ಹೆದ್ದಾರಿ; ಆಳ- ಅಗಲದ ನಡುವೆ ಪೈಪೋಟಿ

7

ಹೆದ್ದಾರಿ; ಆಳ- ಅಗಲದ ನಡುವೆ ಪೈಪೋಟಿ

Published:
Updated:

ಹೊನ್ನಾವರ: ಮಳೆಗಾಲ ಬರುತ್ತಿದ್ದಂತೆ ಹೆದ್ದಾರಿಯಲ್ಲಿ ಹೊಂಡಗಳ ಆಳ ಅಗಲದ ನಡುವೆ ಪೈಪೋಟಿ ಶುರುವಾಗುವುದು. ಇದಕ್ಕೆ ಪ್ರತಿಯಾಗಿ ಹೊಂಡಗಳ ಹಾವಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನವೂ ಸಂಚರಿಸುವ ಸಾವಿರಾರು ವಾಹನಗಳು ನಲುಗಿ, ಗ್ಯಾರೇಜ್ ಸೇರುತ್ತಿವೆ.ಕುಮಟಾ- ಭಟ್ಕಳ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾಲೀಕರಿಗೆ ದುರಸ್ತಿಯ ಭೀತಿ ಕಾಡಿದರೆ, ಪ್ರಯಾಣಿಕರಿಗೆ ಬೆನ್ನು ಗಟ್ಟಿಯಾಗಿ ಉಳಿದರೆ ಸಾಕು ಎನಿಸುತ್ತಿದೆ. ಹೆಜ್ಜೆ ಹೆಜ್ಜೆಗೂ ಹರಡಿಕೊಂಡ ಗುಂಡಿಗಳನ್ನು ತಪ್ಪಿಸುವ ಪೈಪೋಟಿಯಲ್ಲಿ ಅಪಘಾತ ಸಾಮಾನ್ಯವಾಗಿದೆ. ಅಪಘಾತದ ಜೊತೆಗೆ ಸಂಚಾರಕ್ಕೆ ವ್ಯತ್ಯಯ, ಜಗಳ, ಪ್ರತಿಭಟನೆಗಳು ನಿಗದಿತ ಸಮಯದಲ್ಲಿ ಊರು ಮುಟ್ಟುವ ವಿಶ್ವಾಸ ಇಲ್ಲದಂತೆ ಮಾಡಿವೆ.ಮೀತಿಮೀರಿದ ವಾಹನ ದಟ್ಟಣೆ, ಭಾರೀ ಗಾತ್ರದ ವಾಹನ ಒತ್ತಡ, ಅಧಿಕ ಮಳೆ, ಕುಸಿಯುವ ಮಣ್ಣಿನ ಗುಣಧರ್ಮ, ಕಳಪೆ ಗುಣಮಟ್ಟದ ಕಾಮಗಾರಿ ಮೊದಲಾದವು ರಸ್ತೆ ಹದಗೆಡಲು ಪ್ರಮುಖ ಕಾರಣಗಳು. ಪ್ರತಿ ವರ್ಷ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತದೆ. ಬೇಸಿಗೆಯಲ್ಲಿ ಕಾಮಗಾರಿ ಮುಗಿದರೆ ಮಳೆಗಾಲಕ್ಕೆ ಮತ್ತೆ ಹಾಳಾಗಿ ವರ್ಷವಿಡೀ ಪ್ರಯಾಣಿಕರು ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ.ಪ್ರಸ್ತುತ ದ್ವಿಪಥವಾಗಿರುವ ರಾಷ್ಟ್ರೀಯ ಹೆದ್ದಾರಿ 17 ಅನ್ನು ಚತುಷ್ಪಥ ವನ್ನಾಗಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೆದ್ದಾರಿ ವಿಸ್ತಾರವಾದರೆ ಪ್ರಯಾಣ ಸುಲಭ. ಆದರೆ ಆಗಲೂ ಮಳೆಗೆ ಹಾಳಾದರೆ ಇದೇ ಗೋಳು ತಪ್ಪಿದ್ದಲ್ಲ. ಇದೇನೇ ಇದ್ದರೂ ಸದ್ಯಕ್ಕೆ ಸಂಚರಿಸಲು ರಸ್ತೆ ದುರಸ್ತಿ ಮಾಡಿಸಿದರೆ ಸಾಕು ಎನ್ನುತ್ತಾರೆ ಪ್ರಯಾಣಿಕರು.`ಹೆದ್ದಾರಿ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸಪಟ್ಟಣದಿಂದ ಬೈಲೂರು ನಡುವಿನ 14 ಕಿ.ಮೀ. ರಸ್ತೆ ಹಾಗೂ ಮಾಸ್ತಿಕಟ್ಟೆಯಿಂದ ಕರ್ಕಿ ರೈಲು ನಿಲ್ದಾಣ ವರೆಗಿನ 15 ಕಿ.ಮೀ. ಉದ್ದದ ರಸ್ತೆಯನ್ನು ಕ್ರಮವಾಗಿ ರೂ 5.8 ಹಾಗೂ 5.08 ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣ ಮಾಡಲಾಗುತ್ತಿದೆ. ರಾಮಶ್ರೀ ಗ್ಲೋಬಲ್ ಕನ್‌ಸ್ಟ್ರಕ್ಷನ್ ಟೆಂಡರ್ ಪಡೆದಿದೆ. ತೇಪೆ ಕಾರ್ಯಕ್ಕೂ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೇ 15ರ ನಂತರ ಕಾಮಗಾರಿ ಆರಂಭವಾಗಲಿದೆ. ಇದಲ್ಲದೆ ಮಿರ್ಜಾನ್‌ನಿಂದ ಕುಮಟಾ ಸರ್ಕಲ್ ವರೆಗಿನ 10 ಕಿ.ಮೀ. ರಸ್ತೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಜಿ. ಹೆಗಡೆ ಅವರ ವಿವರಣೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry