್ಯಕ್ರಮಗಳಲ್ಲಿ ಪರಂಪರಾ ಸಂಸ್ಥೆಯ ಮಕ್ಕಳು ಸಂಗೀತ ಕಛೇರಿ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ಶಾಲೆಗೆ ಹೋಗುವ ಮಕ್ಕಳು, ಕಾಲೇಜು, ಎಂಜಿನಿಯರಿಂಗ್, ತಾಂತ್ರಿಕ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳೂ ಸಂಗೀತ ಕಲಿಯುತ್ತಾರೆ. ಚೆನ್ನೈನ ಐಐಟಿಯಲ್ಲಿ ಕಲಿಯುತ್ತಿರುವ ವಿದ್ಯಾ ಮುತ್ತುಕುಮಾರ್ ಇದೇ ಸಂಸ್ಥೆಯಲ್ಲಿ ಸಂಗೀತಾಭ್ಯಾಸ ಮಾಡುವ ವಿದ್ಯಾರ್ಥಿನಿಯಾಗಿದ್ದು, ಇದೀಗ ಹಲವಾರು ವೇದಿಕೆಗಳಲ್ಲಿ ಕಛೇರಿಗಳನ್ನೂ ನೀಡಿದ್ದಾರೆ.ವಿಳಾಸ: ವಿದುಷಿ ಸವಿತಾ ಕಾರ್ತೀಕ್, ಪರಂಪರಾ ಸೆಂಟರ್ ಫಾರ್ ಕರ್ನಾಟಿಕ್ ಮ್ಯೂಸಿಕ್, 39/ಪಿ, ತುಂಬರಹಳ್ಳಿ, ವೈಟ್‌ಫೀಲ್ಡ್, ಬೆಂಗಳೂರು. ಫೋನ್: 080 25397634. ಇ ಮೇಲ್: ಜಿಠಿಃಜಞಜ್ಝಿ.್ಚಟಞ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry