ಶನಿವಾರ, ಜನವರಿ 25, 2020
29 °C

ಹೆದ್ದಾರಿ ಯೋಜನೆಗೆ ಹಣಕಾಸು ಇಲಾಖೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ 7,300 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಹಣಕಾಸು ಇಲಾಖೆ ತಡೆ ಹಾಕಿದೆ. ಈ ಯೋಜನೆಗಾಗಿ 2,800 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಅನುದಾನವನ್ನು ನೀಡಲು ಅಸಾಧ್ಯ ಎಂದಿರುವ ಆರ್ಥಿಕ ಇಲಾಖೆ ಒಂದು ತಿಂಗಳಿನಿಂದ ಯೋಜನಾ ಪ್ರಸ್ತಾವವನ್ನು ತಡೆಹಿಡಿದಿದೆ.ಯೋಜನೆಯ ಅನುಷ್ಠಾನ ಆರಂಭದ ವೇಳೆಗೆ ಹಣಕಾಸು ಇಲಾಖೆ ಆಕ್ಷೇಪ ಎತ್ತಿದೆ. ಅನುದಾನ ಲಭ್ಯತೆ ಕುರಿತು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವವರೆಗೂ ಯೋಜನೆಯಲ್ಲಿನ ಕಾಮಗಾರಿಗಳ ಆರಂಭಕ್ಕೆ ಆಡಳಿತಾತ್ಮಕ ಅನುಮೋದನೆ ನೀಡದಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುವ ಸಾಧ್ಯತೆ ಇಲ್ಲ.ರಾಜ್ಯದ ಹಲವು ಕಡೆಗಳಲ್ಲಿ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಒಟ್ಟು 15,000 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿತ್ತು. ಒಟ್ಟು 13,363 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಹಾಲಿ ಇರುವ 10,500 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು 4,500 ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣ ಈ ಯೋಜನೆಯಲ್ಲಿ ಸೇರಿತ್ತು. ಯೋಜನೆಗೆ ಕಳೆದ ಮೇ ತಿಂಗಳಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.ಒಂದು ಜಿಲ್ಲಾ ಕೇಂದ್ರದಿಂದ ಮತ್ತೊಂದು ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ, ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ಮತ್ತು ಎರಡು ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಈ ಯೋಜನೆಯಡಿ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿತ್ತು. ಯೋಜನೆ ಅನುಷ್ಠಾನದ ಮೇಲುಸ್ತುವಾರಿಗಾಗಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿಯನ್ನೂ ರಚಿಸಲಾಗಿದೆ.ಯೋಜನೆಯ ಅನುಷ್ಠಾನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಅದರಂತೆ, ಈಗಾಗಲೇ ಇರುವ 10,500 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ  ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕು. 4,500 ಕಿ.ಮೀ. ಉದ್ದದ ಹೊಸ ರಸ್ತೆಗಳ ನಿರ್ಮಾಣವನ್ನು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಅಡಿಯಲ್ಲಿ ಕೈಗೆತ್ತಿಕೊಳ್ಳಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರವೇ ಅನುದಾನ ಒದಗಿಸಬೇಕು. ಕೆಶಿಪ್ ಅಡಿಯಲ್ಲಿನ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ, ವಿಶ್ವ ಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತಿತರ ಮೂಲಗಳಿಂದ ನೆರವು ಪಡೆಯಲಾಗುತ್ತದೆ.10,500 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳ ಪೈಕಿ 7,300 ಕಿ.ಮೀ. ಉದ್ದದ ರಸ್ತೆಗಳನ್ನು ಯೋಜನೆಯ ಮೊದಲ ಹಂತದಲ್ಲಿ ಮೇಲ್ದರ್ಜೆಗೆ ಏರಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಸರ್ಕಾರದ ಆದೇಶದಂತೆ ಆಯಾ ರಸ್ತೆಗಳ ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿದ್ದರು. ಇಲಾಖೆಯ ಮಾನದಂಡದ ಪ್ರಕಾರ ರೂ 2,800 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಬೇಕಿತ್ತು. ಈ ಕುರಿತು ಹಣಕಾಸು ಇಲಾಖೆಗೆ ಕೋರಿಕೆಯನ್ನೂ ಸಲ್ಲಿಸಲಾಗಿತ್ತು.ತಿಂಗಳಿಂದ ತಡೆ: 7,300 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಮೊದಲ ವಾರದಲ್ಲಿ ಡಿಪಿಆರ್‌ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಕಾಮಗಾರಿ ಆರಂಭಕ್ಕೆ ಆದೇಶ ಹೊರಡಿಸಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿತ್ತು. ಆದರೆ, ಈ ಕುರಿತು ಸಭೆ ನಡೆಯುವ ಒಂದು ದಿನ ಮೊದಲು ಪತ್ರವೊಂದನ್ನು ರವಾನಿಸಿದ್ದ ಹಣಕಾಸು ಇಲಾಖೆ, ಪ್ರಸ್ತಾವವನ್ನು ತಡೆ ಹಿಡಿಯುವಂತೆ ಸೂಚಿಸಿತ್ತು.`ಇಲಾಖೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಕಾಮಗಾರಿಗಳಿಗಾಗಿ 2,150 ಕೋಟಿ ರೂಪಾಯಿ ಒದಗಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ರೂ 1,750 ಕೋಟಿ ಒದಗಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ರೂ 2,800 ಕೋಟಿ ಅನುದಾನ ಒದಗಿಸಲು ಅಸಾಧ್ಯ.ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ, ತೀರ್ಮಾನಕ್ಕೆ ಬಂದ ಬಳಿಕವೇ ಸಭೆ ನಡೆಸಬೇಕು~ ಎಂಬುದಾಗಿ ಹಣಕಾಸು ಇಲಾಖೆ ಪತ್ರದ ಮೂಲಕ ಸೂಚನೆ ನೀಡಿದೆ ಎಂದು ಲೋಕೋಪಯೋಗಿ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.`ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. ಇನ್ನೂ ಯೋಜನೆಯ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿಲ್ಲ. ಈಗ ಎಷ್ಟೇ ಕ್ಷಿಪ್ರಗತಿಯಲ್ಲಿ ಪ್ರಕ್ರಿಯೆ ನಡೆದರೂ ಈ ಹಣಕಾಸು ವರ್ಷದಲ್ಲಿ 7,300 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಚಾಲನೆ ನೀಡುವುದು ಸಾಧ್ಯವಾಗದು~ ಎನ್ನುತ್ತಾರೆ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಉನ್ನತ ಅಧಿಕಾರಿಗಳು.`ಒಪ್ಪಿಗೆ ಪಡೆವ ವಿಶ್ವಾಸ~: ಯೋಜನಾ ಪ್ರಸ್ತಾವಕ್ಕೆ ತಡೆ ನೀಡಿರುವ ಕುರಿತು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ.ಬಿ.ದೇವರಾಜ್ ಅವರನ್ನು ಸಂಪರ್ಕಿಸಿದಾಗ, `ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹಣಕಾಸು ಇಲಾಖೆ ತಿಳಿಸಿದೆ. ಮುಖ್ಯಮಂತ್ರಿಯವರು ಶೀಘ್ರದಲ್ಲಿ ಸಭೆ ನಡೆಸಿ ಈ ಯೋಜನೆಗೆ ಒಪ್ಪಿಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ~ ಎಂದರು.

ಪ್ರತಿಕ್ರಿಯಿಸಿ (+)