ಹೆಬ್ಬಾಲೆ: ಬನಶಂಕರಿದೇವಿ ಸಂಭ್ರಮದ ಜಾತ್ರೆ

7

ಹೆಬ್ಬಾಲೆ: ಬನಶಂಕರಿದೇವಿ ಸಂಭ್ರಮದ ಜಾತ್ರೆ

Published:
Updated:
ಹೆಬ್ಬಾಲೆ: ಬನಶಂಕರಿದೇವಿ ಸಂಭ್ರಮದ ಜಾತ್ರೆ

ಕುಶಾಲನಗರ: ಉತ್ತರ ಕೊಡಗಿನ ಹೆಬ್ಬಾಲೆ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ಬನಶಂಕರಿ ದೇವಿಯ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು.ಜಾತ್ರೆಯ ಅಂಗವಾಗಿ ರಾತ್ರಿ ದೇವಸ್ಥಾನ ಸಮಿತಿ ವತಿಯಿಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಿಯ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯ ಲಾಯಿತು. ನಂತರ ಹರಕೆ ಹೊತ್ತ ಭಕ್ತಾದಿಗಳು ಬನದಲ್ಲಿ ಬೆಂಕಿ ಕೊಂಡವನ್ನು ತುಳಿದು ದೇವಿಯ ದರ್ಶನ ಪಡೆದರು.

ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೇ ಭಾಗಗಳಿಂದ ಹೊರಟ ಉತ್ಸವ ಮಂಟಪಗಳು ಮಡಿಕೇರಿ ದಸರಾ ಮಾದರಿಯಲ್ಲಿ ಮೆರವಣಿಗೆಗೆ ಮೆರಗು ನೀಡಿದವು.ಮೆರವಣಿಗೆ ಸಂದರ್ಭದಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಅಗಸದಲ್ಲಿ ಹಾರಿಸಲಾದ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆದವು.ದೇವರ ಉತ್ಸವದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಅಲಂಕರಿಸಿ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಮನೆಯಂಗಳವನ್ನು ರಂಗೋಲಿಯಿಂದ ಅಲಂಕರಿಸಿದ್ದರು.ದೇವಿಯ ವಾರ್ಷಿಕ ಉತ್ಸವದ ಅಂಗವಾಗಿ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಂಜೆ ಕ್ಷೀರಾಭಿಷೇಕದ ನಂತರ ದೇವಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಗ್ರಾಮದಲ್ಲಿ ಸೇರಿದ್ದ ಜಾತ್ರೆಯು ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿತ್ತು. ಶನಿವಾರ ಹಗಲು ವೇಳೆಯಲ್ಲೂ ಕೂಡ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಜಾನಪದ ಜಾತ್ರೆ ಕೂಡ ಮುಂದುವರಿಯಲಿದೆ.ಎತ್ತಿನ ಗಾಡಿ ಓಟ: ಜಾತ್ರೋತ್ಸವದ ಅಂಗವಾಗಿ ಹೆಬ್ಬಾಲೆ ಗ್ರಾಮದಲ್ಲಿ ಮಾದರಿ ಯುವಕ ಸಂಘದ ಆಶ್ರಯದಲ್ಲಿ ಡಿ.15 ರ ಶನಿವಾರ ಬೆಳಿಗ್ಗೆ 9 ಕ್ಕೆ ಎತ್ತಿನ ಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry