ಹೆದ್ದಾರಿಯಲ್ಲೇ ನಿಲ್ಲುವ ಲಾರಿ: ಸಂಚಾರಕ್ಕೆ ಅಡ್ಡಿ

ಗುರುವಾರ , ಜೂಲೈ 18, 2019
28 °C

ಹೆದ್ದಾರಿಯಲ್ಲೇ ನಿಲ್ಲುವ ಲಾರಿ: ಸಂಚಾರಕ್ಕೆ ಅಡ್ಡಿ

Published:
Updated:

ಬಸವಕಲ್ಯಾಣ: ಇಲ್ಲಿಂದ ಹಾದು ಹೋಗುವ 9ನೇ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಸ್ತಾಪುರ ಬಂಗ್ಲಾದ ವೃತ್ತದಲ್ಲಿ ಬಂದಿಳಿದ ಪ್ರತಿಯೊಬ್ಬರೂ ಇದೇನು ರಸ್ತೆಯೋ ಅಥವಾ ಲಾರಿ ಗ್ಯಾರೇಜೋ ಎಂದು ಒಂದು ಕ್ಷಣ ಯೋಚಿಸುತ್ತಾರೆ. ಏಕೆಂದರೆ ಇಲ್ಲಿ ಹೋಗಲು ಜಾಗ ಇಲ್ಲದಂತೆ ರಸ್ತೆಯುದ್ದಕ್ಕೂ ಲಾರಿ ನಿಂತಿರುತ್ತವೆ.ಬಸವಕಲ್ಯಾಣ `ಲಾರಿಗಳ ಊರು~ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಸಂಚಾರ ಠಾಣೆ ಮತ್ತು ಆರ್‌ಟಿಒ ಕಚೇರಿ ಸ್ಥಾಪಿಸಲಾಗಿದೆ. ಇವೆರಡೂ ಸಸ್ತಾಪುರ ಬಂಗ್ಲಾ ಹತ್ತಿರವೇ ಇವೆ. ಇವುಗಳ ಎದುರಿನಲ್ಲಿಯೇ ಹೀಗೆ ರಾಜಾರೋಷವಾಗಿ ವಾಹನ ನಿಂತರೂ ಯಾರೂ ಕಣ್ಣೆತ್ತಿ ನೋಡದಿರುವುದು ವಿರ್ಪಯ್ಯಾಸದ ಸಂಗತಿ.ಹೆದ್ದಾರಿ ಪಕ್ಕದಲ್ಲಿಯೇ ಇರುವ ಅಟೊ ನಗರದಲ್ಲಿನ ಗ್ಯಾರೇಜುಗಳ ಎದುರಿಗೆ ಸಾಕಷ್ಟು ಜಾಗವಿದೆ.       ಇದಲ್ಲದೆ ಅರ್ಧ ಕಿ.ಮೀ. ಅಂತರದಲ್ಲಿ ಕೌಡಿಯಾಳ ಹತ್ತಿರದಲ್ಲಿ ರಸ್ತೆ ಪಕ್ಕದಲ್ಲಿಯೇ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಸಸ್ತಾಪುರ ಬಂಗ್ಲಾದ ವೃತ್ತದಲ್ಲಿಯೇ ಲಾರಿ ಗಂಟೆಗಟ್ಟಲೇ ನಿಲ್ಲಿಸುವುದರಿಂದ ಸಮಸ್ಯೆಯಾಗಿದೆ.ವಿದ್ಯಾಪೀಠದಿಂದ ಬಂಗ್ಲಾದ ವೃತ್ತದವರೆಗೆ ಹಾಗೂ ಸಸ್ತಾಪುರ ರಸ್ತೆಯವರೆಗೆ ಎಲ್ಲೆಂದರಲ್ಲಿ ಲಾರಿ ನಿಲ್ಲುವುದರಿಂದ ಬಸ್ ಹಾಗೂ ಇತರೆ ವಾಹನದವರು ಇಲ್ಲಿಂದ ದಾಟಿ ಹೋಗಲು ಹರಸಾಹಸ ಮಾಡಬೇಕಾಗುತ್ತಿದೆ.ಪ್ರಯಾಣಿಕರಿಗಾಗಿ ಇಲ್ಲಿ ಪ್ರತ್ಯೇಕ ತಂಗುದಾಣವೂ ಇಲ್ಲ. ಹೀಗಾಗಿ ಇಲ್ಲಿನ ವೃತ್ತದಲ್ಲಿಯೇ ಬಸ್, ಟಂಟಂ. ಮ್ಯಾಕ್ಸಿಕ್ಯಾಬ್ ಹಾಗೂ ಇತರೆ ವಾಹನ ನಿಲ್ಲುತ್ತವೆ. ಪ್ರಯಾಣಿಕರು ಅವುಗಳಿಂದ ಇಳಿದು ಹೋಗಬೇಕಾದರೂ ಒಮ್ಮಮ್ಮೆ ಜಾಗ ಇರುವುದಿಲ್ಲ. ಇಲ್ಲಿ ನಿಯಮ ಬದ್ಧವಾಗಿ ಯಾರೂ ವಾಹನ ತೆಗೆದುಕೊಂಡು ಹೋಗುವುದಿಲ್ಲ.   ಆದ್ದರಿಂದ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗುತ್ತದೆ ಎಂದು ನಾಗರಿಕರು ಗೋಳು ತೋಡಿಕೊಳ್ಳುತ್ತಾರೆ.ಶನಿವಾರ ಇಲ್ಲಿ ಲಾರಿಯೊಂದು ಮೂರು ವಾಹನಗಳಿಗೆ ಡಿಕ್ಕಿ ಹೊಡೆದು ಅನಾಹುತ ಮಾಡಿದೆ. ಇದಕ್ಕೆ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಂತಿರುವುದು ಕಾರಣವಾಗಿದೆ. ಉಪಾಯವಿಲ್ಲದೆ ಚಾಲಕ ಲಾರಿಯನ್ನು ರಸ್ತೆಯಿಂದ ಕೆಳಗೆ ಇಳಿಸಿದ್ದರಿಂದ ಅದು ಗ್ಯಾರೇಜಿನಲ್ಲಿ ನುಗ್ಗಿದೆ ಎನ್ನಲಾಗುತ್ತಿದೆ. ಇಂಥ ಅಪಘಾತ ಇದುವರೆಗೆ ಅನೇಕ ಸಲ ಸಂಭವಿಸಿವೆ. ಆದರೂ ಸಂಬಂಧಿತರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಜನರು ದೂರುತ್ತಾರೆ.ಸಸ್ತಾಪುರ ಬಂಗ್ಲಾದಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ, ಹರಳಯ್ಯ ವೃತ್ತದಿಂದ ಶಾಂತಿನಿಕೇತನ ಶಾಲೆ ರಸ್ತೆ, ರಾಜಕಮಲ ಹೋಟಲ್‌ದಿಂದ ಪಶು ಆಸ್ಪತ್ರೆವರೆಗಿನ ರಸ್ತೆಯನ್ನು ಈಚೆಗೆ ಅಗಲಗೊಳಿಸಲಾಗಿದೆ. ಆದರೂ ಇಲ್ಲಿ ಎರಡೂ ಕಡೆ ಅಂಗಡಿಗಳ ಎದುರಿನಲ್ಲಿ ದ್ವಿಚಕ್ರವಾಹನ ಹಾಗೂ ಇತರೆ ವಾಹನ ನಿಲ್ಲಿಸುತ್ತಿರುವ ಕಾರಣ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಇಷ್ಟಾದರೂ ಸಂಬಂಧಿತರು ಕಣ್ಣುಮುಚ್ಚಿ ಕುಳಿತರೆ ಯಾರಿಗೆ ಹೇಳಬೇಕು ಎಂದು ಜನರು ಹತಾಶೆಯಿಂದ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry