ಶುಕ್ರವಾರ, ಮೇ 14, 2021
32 °C

ಹೆದ್ದಾರಿ ಸುಂಕಕ್ಕೆ ಆರ್‌ಎಫ್‌ಐಡಿ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಂಡಂತೆ...!

ಇದೊಂದು ಬಹಳ ಹಳೆಯ ಅನುಭವದ ನುಡಿ. ಸುಂಕ ಸಂಗ್ರಹಕ್ಕೆ ನಿಂತವನ ಮುಂದೆ ಯಾವುದೇ ಕಷ್ಟ- ಸಮಸ್ಯೆ ಹೇಳಿಕೊಂಡರೂ ಆತನ ಮನಸ್ಸು ಕರಗುವುದಿಲ್ಲ. ಆತ ಸುಂಕ ವಸೂಲಿ ಮಾಡದೇ ಬಿಡುವುದೂ ಇಲ್ಲ ಎಂಬುದೇ ಈ ಮಾತಿನ ಅರ್ಥ!ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿಯೂ ಈಗ ಸುಂಕ ವಸೂಲಿಯದೇ ಕೆಲಸವಾಗಿದೆ. ವಾಹನಗಳ ಮಾಲೀಕರು-ಚಾಲಕರು ಸುಂಕ ತೆತ್ತು ತೆತ್ತೂ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ, ವಾಹನ ದಟ್ಟಣೆಯ ರಸ್ತೆಗಳಲ್ಲಿ ಸುಂಕ ಪಾವತಿಸಿ ಮುಂದೆ ಸಾಗಲು ಟೋಲ್‌ಗೇಟ್‌ನಲ್ಲಿ ಸಾಲಿನಲ್ಲಿ ಕಾಯುತ್ತಾ ನಿಲ್ಲಬೇಕು. ಹಣವಷ್ಟೇ ಅಲ್ಲ, ಅಮೂಲ್ಯ ಸಮಯವೂ ವ್ಯರ್ಥ.ಈ ಸಮಸ್ಯೆಗೊಂದು ಪರಿಹಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಕಳೆದ ಗುರುವಾರ ಹರಿಯಾಣದಲ್ಲಿ ಜಾರಿಗೆ ತಂದಿದೆ. ದೇಶದ ಮೊಟ್ಟಮೊದಲ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ಇಟಿಸಿ) ವ್ಯವಸ್ಥೆಯನ್ನು ಹರಿಯಾಣ-ನವದೆಹಲಿ ಮಾರ್ಗದಲ್ಲಿ ಪಂಚಕುಲಾ ಸಮೀಪದ ಚಾಂಡಿಮಂದಿರದ `ಸುಂಕದ ಕಟ್ಟೆ~ಯಲ್ಲಿ ಅಳವಡಿಸಲಾಗಿದೆ.ಈ ಹೊಸ ವ್ಯವಸ್ಥೆಯ ವಿಶೇಷವೇನೆಂದರೆ, ಇದು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್(ಆರ್‌ಎಫ್‌ಐಡಿ) ತಂತ್ರಜ್ಞಾನವನ್ನು ಆಧರಿಸಿದ ವ್ಯವಸ್ಥೆಯಾಗಿದೆ. ಇದರಲ್ಲಿ ನಗದು ಹಣ ಪಾವತಿಗೆ ಅವಕಾಶವಿಲ್ಲ. ಇದರಲ್ಲೇನಿದ್ದರೂ ಎಲೆಕ್ಟ್ರಾನಿಕ್ ರೀತಿಯಲ್ಲಿ ಸುಂಕದ ಬಾಬ್ತು ಜಮಾ ಆಗುತ್ತದೆ.ಈ ಮಾರ್ಗದಲ್ಲಿ ಸಾಗಿ ಹೋಗುವ ವಾಹನಕ್ಕೆ ಚಿಪ್ ಅಳವಡಿಸಲಾದ ಸ್ಟಿಕ್ಕರನ್ನು ಮೊದಲಿಗೇ ಅಂಟಿಸಲಾಗುತ್ತದೆ. ಈ ವಾಹನದ ಚಾಲಕ ತಾನು ಸಾಗಿ ಹೋಗುವ ಹೆದ್ದಾರಿಯಲ್ಲಿ ಎದುರಾಗುವ ಪ್ರತಿ ಟೋಲ್‌ಗೇಟ್‌ನಲ್ಲಿಯೂ ವಾಹನ ನಿಲ್ಲಿಸಿ, ಸಾಲಿನಲ್ಲಿ ಕಾದು ನಿಂತು ಸುಂಕ ಪಾವತಿಸಿ ರಶೀತಿ ಪಡೆಯಬೇಕಾದ ಅಗತ್ಯವಿಲ್ಲ. ಹಾಗಾದರೆ ಸುಂಕದವರಿಗೆ ಹೆದ್ದಾರಿ ಶುಲ್ಕ ಸಂಗ್ರಹವಾಗುವುದು ಹೇಗೆ?ಇಲ್ಲಿದೆ ಉತ್ತರ

ಮೊದಲಿಗೆ, ಚಿಪ್ ಅಳವಡಿಸಿದ ಸ್ಟಿಕರನ್ನು  ಪಡೆಯಲು ವಾಹನಗಳ ಮಾಲೀಕರು ಇದಕ್ಕಾಗಿಯೇ ನಿಗದಿಪಡಿಸಿದ ಏಜೆನ್ಸಿ ಬಳಿ ತಮ್ಮ ಹೆಸರು, ವಿಳಾಸ, ವಾಹನದ ಮಾದರಿ ಮತ್ತು ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ನಂತರದಲ್ಲಿ ಪ್ರತಿ ವಾಹನಕ್ಕೂ ನಿರ್ದಿಷ್ಟವಾದ ಸಂಕೇತ ಸಂಖ್ಯೆಗಳನ್ನು ಒಳಗೊಂಡ ಸ್ಟಿಕರ್ ನೀಡಲಾಗುತ್ತದೆ.ಈ ಸ್ಟಿಕರನ್ನು ವಾಹನಕ್ಕೆ ಲಗತ್ತಿಸುವಾಗಲೇ ಒಂದು ನಿರ್ದಿಷ್ಟ ಮೊತ್ತವನ್ನು (ಮೊಬೈಲ್ ಫೋನ್ ಪ್ರೀಪೇಯ್ಡ ರೀತಿ) ಸಂಗ್ರಹಿಸಲಾಗಿರುತ್ತದೆ. ಜತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಆರ್‌ಎಫ್‌ಐಡಿ ಸಂಕೇತ ಸಂಗ್ರಾಹಕ ಯಂತ್ರಗಳನ್ನೂ `ಸುಂಕದ ಕಟ್ಟೆ~ಗಳಲ್ಲಿ ನೆಲೆಗೊಳಿಸಲಾಗಿರುತ್ತದೆ.ಇಂಥ ಪ್ರತಿ ಸುಂಕದ ಕಟ್ಟೆಯನ್ನು  ಸ್ಟಿಕರ್ ಲಗತ್ತಿಸಿದ ವಾಹನಗಳು ಹಾದು ಹೋದಾಗ ಅಲ್ಲಿರುವ ಸಂಕೇತ ಸಂಗ್ರಾಹಕ ಯಂತ್ರ ವಾಹನದಲ್ಲಿನ ಆರ್‌ಎಫ್‌ಐಡಿಯ ನಿರ್ದಿಷ್ಟ ಸಂಖ್ಯೆಯನ್ನು ಗ್ರಹಿಸಿಕೊಳ್ಳುತ್ತದೆ. ಇಂಥ ಸಂಖ್ಯೆಯ ವಾಹನ ಈ ಮಾರ್ಗದಲ್ಲಿ ಹಾದು ಹೋಗಿದೆ ಎಂಬ ಸಂದೇಶವನ್ನು ಅದರ ನಿಯಂತ್ರಣ ಕೇಂದ್ರದಲ್ಲಿನ ಸರ್ವರ್‌ಗೆ ತಕ್ಷಣ ರವಾನಿಸುತ್ತದೆ.ಆ ಕ್ಷಣದಲ್ಲಿಯೇ ಆ ವಾಹನದಿಂದ ಮೊದಲೇ ಸಂಗ್ರಹಿಸಲಾಗಿದ್ದ (ಪ್ರೀಪೇಯ್ಡ) ಮೊತ್ತದಿಂದ ನಿಗದಿತ ಹೆದ್ದಾರಿ ಸುಂಕದ ಹಣ ಹೆದ್ದಾರಿಯಲ್ಲಿನ ಸುಂಕದ ಕಟ್ಟೆಯ ನಿರ್ವಾಹಕರ ಖಾತೆಗೆ ಜಮಾ ಆಗುತ್ತದೆ.ವಾಹನಗಳ ಚಾಲಕ-ಮಾಲೀಕರು ಸುಂಕದ ಬಾಬ್ತು ಕಡಿಮೆ ಮಾಡಿಸಲು ದ್ವಿಚಕ್ರವಾಹನದ ಸ್ಟಿಕರನ್ನು ಕಾರು, ಲಾರಿಗೋ ಅಂಟಿಸಿಕೊಂಡು ವಂಚಿಸಬಹುದಲ್ಲವೇ? ಎಂಬ ಪ್ರಶ್ನೆಯೂ ಇದೆ.ಇಂಥ ವಂಚನೆ ತಪ್ಪಿಸಲು ಈ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ಇಟಿಸಿ) ಕೇಂದ್ರಗಳಲ್ಲಿ `ವಾಹನಗಳ ವರ್ಗೀಕರಣ ಸ್ವಯಂ ಚಾಲಿತ ವ್ಯವಸ್ಥೆ~(ಆಟೊಮೆಟಿಕ್ ವೆಹಿಕಲ್ ಕ್ಲಾಸಿಫಿಕೇಷನ್-ಎವಿಸಿ)ಯನ್ನೂ ಅಳವಡಿಸಲಾಗಿರುತ್ತದೆ. ಅಂಥ ನಕಲಿ ಅಥವಾ ಮೋಸದ ಸ್ಟಿಕರ್ ಹೊಂದಿದ ವಾಹನ ಮತ್ತು ಅದರ ನೋಂದಣಿ ಸಂಖ್ಯೆಯನ್ನು ಅಲ್ಲಿರುವ ಕ್ಯಾಮೆರಾ ತಕ್ಷಣ ಸೆರೆ ಹಿಡಿದು ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತದೆ.

 

ಅಲ್ಲಿಂದ ಮುಂದಿನ ಟೋಲ್‌ಗೇಟ್‌ಗೆ ಸಂದೇಶ ರವಾನೆಯಾಗುತ್ತದೆ. ಆಗ ಆ ವಾಹನವನ್ನು ತಡೆ ಹಿಡಿದು ದಂಡ ಹಾಕಲಾಗುತ್ತದೆ   ಎಂಬುದು ಎನ್‌ಎಚ್‌ಎಐ ಅಧಿಕಾರಿಗಳ ಉತ್ತರ.ಈ ಆರ್‌ಎಫ್‌ಐಡಿ ತಂತ್ರಜ್ಞಾನದ ವ್ಯವಸ್ಥೆಯಿಂದ ಹಲವು ಬಗೆಯ ಅನುಕೂಲಗಳಿವೆ. ಮುಖ್ಯವಾಗಿ ಯಾವ ಹೆದ್ದಾರಿಯಲ್ಲಿನ ಸುಂಕದಕಟ್ಟೆಯಲ್ಲಿ ಯಾವ ದಿನ ಎಷ್ಟು ವಾಹನ ಸಾಗಿದವು, ಎಷ್ಟು ಸುಂಕ ವಸೂಲಿ ಆಯಿತು. ಯಾವ ಸಮಯದಲ್ಲಿ ವಾಹನ ದಟ್ಟಣೆ ಇರುತ್ತದೆ ಮೊದಲಾದ ಮಾಹಿತಿಯೆಲ್ಲವೂ ಎನ್‌ಎಚ್‌ಎಐಗೆ ನಿಖರವಾಗಿ ದೊರೆಯುತ್ತದೆ.ಅಲ್ಲದೆ, ವಾಹನ ಸವಾರರಿಗೂ ದೇಶಾದ್ಯಂತ ಹರಡಿಕೊಂಡಿರುವ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಎದುರಾಗುವ ಪ್ರತಿ ಸುಂಕದ ಕಟ್ಟೆಯ ಬಳಿಯೂ ವಾಹನ ನಿಲ್ಲಿಸುವುದು, ಸಾಲುಗಟ್ಟಿ ನಿಂತು ಸಮಯ ವ್ಯರ್ಥ ಮಾಡಿಕೊಳ್ಳುವುದು, ಕೆಲವೊಮ್ಮೆ ಶುಲ್ಕ ಪಾವತಿಗೆ ಅಗತ್ಯವಾದ ಚಿಲ್ಲರೆಗಾಗಿ ಪರದಾಡುವುದು ಮೊದಲಾದ ಎಲ್ಲ ಸಮಸ್ಯೆ-ಕಿರಿಕಿರಿಗಳೂ ತಪ್ಪಿಹೋಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ವಾಹನ ಚಾಲಕರಿಗೆ ನಿಲುಗಡೆ ರಹಿತ ಸುಗಮ ಸಂಚಾರದ ಸುಖವೂ ಇರುತ್ತದೆ.ಈ ಅನುಕೂಲಗಳಿಗಾಗಿಯಾದರೂ (ಸುಂಕ ತೆರುವುದನ್ನು ಮಾತ್ರ ತಪ್ಪಿಸಿಕೊಳ್ಳಲಾಗದು ಬಿಡಿ) ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿಹೋಗುವ ಎಲ್ಲ ವಾಹನಗಳ ಚಾಲಕ-ಮಾಲೀಕರು ಆರ್‌ಎಫ್‌ಐಡಿ ವ್ಯವಸ್ಥೆಗೆ, ಈ ವ್ಯವಸ್ಥೆಯನ್ನು ನೆಲೆಗೊಳಿಸಿದ ಎನ್‌ಎಚ್‌ಎಐಗೆ ಥ್ಯಾಂಕ್ಸ್ ಹೇಳಬಹುದು.`ಅಬ್ಬಾ, ಇನ್ನು ಸುಂಕದವನ ಮುಂದೆ ನಿಮಿಷಗಟ್ಟಲೆ ನಿಂತು ಕಷ್ಟ ಪಡುವುದು ತಪ್ಪುತ್ತದೆ~ ಎಂದು ಈಗಲೇ ನಿಟ್ಟುಸಿರುಬಿಡದಿರಿ. ಈ ಆರ್‌ಎಫ್‌ಐಡಿ ವ್ಯವಸ್ಥೆ ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿದ್ದು, ಮೊದಲಿಗೆ ಚಾಂಡಿಮಂದಿರದ `ಸುಂಕದ ಕಟ್ಟೆ~ಯಲ್ಲಿ ಮಾತ್ರ ಅಳವಡಿಸಲಾಗಿದೆ.

 

ಇದರ ಕಾರ್ಯವೈಖರಿ ಗಮನಿಸಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಎಲ್ಲ ಸುಂಕದಕಟ್ಟೆಗಳಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಅದಕ್ಕಾಗಿ ದೇಶಾದ್ಯಂತದ ಸುಂಕದ ಕಟ್ಟೆಗಳನ್ನು ಆರ್‌ಎಫ್‌ಐಡಿಯ ಕೇಂದ್ರೀಕೃತ ವ್ಯವಸ್ಥೆಯಡಿ ತರಬೇಕಾಗುತ್ತದೆ. ಅಲ್ಲಿಯವರೆಗೂ...ಸುಂಕದವನ ಮುಂದೆ ಸಾಲುಗಟ್ಟಿ ಕಷ್ಟ ಪಡುವುದು (ಸುಖದ ಮಾತು ದೂರದ್ದು ಬಿಡಿ) ಅನಿವಾರ್ಯ.

      

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.