ಹೆಪ್ಪುಗಟ್ಟದ ಅವಸರದ ನಡಿಗೆ

ಬುಧವಾರ, ಜೂಲೈ 17, 2019
26 °C

ಹೆಪ್ಪುಗಟ್ಟದ ಅವಸರದ ನಡಿಗೆ

Published:
Updated:

ಎಂ.ಎಸ್.ಶೇಖರ್ ಅವರು ಮಂಡ್ಯ ನಗರಕ್ಕೆ ಒರಗಿಕೊಂಡಿರುವ ತೂಬಿನಕೆರೆಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಪ್ರಾಧ್ಯಾಪಕರು. ಅವರ `ಗರಿಕೆ~ ಎನ್ನುವ ಸಂಕಲನದಲ್ಲಿ ಇಪ್ಪತ್ತೆಂಟು ಕವಿತೆಗಳಿವೆ.

ಅವರುಕಡಿದು ಹಾಕಬಹುದು ಮರಗಳನ್ನು

ಆದರೇನು? ತಡೆಯಲಾಗದು

ವಸಂತ ಋತುವನ್ನು

(`ಕರಪತ್ರ~ದಲ್ಲಿ ಪ್ರಿಂಟಾಗಿದ್ದ ಘೋಷ ವಾಕ್ಯ)

ಹೀಗೆ ಹೇಳುತ್ತಿರಬಹುದು `ಗರಿಕೆ~ಯ ರಕ್ಷಾಪುಟವಾಗಿರುವ ಭಾವಚಿತ್ರ ಹಾಗೂ ಆ ಭಾವಚಿತ್ರಕ್ಕೆ ಇಂಬಾಗಿರುವ ಮರ. ಈ ನೆಲದ ಶೋಷಿತರಿಗೂ ಸಂಕೇತಕ್ಕೂ ಅವಿನಾಭಾವ ಸಂಬಂಧವಿದೆ. ಹೋರಾಡುತ್ತಲೇ ತಲುಪಬೇಕಿರುವ ಗುರಿಯನ್ನು ಸಂಕೇತವೇ ನಿರ್ಧಾರ ಮಾಡುತ್ತಿರುತ್ತದೆ. ನಿಂತ ನೆಲೆ ಕುಸಿಯುತ್ತಿದೆ ಎಂದುಕೊಂಡಾಗಲೆಲ್ಲ ಸಂಕೇತವೇ ಹಿಡಿದೆತ್ತಿ ನಿಲ್ಲಿಸುತ್ತದೆ.ಇದು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಎನಿಸಿದರೂ, ಒಂದು ಕಡೆ ಸೇರಿಸುವ ಆಶಯವೂ ಸಂಕೇತಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಷಿತರ ಮೇಲೆ ಹಿಂಸೆ ಹೆಚ್ಚಿದಷ್ಟೂ ಮರುಹುಟ್ಟಿನ ಸಂಕೇತಗಳನ್ನು ತಬ್ಬಿಕೊಳ್ಳುವುದನ್ನು `ಗರಿಕೆ~ ತೋರಿಸುತ್ತಿದೆ.`ಗರಿಕೆ~ಯಲ್ಲಿ ಸೇರಿರುವ ಕವಿಯ ಮೊದಲ ಮಾತಿಗೂ, ಇಲ್ಲಿನ ರಚನೆಗಳಿಗೂ ವೈರುಧ್ಯವಿದೆ ಎನಿಸುವುದಿಲ್ಲ. ಅಷ್ಟರಮಟ್ಟಿಗೆ ಕವಿಯ ಮಾತು ಪ್ರಾಮಾಣಿಕವಾಗಿರುವುದು.ಈ ಪ್ರಾಮಾಣಿಕತೆಗೆ ಎರಡು ಉದ್ದೇಶಗಳಿವೆ.

1. ನಿರೂಪಕ ಹುಟ್ಟಿ-ಬೆಳೆದು, ಬಂದಿರುವ ಪರಿಸರವನ್ನು ಕವಿತೆಯಾಗಿ ಕಟ್ಟುವುದು.

2. ನಿರೂಪಣೆಯಲ್ಲಿರುವ ಉದ್ದೇಶಗಳ ಕಟ್ಟನ್ನು ಓದುಗರಿಗೆ ರವಾನಿಸುವುದು.ಈ ಎರಡು ಅಂಶಗಳು ಕವಿತೆಯಲ್ಲಿ ಬೇರೆಬೇರೆ ಇರುವವು ಎಂದು ಕವಿ ಭಾವಿಸಿದಂತಿದ್ದು, ಎರಡನೆಯದಕ್ಕೆ ಹೆಚ್ಚು ಒತ್ತು ಬಿದ್ದಿರುವುದು. ಉದ್ದೇಶವನ್ನು ಬರೆಯ ಹೊರಟಾಗ ಕವಿತೆ ಇರುವುದೆ? ಈ ಪ್ರಶ್ನೆಯೂ ಇಲ್ಲಿಯೇ ಹುಟ್ಟುತ್ತದೆ.`ಗರಿಕೆ~ಯ ಎಲ್ಲಾ ರಚನೆಗಳನ್ನು ಓದಿದಾಗ ಆತ್ಮಕಥಾನಕವೊಂದು ಇಣುಕುತ್ತಿರುವುದು ಕಂಡುಬರುತ್ತದೆ. ಆ ಆತ್ಮಕಥನದ ಎಳೆಗಳಲ್ಲಿ ಹಿಂದಿನದನ್ನು ಹೇಳಲೋ, ಇವತ್ತು ಅನುಭವಿಸುತ್ತಿರುವುದನ್ನು ಹೇಳಲೋ ಎನ್ನುವ ಸಂದಿಗ್ಧತೆಯೂ ಸಾಕಷ್ಟಿದೆ.ಸಮುದಾಯದ ಅವಮಾನ, ಸಂಕಟವೂ ಸೇರಿಕೊಂಡಂತೆ ಬದುಕಿನ ಬಟ್ಟೆಯನ್ನು ಚಿಂದಿಯಲ್ಲಿ ಕಾಣಿಸಲೆತ್ನಿಸುತ್ತದೆ `ಮೆಟ್ಟಿ ನಡೆಯುವುದೇಗೆಂದು~ ಎನ್ನುವ ರಚನೆ.`ಚಪ್ಗೋಡು~ ಎನ್ನುವ ರಚನೆ ಪ್ರಾದೇಶಿಕ ಪದ ಪ್ರಯೋಗದಿಂದಾಗಿ ಭಿನ್ನವಾಗಿ ಕಾಣಿಸುವುದು. ಇಲ್ಲಿ `ಚಪ್ಗೋಡು~ ಎಂದರೆ `ಸ್ವತ್ತು~ ಎಂದರ್ಥ. ಸ್ವತ್ತು ಎಂದು ಕರೆಯಲು ನಿರೂಪಕರು ತಯಾರಿಲ್ಲ. ಕಾರಣ, ತಾನು ಬೆಳೆದು ಬಂದಿರುವ ಪ್ರಾದೇಶಿಕತೆಯ ಮೂಲ ಸೊಗಡನ್ನು ಬಳಸುವ ಕಕ್ಕುಲಾತಿ ಪ್ರಧಾನವಾಗಿದೆ.

 

ಈ ಮೂಲಕ ಹುಟ್ಟಿ ಬೆಳೆದ ಊರಿಗೆ ಮರಳುವ ಕಷ್ಟವನ್ನು ಕವಿತೆ ಹೇಳುತ್ತದೆ. ಅಜ್ಜನ ಧ್ವನಿ ಕಿವಿಗೆ ಬಿದ್ದುಬಿಟ್ಟರೆ, ಮೇಲಿನ ಕೇರಿಯವರು ಕೊಂಕು ಮಾತನಾಡಿ ರಕ್ತ ಕುದಿಗೊಂಡರೆ, ಈ ಭಯವೇ ಆವರಿಸಿಕೊಂಡಿರುವುದನ್ನು `ಚಪ್ಗೋಡು~ ತಿಳಿಸುತ್ತದೆ. ಹಾಗೆ ತಿಳಿಸಿ ಮೂವತ್ತು - ನಲವತ್ತು ಸೈಟಿಗೆ ಅರ್ಜಿ ಹಾಕಿಕೊಂಡಿರುವ ಪಾಡನ್ನು ವಿಷಾದದಿಂದ ನೆನೆಯುತ್ತದೆ.ನಗರದಲ್ಲಿಯೂ ಇರಲಾರದೆ, ಊರಿಗೂ ಹೋಗಿಬರದ ಸಂಘರ್ಷ ಏರ್ಪಟ್ಟಿದ್ದರೂ, ತಂದೆಯ ನೆನಪು ಮಗ್ಗುಲಾಗಿ ಒತ್ತುವುದು. ತಂದೆಯು ತಕ್ಕಡಿಯ ಮುಳ್ಳಿನ ಹಾಗೆ ಬದುಕಿದ ರೀತಿಯನ್ನು, ಸುತ್ತಲಿನ ಹಳ್ಳಿಗಳಿಗೆಲ್ಲ ಬೇಕಾಗುವ ಹಾಗೆ ಗತ್ತಿನಲ್ಲಿ ಜೀವಿಸಿದ್ದನ್ನು `ಬರಿಗಾಲ ಸಂತ~ ರಚನೆ ಪರಿಚಯಿಸುವುದು.

 

ಅಪ್ಪನ ಹಾಗೆ ಅವ್ವನೂ ಮಕ್ಕಳಿಗಾಗಿ ಜೀವವನ್ನೇ ತೇದುಕೊಂಡವಳು. ಹೊತ್ತ ಕುಕ್ಕೆಯಲ್ಲಿ ಮನೆವಾರ್ತೆಯನ್ನು ಸಂಭಾಳಿಸಿದವಳು. ಇಲ್ಲಿನ `ಅವ್ವ~ ತನ್ನ ಸೂರಿನ ಕೆಳಗೆ ಆಡುವ ಕರುಳಿನ ಕುಡಿಗಳ ಕನಸುಗಳನ್ನು ಜೋಪಾನಮಾಡಿದ ಧೀರೆಯೂ ಆಗಿದ್ದಾಳೆ. ಇಲ್ಲಿ ಬರುವ `ದೊಡ್ಡಕ್ಕ~ ನಿರೂಪಕರಿಗೆ ಮಾತ್ರವಲ್ಲದೆ ಕೇರಿಗೂ ಅಕ್ಕನಾಗಿ ಕಂಡಿರುವಳು.

 

ತಮ್ಮನ ಕೈಕಾಲು ಬಲಿತುಕೊಳ್ಳಲಿ ಎಂದು ಆಗತಾನೆ ಕೋಳಿ ಇಟ್ಟ ಮೊಟ್ಟೆಯನ್ನೇ ಕೊಟ್ಟು ಸಲಹಿರುವಳು. ಕೊಬ್ಬರಿ ಬೆಲ್ಲ ತಿನ್ನಿಸಿ ಸಿಹಿಯಲ್ಲಿ ಬೆಳೆಸಿದ ಅಕ್ಕನ ಅಕ್ಕರೆ ವಯೋಮಾನದ ಹಂಗಿಲ್ಲದೆ ನೆರಳಾಗಿರುವುದನ್ನು `ದೊಡ್ಡಕ್ಕ~ ರಚನೆ ತಿಳಿಸುವುದು.ಮನೆಮಂದಿಯಷ್ಟೆ ಸಲುಗೆ ಬೆಳೆದಿರುವ ಮಿಠಾಯಿ `ಸಾಬ್ರಜ್ಜ~ ಇಲ್ಲಿ ಪ್ರೀತಿಯನ್ನೇ ಹಂಚಿಬಿಟ್ಟು, ಸರಿದುಹೋಗಿರುವ ಕಾಲದ ಒಂದು ವಿಸ್ಮಯ ಭಂಗಿಯಾಗಿ ನಿಂತಿದ್ದಾನೆ.ನಿರೂಪಕರು ಹಲವರ ಪ್ರೀತಿಯ ಕಂಕುಳಲ್ಲಿ ಕುಂತು ಬಂದಿರುವುದರಿಂದ ಇತರರಿಗಾಗಿಯೂ ಕರುಳು ಮಿಡಿಯುತ್ತದೆ. ಹಾಗಾಗಿಯೆ ಗಂಡನನ್ನು ಕಳೆದುಕೊಂಡು ಕಟ್ಟಳೆಯಲ್ಲಿ ಜೀವಿಸುವ ಬ್ರಾಹ್ಮಣ ಹೆಣ್ಣುಮಗಳನ್ನು `ನಮ್ಮ ಕೇರಿಗೆ ಬಾ ತಾಯಿ~ ಎಂದು ಆಹ್ವಾನಿಸುವುದಿದೆ.ಊರು ಎಂದ ಮೇಲೆ ಪಟೇಲರು ಇರುವುದು, ಪಟೇಲರು ಇದ್ದ ಮೇಲೆ ಆಳುಮಗನೂ ಇರಬೇಕೆಂಬುದು ರೂಢಿ ಮಾತು. ಈ ಮಾತಿಗೆ ಬೇರೊಂದು ಬಣ್ಣವನ್ನು ತುಂಬುವುದು `ಪಟೇಲರ ಬೀಜದ ಹೋರಿಯೂ, ಆಳುಮಗನ ಗಿಡ್ಡ ಹೋರಿಯೂ~ ರಚನೆ. ಇದು ಪಟೇಲರಲ್ಲಿ `ಇಲ್ಲ~ದ ಪಟ್ಟಿಯನ್ನು ಮಾಡಿ, ಪಟೇಲರಲ್ಲಿ ಇರುವುದೆಲ್ಲವನ್ನೂ `ಅಷ್ಟೇ~ ಎಂದುಕೊಳ್ಳುತ್ತದೆ. ಇದಕ್ಕೂ ಮಿಗಿಲಾಗಿ ಒಡತಿ ಮತ್ತು ಆಳುಮಗನ ಸಂಲಗ್ನವನ್ನು ಊರ್ಧ್ವಗೊಳಿಸುತ್ತದೆ.`ಹೆಪ್ಪುಗಟ್ಟುತ್ತಿಲ್ಲ ನಮ್ಮ ಮನೆಯ ಹಾಲು~ ಎಪ್ಪತ್ತರ ದಶಕದ ನೆನಪನ್ನು ಕೆದಕಲು ಬಯಸುವುದು. ಆ ಕಾಲದಲ್ಲಿ ಹೊಸ ಸಂಚಲನ ಉಂಟುಮಾಡಿದ `ಹೊಲೆಮಾದಿಗರ ಹಾಡು~ ಎನ್ನುವುದು ಕವನ ಸಂಕಲನದ ಹೆಸರಷ್ಟೇ ಆಗದೆ ಸಮುದಾಯಗಳ ಸಾಂಘಿಕತೆಯನ್ನು ಪ್ರತಿಪಾದಿಸಿತ್ತು.ಆದರೆ ಕ್ರಮೇಣ ದಲಿತ ಸಂಘರ್ಪ ಸಮಿತಿಯ ಒಡಕು, ಒಳಮೀಸಲಾತಿಯ ನಿರೀಕ್ಷೆ ಹೊಲೆಯ ಸಮುದಾಯ ಮತ್ತು ಮಾದಿಗ ಸಮುದಾಯಗಳಲ್ಲಿ ಎಡಗೈ-ಬಲಗೈಯಾಗಿ ಕವಲೊಡೆಯಿತು. ಹೀಗೆ ಬೇರೆಯಾಗಿರುವ ನೋವನ್ನು ದಾಟಿಸುವ ಈ ರಚನೆ ತಮ್ಮ ಹಾಲಿನಂತಹ ಸೋದರ ಸಂಬಂಧಕ್ಕೆ ಹುಳಿ ಹಿಂಡಿದವರು ಮೂರನೇ ವ್ಯಕ್ತಿಯೆಂದು ತಣ್ಣಗೆ ಆರೋಪಿಸುತ್ತದೆ, ಮತ್ತೆ ಒಂದಾಗುವ ಆಶಯವನ್ನೇ ಆಂತರ್ಯದಲ್ಲಿ ಉಳಿಸಿಕೊಂಡಿರುವುದು.ಮೇಲಿನ ಮಾತುಗಳಲ್ಲಿ `ಗರಿಕೆ~ ಸಂಕಲನ ಹೇಳಲು ಹೊರಟಿರುವುದನ್ನು ಸೂಚಿಸಲು ಮತ್ತು ಸಮುದಾಯದ ವಿವರಗಳನ್ನೇ ಕವಿತೆಯೆಂದು ಭಾವಿಸಿಬಿಟ್ಟಿರುವ ಅವಸರದ ನಡಿಗೆಯನ್ನು ತೋರಿಸಲು ಉದಾಹರಿಸಲಾಗಿದೆ. ಮುಖ್ಯವಾಗಿ ಗರಿಕೆ ಸಂಕಲನದ ಭಿತ್ತಿಯಲ್ಲಿ ದೀರ್ಘವಾಗಬಹುದಾದ ಆತ್ಮಕಥನದ ಆವರಣವೊಂದು ತರೆದುಕೊಳ್ಳುತ್ತದೆ.ಸಮುದಾಯದ ನೆನಪುಗಳನ್ನು ಇಡಿಗಂಟಾಗಿ ಬಳಸುವ ಹಂಬಲವಿಲ್ಲಿ ಧಾರೆಯಾಗಿದ್ದರೂ, ಆ ವಿವರಗಳ ಯಥಾರ್ಥತೆಯನ್ನೇ ಕವಿತೆ ಎಂದುಕೊಳ್ಳಲು ಕಷ್ಟವಾಗುತ್ತದೆ. ಈ ಸಂಕಲನದಲ್ಲಿ ತಲೆದೋರಿರುವ ಇನ್ನೊಂದು ಸಮಸ್ಯೆಯೂ ಇದೆ.ಸಮುದಾಯದ ಕಥನವು ಇಲ್ಲಿನ ರಚನೆಗಳಿಗೆ ಹಿನ್ನೆಲೆಯಾಗಿ ಒದಗಿ ಬಂದಿದ್ದರೂ, ಆ ಸಮುದಾಯದ ಹೊರಗೆ ನಿರೂಪಕರು ನಿಂತಂತೆ ಭಾಸವಾಗುತ್ತದೆ. ಹಾಗಾಗಿ ಇಲ್ಲಿನ ರಚನೆಗಳು ವೀಕ್ಷಣಾವಿವರಣೆಯ ಕಡೆಗೇ ಹೆಚ್ಚು ಬಾಗುತ್ತವೆ ಅನಿಸುತ್ತದೆ.ಗರಿಕೆ

ಲೇ: ಎಂ.ಎಸ್.ಶೇಖರ್

ಪು: 91; ಬೆ: ರೂ.100

ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ ಜಿಲ್ಲೆ- 583113

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry