ಸೋಮವಾರ, ಜೂನ್ 21, 2021
20 °C

ಹೆಬ್ಬಾಲೆ ಹೆರಿಗೆ ಆಸ್ಪತ್ರೆಗೆ ಬೇಕಿದೆ ಸೌಲಭ್ಯ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ/ಎಸ್. ರವಿ Updated:

ಅಕ್ಷರ ಗಾತ್ರ : | |

ಕುಶಾಲನಗರ:  ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಮೀಪದ ಹೆಬ್ಬಾಲೆ ಹೆರಿಗೆ ಆಸ್ಪತ್ರೆಯು ಸಿಬ್ಬಂದಿ, ಕೊಠಡಿ ಸೇರಿದಂತೆ ಹತ್ತಾರು ಕೊರತೆಗಳ ಸುಳಿಯಲ್ಲಿ ಸುಲುಕಿದ್ದು ಹೆಚ್ಚಿನ ಸೌಲಭ್ಯಗಳಿಗಾಗಿ ಕಾಯುತ್ತಿದೆ.ಸ್ವಾತಂತ್ರ್ಯ ಪೂರ್ವದಲ್ಲೇ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಂತ ಹಂತವಾಗಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಆದರೂ, ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಇಲ್ಲದೆ ಸಮಸ್ಯೆಗಳಲ್ಲಿ ನರಳುತ್ತಿದೆ. 1994ರಲ್ಲಿ ನಿರ್ಮಿಸಲಾದ ಹೊಸಕಟ್ಟಡಕ್ಕೆ ಆಸ್ಪತ್ರೆಯನ್ನು ಸ್ಥಳಾಂತರಿಸಲಾಯಿತು. ಬಳಿಕ ಇಲ್ಲಿ 2008ರಿಂದ ದಿನದ 24 ಗಂಟೆಯೂ ಹೆರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಯಿತು.ಹೆಬ್ಬಾಲೆಯು ಜಿಲ್ಲೆಯಲ್ಲೇ ದೊಡ್ಡ ಗ್ರಾಮ ಮತ್ತು ಗ್ರಾಮ ಪಂಚಾಯಿತಿ. ಈ ಭಾಗದ ಶಿರಂಗಾಲ, ತೊರೆನೂರು ಸೇರಿದಂತೆ ಮೂರ್‍ನಾಲ್ಕು ಪಂಚಾಯಿತಿಗಳ ಮೂಡಲಕೊಪ್ಪಲು, ಮಣಜೂರು, ಚಿಕ್ಕಳುವಾರ ದೊಡ್ಡಳುವಾರ, ಕಣಿವೆ ಹೀಗೆ ಹತ್ತಾರು ಗ್ರಾಮಗಳ ಸಾವಿರಾರು ಜನರು ಹೆರಿಗೆಗಾಗಿ ಈ ಆಸ್ಪತ್ರೆಯನ್ನೇ ಅವಲಂಭಿಸಿದ್ದಾರೆ.ದಿನದ 24 ಗಂಟೆಗಳ ಈ ಹೆರಿಗೆ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರು ಮಾತ್ರವೇ ಹಗಲು ರಾತ್ರಿ ಕಾರ್ಯನಿರ್ವಹಿಸಬೇಕಾಗಿದೆ. ವೈದ್ಯರು ನೀಡುವ ಮಾಹಿತಿ ಪ್ರಕಾರ ದಿನವೊಂದಕ್ಕೆ ಕನಿಷ್ಠ 80 ರಿಂದ 100 ಹೊರರೋಗಿಗಳು ಮತ್ತು 10ರಿಂದ 15 ಒಳರೋಗಿಗಳು ಬರುತ್ತಾರೆ. ಅದರೊಂದಿಗೆ ತಿಂಗಳೊಂದರಲ್ಲಿ ಕನಿಷ್ಠ 8 ರಿಂದ 10 ಹೆರಿಗೆ ಪ್ರಕರಣಗಳು ಬರುತ್ತವೆ. ಇವೆಲ್ಲವನ್ನು ಒಬ್ಬ ವೈದ್ಯರೇ ನೋಡಬೇಕಾಗಿರುವುದು ನಿಜಕ್ಕೂ ವಿಪರ್ಯಾಸ.ಅಲ್ಲದೇ, ತಿಂಗಳಿಗೆ ಎರಡು ಬಾರಿ ಆಸ್ಪತ್ರೆಯಲ್ಲಿ ನಡೆಯುವ ಕುಟುಂಬ ಕಲ್ಯಾಣ ಯೋಜನೆಯ ಶಸ್ತ್ರ ಚಿಕಿತ್ಸೆಗೆ ಕನಿಷ್ಠ 20 ಜನರು ಒಳಗಾಗುತ್ತಾರೆ. ಆದರೆ, ಇಲ್ಲಿರುವ ಎರಡೇ ಕೊಠಡಿಗಳಲ್ಲಿ ಇರುವುದು ಹನ್ನೊಂದು ಬೆಡ್‌ಗಳು ಮಾತ್ರ. ಇಂತಹ ಸಂದರ್ಭಗಳಲ್ಲಿ ಹೆರಿಗೆಗಾಗಿ ಯಾರಾದರೂ ಬಂದರೆ ಅವರನ್ನು ಮಲಗಿಸಲು ಬೆಡ್‌ಗಳೇ ಇಲ್ಲದ ಸ್ಥಿತಿ ಇದೆ. ಇದರಿಂದ ಇಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.ಬೆಳಿಗ್ಗೆಯಿಂದ ಸಂಜೆವರೆಗೆ ನೂರಾರು ರೋಗಿಗಳನ್ನು ಪರಿಶೀಲಿಸುವ ವೈದ್ಯರು, ಪುನಃ ರಾತ್ರಿ ಪಾಳೆಯಲ್ಲೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಎಷ್ಟರ ಮಟ್ಟಿಗೆ ಪರಿಶೀಲಿಸಬಹುದು ಎಂಬುದನ್ನು ಚಿಂತಿಸಬೇಕಾಗಿದೆ. ವೈದ್ಯರ ಕೊರತೆ ಒಂದೆಡೆಯಾದರೆ, ‘ಡಿ’ ದರ್ಜೆ ನೌಕರರ ಕೊರತೆ ಮತ್ತೊಂದೆಡೆ. ಆರೋಗ್ಯ ಸಹಾಯಕಿಯರು ಮತ್ತು ಬೆರಳಿಕೆಯಷ್ಟು ಇರುವ ಇತರೆ ಸಿಬ್ಬಂದಿಯಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಹೆಚ್ಚುವರಿಯಾಗಿ ಒಬ್ಬ ವೈದ್ಯ, ಇಬ್ಬರು ಆರೋಗ್ಯ ಸಹಾಯಕಿಯರು ಮತ್ತು ಇಬ್ಬರು ‘ಡಿ’ ದರ್ಜೆ ನೌಕರರ ಸೇವೆ ತೀರಾ ಅಗತ್ಯವಿದೆ. ಅಲ್ಲದೇ, ಹೆಚ್ಚುವರಿ ಕೊಠಡಿ ಮತ್ತು ಬೆಡ್‌ಗಳ ಅಗತ್ಯವಿದ್ದು, ತಕ್ಷಣವೇ ಈ ಸಮಸ್ಯೆಗಳು ಬಗೆಹರಿದಲ್ಲಿ ನೂರಾರು ರೋಗಿಗಳಿಗೆ ಅನುಕೂಲವಾಗಲಿದೆ.ಮೇಲಧಿಕಾರಿಗಳಿಗೆ ಪತ್ರ

ಹೆಬ್ಬಾಲೆ ಆಸ್ಪತ್ರೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹೆಚ್ಚುವರಿ ವೈದ್ಯರು, ಆರೋಗ್ಯ ಸಹಾಯಕಿಯರು, ಕೊಠಡಿ, ಮತ್ತು ಬೆಡ್‌ಗಳನ್ನು ನೀಡುವಂತೆ ಇಲಾಖೆ ಮೇಲಿನ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

– ಡಾ.ಪ್ರದೀಪ್ ಕುಮಾರ್, ವೈದ್ಯರು ಹೆಬ್ಬಾಲೆ ಆಸ್ಪತ್ರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.