ಬುಧವಾರ, ಏಪ್ರಿಲ್ 21, 2021
30 °C

ಹೆದ್ದಾರಿ ಪಕ್ಕದ ಮರಗಳಿಗೆ ಕೊಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಪಟ್ಟಣದಲ್ಲಿ ಹಾದುಹೋಗಿರುವ ರಾ.ಹೆ. 17ರ ಇಕ್ಕೆಲಗಳಲ್ಲಿ ಹಲವು ವರ್ಷಗಳಿಂದ ನೆರಳು ನೀಡುತ್ತಿದ್ದ ಬೃಹತ್ ಮರಗಳನ್ನು ಇಲ್ಲಿನ ಅರಣ್ಯ ಇಲಾಖೆ ಇದ್ದಕ್ಕಿದ್ದಂತೆ ಕಡಿಯಲು ಆರಂಭಿಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.ಈಗಿರುವ ಹೆದ್ದಾರಿಯೇ ಅಗಲೀಕರಣಗೊಳ್ಳಲಿದೆ. ಅದಕ್ಕಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಮರಗಳನ್ನು ಕಟಾವು ಮಾಡಿ ತೆರವುಗೊಳಿಸಲಾಗುತ್ತಿದೆ ಎಂದು ಹೆದ್ದಾರಿಯನ್ನೇ ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿದವರು ಹೇಳುತ್ತಿದ್ದಾರೆ. ಇಲ್ಲ ಹೆದ್ದಾರಿ ಅಗಲೀಕರಣವಾಗುವುದಿಲ್ಲ. ಬೈಪಾಸ್ ರಸ್ತೆಯೇ ಆಗಲಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ, ಮರಗಳಿಂದಾಗುವ ಅಪಘಾತವನ್ನು ತಪ್ಪಿಸಲು ಹೆದ್ದಾರಿಯಂಚಿನ ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಬೈಪಾಸ್ ರಸ್ತೆ ಪ್ರಿಯರು ಸಮಜಾಯಿಷಿ ನೀಡುತ್ತಿದ್ದಾರೆ.ಆದರೆ ಇದೆಲ್ಲವನ್ನೂ ಇಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉದಯಕುಮಾರ ಜೋಗಿ ಅಲ್ಲಗಳೆದಿದ್ದಾರೆ. ಹೆದ್ದಾರಿ ಇಕ್ಕೆಲಗಳಲ್ಲಿರುವ ಮರಗಳು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ 29 ಮರಗಳನ್ನು ಕತ್ತರಿಸಲು ಟೆಂಡರ್ ಕರೆಯಲಾಗಿದೆ. ಕೆಲವು ಕಡೆ ಅಪಾಯ ಒಡ್ಡುವ ಮರಗಳನ್ನು ಕತ್ತರಿಸಲಾಗಿದ್ದರೆ, ಇನ್ನು ಕೆಲವು ಕಡೆ ಮರದ ಟೊಂಗೆಗಳನ್ನು ಕತ್ತರಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಹೆದ್ದಾರಿಯ ಇಕ್ಕೆಲಗಳಲ್ಲಿರುವ ಮರಗಳನ್ನು ಕತ್ತಿರಿಸಿರುವುದಕ್ಕೆ ಇಲ್ಲಿನ ಪರಿಸರ ಸಂರಕ್ಷಣಾ ಸಮಿತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು.  ಇದರಿಂದ ಪಟ್ಟಣದ ಸೌಂದರ್ಯ ನಾಶವಾಗುವುದಲ್ಲದೇ, ಪರಿಸರದ ಮೇಲೂ ಪರಿಣಾಮ ಬೀರಲಿದೆ. ಬೇಕಾದರೆ ಮರದ ಟೊಂಗೆಗಳನ್ನು ಕಡಿದು, ಅದನ್ನು ಬಿಟ್ಟು ಮರವನ್ನೇ ಕಡಿಯುವುದು ಸರಿಯಲ್ಲ ಎಂದು ಎ.ಸಿ.ಎಫ್.ಗೆ ಮನವಿ ನೀಡಿ ಆಗ್ರಹಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಎ.ಸಿ.ಎಫ್ ಜೋಗಿ, ಮರಗಳನ್ನು ಕಡಿಯುವುದನ್ನು ತಕ್ಷಣ ನಿಲ್ಲಿಸಿ, ಮತ್ತೊಮ್ಮೆ ಸರ್ವೆ ನಡೆಸಿ ಅಗತ್ಯವಿದ್ದರೆ ಮಾತ್ರ ಕಡಿಯುವಂತೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.