ಸೋಮವಾರ, ಮೇ 17, 2021
31 °C

ಹೆಬ್ಬಾರ್ ಸ್ಮರಣೆಗೆ ಪ್ರತಿಷ್ಠಾನ-ಲಕ್ಷ ರೂಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್ ಸ್ಮರಣಾರ್ಥ ಶೀಘ್ರ `ಹೆಬ್ಬಾರ್ ಪ್ರತಿಷ್ಠಾನ~ ಸ್ಥಾಪಿಸಲಾಗುವುದು. ಮುಂದಿನ ವರ್ಷದಿಂದ ಹೆಬ್ಬಾರ್ ಹೆಸರಿನಲ್ಲಿ ಕಲಾವಿದರಿಗೆ ರೂ.1 ಲಕ್ಷ ಮೊತ್ತದ ಪ್ರಶಸ್ತಿ ನೀಡಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯಿತಿ ಹಾಗೂ ಡಾ.ಕೆ.ಕೆ.ಹೆಬ್ಬಾರ್ ಜನ್ಮಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಎಂ.ಜಿ.ಎಂ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ `ಡಾ.ಕೆ.ಕೆ.ಹೆಬ್ಬಾರ್-100~ ಸಮಾರೋಪದಲ್ಲಿ ಅವರು ಮಾತನಾಡಿದರು.`ಸರ್ಕಾರದ ವತಿಯಿಂದ ಕಳೆದ ವರ್ಷವೇ ಜನ್ಮಶತಾಬ್ದಿಯನ್ನು ಪ್ರಾರಂಭಿಸಲಾಗಿದೆ. ಅದರಂತೆ ಹೆಬ್ಬಾರ್ ಪ್ರತಿಷ್ಠಾನ ರಚನೆ ಪ್ರಕ್ರಿಯೆ ನಡೆಯುತ್ತಿದೆ. ಹೆಬ್ಬಾರ್ ನೆನಪಿನ ಅಂಚೆಚೀಟಿ ಹೊರತರುವಂತೆ ಕೇಂದ್ರ ಅಂಚೆ ಇಲಾಖೆಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಮಾತುಕತೆ ನಡೆದಿದೆ. ಆದರೆ ಕಾರ್ಯರೂಪಕ್ಕೆ ಬರಲಿಲ್ಲ.ಹೆಬ್ಬಾರ್ ನೆನಪಿನ ಕಲಾ ಗ್ಯಾಲರಿ, ಕಲಾವಿದರಿಗೆ ಹೆಬ್ಬಾರ್ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಅದರೊಂದಿಗೆ ಅವರ ಹುಟ್ಟೂರಾದ ಕಟ್ಟಿಂಗೇರಿಯ ಚಿತ್ರ ಕಲಾ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಆಸಕ್ತ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು~ ಎಂದು ಆಚಾರ್ಯ ತಿಳಿಸಿದರು.`ಹೆಬ್ಬಾರ್ ಅವರಂತಹ ಕಲಾವಿದರನ್ನು ಸ್ಮರಿಸುವುದು ಅತ್ಯಗತ್ಯ. ಅವರ ಕುರಿತಾದ ಕಾರ್ಯಕ್ರಮ ಯೋಗ್ಯ ರೀತಿಯಲ್ಲಿ ನಡೆಯಬೇಕು. ಕಡು ಬಡತನದಿಂದ ಅರಳಿದ ಕಲಾವಿದ ಹೆಬ್ಬಾರ್ ಅವರ ಬದುಕು ಪ್ರಭಾವಶಾಲಿಯಾದದ್ದು~ ಎಂದು ಅವರು ಹೇಳಿದರು.ಪ್ರೊ.ಕು.ಶಿ.ಹರಿದಾಸ್ ಭಟ್ ಅವರು 1988ರಲ್ಲಿ ಪ್ರಕಟಿಸಿದ್ದ `ಕಟ್ಟಂಗೇರಿ ಕೃಷ್ಣ ಹೆಬ್ಬಾರ್-ಕಲೆ ಮತ್ತು ಬದುಕು~ ಕೃತಿಯ ಮರುಮುದ್ರಣವನ್ನು ಡಾ.ಆಚಾರ್ಯ ಬಿಡುಗಡೆ ಮಾಡಿದರು.  ಕೃತಿಯ ಬಗ್ಗೆ ವಿಮರ್ಶಕ ಡಾ.ಮುರಳೀಧರ ಉಪಾಧ್ಯರು ಮಾತನಾಡಿದರು. ಕಲಾಶಿಬಿರದಲ್ಲಿ ಪಾಲ್ಗೊಂಡಿದ್ದ ಅವಿಭಜಿತ ದ.ಕ. ಜಿಲ್ಲೆಯ 24 ಕಲಾವಿದರ ಪೈಕಿ ಮಂಗಳೂರಿನ ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಹಾಗೂ ಉಡುಪಿಯ ಕಲಾವಿದ ಸ.ಕು.ಪಾಂಗಾಳ ಅನಿಸಿಕೆಗಳನ್ನು ಹಂಚಿಕೊಂಡರು.  ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಎಂ.ಟಿ.ರೇಜು, ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಶಿವರುದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಹಾಗೂ ಪ್ರೊ.ಎಚ್.ಕೃಷ್ಣಭಟ್ ಹಾಜರಿದ್ದರು.`ಕಲಾಕೇಂದ್ರ ಸ್ಥಾಪಿಸಿ~

ಹೆಬ್ಬಾರ್ ಅವರ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಕಲಾವಿದ, ವಿಮರ್ಶಕ ಚಿ.ಸು.ಕೃಷ್ಣ ಶೆಟ್ಟಿ, `ಕಲಾವಿದ ಕೆ.ಕೆ.ಹೆಬ್ಬಾರ್ ಅವರಿಗೆ ನಿಜ ಅರ್ಥದಲ್ಲಿ ಗೌರವ ಸಲ್ಲಿಸಲು ಅವಿಭಜಿತ ದ.ಕ.ಜಿಲ್ಲೆಯಲ್ಲಿ ಹೆಬ್ಬಾರ್ ಕಲಾ ಗ್ಯಾಲರಿ ಹಾಗೂ ಬೃಹತ್ ಕಲಾಕೇಂದ್ರವನ್ನು ಸ್ಥಾಪನೆ ಮಾಡಬೇಕು~ ಎಂದು ಆಗ್ರಹಿಸಿದರು.`ಜನಪ್ರಿಯತೆಯನ್ನು ನಿರಾಕರಿಸಿ ಪರಂಪರೆಯನ್ನು ಮನನ ಮಾಡಿಕೊಂಡು ಕಲಾಕೃತಿ ರಚಿಸುತ್ತ ನಿರಂತರ ಜನಮಾನಸದಲ್ಲಿ ನೆಲೆನಿಂತ ಕಲಾವಿದರೆಂದರೆ ಹೆಬ್ಬಾರ್ ಅವರು. ರೇಖೆಗಳನ್ನು ಬಳಸುವ ರೀತಿಯನ್ನೇ ಅವರು ಬದಲಾಯಿಸಿದರು. 80ರ ದಶಕದಲ್ಲಿ ಅವರು ಕಲಾಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದರು. `ಹೆಬ್ಬಾರ್ ನಡೆದಿದ್ದೇ ದಾರಿ...~ ಎನ್ನುವಂತೆ ಅವರು ತಮ್ಮದೇ ಶೈಲಿಯಲ್ಲಿ ಕಲಾಕ್ಷೇತ್ರದಲ್ಲಿ ದಾಖಲಾಗಿದ್ದಾರೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.