ಹೆಬ್ರಿ ನವೋದಯ ವಿದ್ಯಾಲಯ ವಿದ್ಯಾರ್ಥಿನಿ ಜಪಾನ್ಗೆ
ಹೆಬ್ರಿ: ಛಲ ಬಿಡದೇ ಓದಿ ಯಶಸ್ಸಿನತ್ತ ಸಾಗುತ್ತ ಬಂದ ಬಾಲೆ ಸುಕೃತಿಗೆ ಈಗ ವಿದೇಶ ಪ್ರವಾಸದ ಯೋಗ ಕೂಡಿ ಬಂದಿದೆ.ಹೆಬ್ರಿಯ ಚಾರದ ಜವಾಹರ್ ನವೋದಯ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾರ್ಕಳ ತಾಲ್ಲೂಕು ಕಚೇರಿ ಬಳಿಯ ನಿವಾಸಿ ಕೃಷ್ಣ ಆಚಾರ್ಯ ಮತ್ತು ಸುಲೋಚನಾ ಕೆ. ದಂಪತಿ ಪುತ್ರಿ.
ಕೇಂದ್ರ ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಮಾನವ ಸಂಪನ್ಮೂಲ ಸಚಿವಾಲಯ ಜಪಾನ್ ಸರ್ಕಾರದ ಸಹಯೋಗ ಪಡೆದು ವಿದ್ಯಾರ್ಥಿಗಳಿಗೆ 14 ದಿನಗಳ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಿದ್ದು, ಇದರಲ್ಲಿ ಸುಕೃತಿ ಪಾಲ್ಗೊಳ್ಳಲಿದ್ದಾಳೆ.
ಭಾರತದಿಂದ ಒಟ್ಟು 580 ವಿದ್ಯಾರ್ಥಿಗಳು ಈ ಪ್ರವಾಸವನ್ನು 5 ಹಂತದಲ್ಲಿ ಕೈಗೊಳ್ಳುವರು. ಜವಾಹರ್ ನವೋದಯ ವಿದ್ಯಾಲಯದ 200 ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಹೈದರಾಬಾದ್ ವಲಯದ ಜವಾಹರ್ ನವೋದಯ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದ್ದು, ಸುಕೃತಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ.
`ಈ ಅಧ್ಯಯನ ಪ್ರವಾಸಕ್ಕೆ ಆಯ್ಕೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಸುಕೃತಿಯ ಆಯ್ಕೆ ನಮಗೆಲ್ಲ ಹೆಮ್ಮೆ ತಂದಿದೆ. ಅತೀ ಶೀಘ್ರವಾಗಿ ಪಾಸ್ಪೋರ್ಟ್ ಪಡೆಯಬೇಕಾಗಿದ್ದು, ಶಾಸಕ ಗೋಪಾಲ ಭಂಡಾರಿ ವಿಶೇಷ ಮುತುವರ್ಜಿಯಿಂದ ಪಾಸ್ಪೋರ್ಟ್ ಮಾಡಿಸಲು ಸಹಕರಿಸಿದ್ದಾರೆ~ ಎಂದು ವಿದ್ಯಾಲಯದ ಪ್ರಾಚಾರ್ಯ ಕೆ.ವಿ.ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು
ಜೆನೆಸಿಸ್ (ಜಪಾನ್ ಈಸ್ಟ್ ಏಷ್ಯ ನೆಟವರ್ಕ್ ಆಫ್ ಎಕ್ಸಚೇಂಜ್ ಫಾರ್ ಸ್ಟೂಡೆಂಟ್ಸ್ ಆಫ್ ಯೂತ್) ಕಾರ್ಯಕ್ರಮದಡಿ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ನವೋದಯ ವಿದ್ಯಾಲಯ ಅಧ್ಯಕ್ಷ ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಶಾಸಕ ಎಚ್. ಗೋಪಾಲ ಭಂಡಾರಿ, ಪ್ರಾಂಶುಪಾಲ ಕೆ.ವಿ.ಸುರೇಶ್, ಸಂಸ್ಥೆಯ ವಿದ್ಯಾಲಯದ ಪಿಟಿಸಿಯ ಮುಖ್ಯಸ್ಥರು ಸೇರಿದಂತೆ ಎಲ್ಲರೂ ಸುಕೃತಿಯ ಜಪಾನ್ ಪ್ರವಾಸಕ್ಕೆ ಶುಭ ಹಾರೈಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.