ಹೆದ್ದಾರಿ 66 ಸ್ತಬ್ಧ: ಇಡೀ ದಿನ ಸಂಚಾರ ಸ್ಥಗಿತ

ಮಂಗಳವಾರ, ಜೂಲೈ 16, 2019
28 °C

ಹೆದ್ದಾರಿ 66 ಸ್ತಬ್ಧ: ಇಡೀ ದಿನ ಸಂಚಾರ ಸ್ಥಗಿತ

Published:
Updated:

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಲ್ಲಾಪು ಅಡಂಕುದ್ರು ಬಳಿ `ಉಳ್ಳಾಲ ಸೇತುವೆ~ಯ ಅಂಚಿನಲ್ಲಿ ಶುಕ್ರವಾರ ಬೆಳಗಿನ ಜಾವ ರಸ್ತೆಯ ಅಡಿಪದರದ ಕಲ್ಲು. ಮಣ್ಣು ಕುಸಿದ ಪರಿಣಾಮ ಸಂಚಾರ ಸಂಪೂರ್ಣ  ಅಸ್ತವ್ಯಸ್ತಗೊಂಡಿತು. ಶನಿವಾರವೂ ಇದೇ ಪರಿಸ್ಥಿತಿ ಮುಂದುವರಿಯುವಂತೆ ಕಾಣುತ್ತಿದೆ.ಈ ಪ್ರಮುಖ ಹೆದ್ದಾರಿಯಲ್ಲಿ (ಹಿಂದಿನ ಸಂಖ್ಯೆ 17) ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. `ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸತತವಾಗಿ ಬರುತ್ತಿದ್ದ ಮಳೆಯಿಂದಾಗಿ ಹೀಗಾಗಿರುವ ಸಾಧ್ಯತೆಯಿದೆ.ಜತೆಗೆ ಚತುಷ್ಪಥ ಹೆದ್ದಾರಿ ವಿಸ್ತರಣೆ ಭಾಗವಾಗಿ ಮಗ್ಗುಲಲ್ಲೇ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಕಾಮಗಾರಿಯ ಕಂಪನವೂ ಇದಕ್ಕೆ ಕಾರಣವಾಗಿರಬಹುದು. ವಾಹನಗಳ ಒತ್ತಡದಿಂದಲೂ  ಕುಸಿತ ಸಂಭವಿಸಿರಬಹುದು~ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.`ನಾವು ಹೊಸ ಕಾಂಕ್ರೀಟ್ ಗೋಡೆ ಕಟ್ಟುತ್ತಿದ್ದು ಅದು ಶನಿವಾರ ಪೂರ್ಣವಾಗಲಿದೆ. ಸೇತುವೆಯ ಅಂಚು ಮತ್ತಷ್ಟು ಕುಸಿಯದಂತೆ ಮರಳಿನ ಚೀಲ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಂಚಾರಕ್ಕೆ ಒಂದೆರಡು ದಿನ ಸಮಸ್ಯೆಯಾಗಬಹುದು~ ಎಂದು ಅವರು ಹೇಳಿದರು.ಕೇರಳ ಕಡೆಯಿಂದ ಮಂಗಳೂರಿಗೆ ಬರುವ ಹೆದ್ದಾರಿಯಲ್ಲಿ ಸೇತುವೆ ಸಂಪರ್ಕಿಸುವ ರಸ್ತೆಯ ಬಲಬದಿ ಕುಸಿತ ಉಂಟಾಗಿದೆ. ಸೇತುವೆ ನಿರ್ಮಾಣದ ವೇಳೆ ರಸ್ತೆಗೆ ಆಧಾರವಾಗಿ ಕಟ್ಟಲಾಗಿದ್ದ ಅಡಿಪದರದ ಕಲ್ಲು ಬೆಳಿಗ್ಗೆ 6 ಗಂಟೆಗೆ  ಕುಸಿಯಲು ಆರಂಭವಾಗಿತ್ತು. ನೂತನ ಸೇತುವೆ ಕಾಮಗಾರಿಯಲ್ಲಿದ್ದ ನವ್‌ಯುಗ್ ಕನ್ಸ್  ಸ್ಟ್ರಕ್ಷನ್ಸ್ ಕಾರ್ಮಿಕರು ಅಪಾಯ ಅರಿತು ರಸ್ತೆ ಮೇಲೆ ವಾಹನಗಳ ಸಂಚಾರಕ್ಕೆ ತಡೆ ಹಾಕಿದರು. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ರಸ್ತೆಯ ಅಡಿಪದರದ ಸುಮಾರು 9 ಅಡಿ ಎತ್ತರದಿಂದ ಕಲ್ಲು ಮತ್ತು ಮಣ್ಣು ಕುಸಿದಿದೆ.ಅಸ್ತವ್ಯಸ್ತ: ಸಂಚಾರವನ್ನು ಏಕಮುಖ ಮಾಡಿದ್ದರಿಂದ ಬೆಳಿಗ್ಗೆ 8 ಗಂಟೆಯಿಂದಲೇ ಗೊಂದಲ ಕಾಣಿಸಿಕೊಂಡಿತು. ಇದನ್ನು ಸರಿಪಡಿಸಲು ಸುಮಾರು ಎರಡು-ಮೂರು ಗಂಟೆ ಬೇಕಾಯಿತು. ಅಷ್ಟರಲ್ಲಿ ವಾಹನಗಳ ಸಾಲು ಕಿಲೋಮೀಟರ್‌ಗಟ್ಟಲೆ ಬೆಳೆಯಿತು.`ತಲಪಾಡಿಯಿಂದ ಮಂಗಳೂರಿಗೆ ತಲುಪಲು ಬಸ್‌ಗೆ ಬೇಕಾಗುವ ಅವಧಿ 40 ನಿಮಿಷ. ಆದರೆ ಇಂದಿನ ಅವ್ಯವಸ್ಥೆಯಿಂದ ಎರಡೂವರೆ ಗಂಟೆ ಬೇಕಾಯಿತು~ ಎಂದು ಬಸ್ ನಿರ್ವಾಹಕರೊಬ್ಬರು ತಿಳಿಸಿದರು. ಈ ಪರಿಸ್ಥಿತಿಯಲ್ಲೂ ಕೆಲವು ವಾಹನ ಚಾಲಕರು ಅವಸರ ತೋರಿದ್ದರಿಂದ ಅವ್ಯವಸ್ಥೆ ಮತ್ತಷ್ಟು ಹೆಚ್ಚಾಯಿತು.

ಉಳ್ಳಾಲ ಪೊಲೀಸರು ತೊಕ್ಕೊಟ್ಟು ಮತ್ತು ಪಂಪ್‌ವೆಲ್‌ನಿಂದಲೇ ವಾಹನ ಮಾರ್ಗ ಬದಲಾಯಿಸಿದರು.ಸಂಜೆವರೆಗೆ ತಡೆ: ಘಟನೆಯಿಂದಾಗಿ ರಸ್ತೆಯಲ್ಲಿ ಏಕಮುಖ ಸಂಚಾರ ಆರಂಭಿಸಲಾಗಿತ್ತು. ಉಳ್ಳಾಲ ಪೊಲೀಸರ ಸಹಿತ ರಸ್ತೆ ನಿರ್ಮಾಣ ಕಂಪೆನಿ ಕಾರ್ಮಿಕರು ಸುಗಮ ಸಂಚಾರಕ್ಕೆ  ಶ್ರಮಿಸಿದರಾದರೂ ಕೆಲ ಸಿಟಿ ಬಸ್ ಚಾಲಕರ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳ ಅತಿರೇಕದ ವರ್ತನೆಯಿಂದ ಎರಡೂ ಭಾಗಗಳಲ್ಲಿ ತಡೆಯುಂಟಾಗಿ ಎಲ್ಲರೂ ತೊಂದರೆ ಅನುಭವಿಸಬೇಕಾಯಿತು. ಬೆಳಿಗ್ಗೆ ಸುಮಾರು ಮೂರು ಕಿ.ಮೀ.ವರೆಗೆ ವಾಹನಗಳ ಸಾಲು ಕಂಡು ಬಂತು.  ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ನಡೆದುಕೊಂಡೇ ಸೇತುವೆ ದಾಟಿದರೆ, ಇನ್ನು ಕೆಲವು ವಿದ್ಯಾರ್ಥಿಗಳು, ಕಚೇರಿ ಕೆಲಸಕ್ಕೆ ಹೋಗುವವರು ಸಮಯ ಮೀರಿದ್ದರಿಂದ ಮನೆಗೆ ಹೆಜ್ಜೆ ಹಾಕಿದರು.

ಉಳ್ಳಾಲ ಮತ್ತು ಕಂಕನಾಡಿ ಪೊಲೀಸರು ಸಂಜೆಯವರೆಗೆ ಮುಂದುವರಿದ ಬ್ಲಾಕ್ ತಡೆಯಲು ಹರಸಾಹಸ ಪಟ್ಟರು. ರಾತ್ರಿ ವೇಳೆಗೆ ವಿಳಂಬವನ್ನು 15 ನಿಮಿಷಗಳ ಅವಧಿಗೆ ತಂದು ನಿಲ್ಲಿಸಿದ್ದಾರೆ.ತ್ವರಿತ ಕಾಮಗಾರಿ:  ಕುಸಿದ ತಡೆಗೋಡೆಯ ತ್ವರಿತ  ಕಾಮಗಾರಿಯನ್ನು  ನವ್‌ಯುಗ್ ಕನ್ಸಸ್ಟ್ರಕ್ಷನ್ಸ್ ಆರಂಭಿಸಿದೆ.  ಕುಸಿತ ಕಾಣಿಸಿಕೊಂಡ ಸ್ಥಳದಲ್ಲಿ ಪ್ರದೇಶದಲ್ಲಿ  ಮಣ್ಣು ಮತ್ತು ಮರಳಿನ ಚೀಲಗಳನ್ನು ಇಟ್ಟು  ಅದರ ಸಹಾಯದಿಂದ ಕುಸಿದ ಕಲ್ಲುಗಳನ್ನು ಸರಿಪಡಿಸಿ ಕಾಂಕ್ರಿಟೀಕರಣ ಮುಂದುವರಿಸಿದ್ದಾರೆ. ಸ್ಥಳಕ್ಕೆ  ಸಚಿವ ಕೃಷ್ಣ ಪಾಲೇಮಾರ್, ಶಾಸಕ ಯು.ಟಿ.ಖಾದರ್ ಮೊದಲಾದವರು ಭೇಟಿ ನೀಡಿದ್ದರು.ರಾತ್ರಿ ವೇಳೆ ಕಾಮಗಾರಿ ಪೂರ್ಣ: ಶುಕ್ರವಾರ ತಡರಾತ್ರಿ ವೇಳೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ನಡೆಸಿದ ಕಾಂಕ್ರೀಟ್ ಗಟ್ಟಿಯಾಗುವವರೆಗೆ ಅದರ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ನವ್‌ಯುಗ್ ಕನ್ಸ್‌ಸ್ಟ್ರಕ್ಷನ್ಸ್ ಯೋಜನಾ ಪ್ರಬಂಧಕ ಶ್ರೀನಿವಾಸ ರಾವ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಭಾನುವಾರ ಸುಗಮ ಸಂಚಾರ ಸಾಧ್ಯವಾಗಬಹುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry