ಹೆಮ್ಮರದಲಿ ಚೀಂವ್ ಚೀಂವ್

7

ಹೆಮ್ಮರದಲಿ ಚೀಂವ್ ಚೀಂವ್

Published:
Updated:

ಹೆಮ್ಮರಗಾಲ ಎಂಬುದೊಂದು ಊರು. ನಂಜನಗೂಡು ತಾಲೂಕಿನ ಸುಪರ್ದಿಗೆ ಸೇರಿದೆ ಅದು. ಅಲ್ಲೊಂದು ಪುಟ್ಟ ಶಾಲೆ. ಹೆಸರು ಹೆಮ್ಮರಗಾಲ ಸರ್ಕಾರಿ ಪ್ರೌಢಶಾಲೆ. ಅಲ್ಲಿ ಅಕ್ಷರದ ಕೈ ಹಿಡಿದ `ಹಕ್ಕಿಮರಿ~ಗಳಿಗೆ ಒಮ್ಮೆ ಹೊಸತೇನಾದರೂ ಮಾಡಬೇಕು ಅಂತ ಯೋಚನೆ ಹುಟ್ಟಿಕೊಂಡಿತು. ಆಗ ಗುರುಗಳು ಮರಿಗಳ ನೆರವಿಗೆ ಬಂದರು.

 

`ಮಕ್ಕಳಾ ನಾವೆಲ್ಲಾ ಸೇರಿ ಯಾಕೆ ಒಂದು ಪತ್ರಿಕೆ ಹೊರಡಿಸಬಾರದು?~ ಅಂತ ಕೇಳಿದರು. ಹಕ್ಕಿಮರಿಗಳಿಗೆ ಖುಷಿಯೋ ಖುಷಿ. ಓದುತ್ತಿರುವಾಗಲೇ ಪತ್ರಕರ್ತರಾಗುವೆವು ಎಂಬ ಹೆಮ್ಮೆ. ಸರಿ ಪತ್ರಿಕೆಗೆ ಏನೆಂದು ಹೆಸರಿಡೋದು ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಊರಿನ ಹೆಸರು ಹೆಮ್ಮರಗಾಲ.ಅದರ ಮೊದಲರ್ಧ ಹೆಸರನ್ನೇ ಪತ್ರಿಕೆಗೆ ಇಡಬಹುದಲ್ಲಾ ಬಹಳ ಮಜವಾಗಿರುತ್ತೆ ಎಂದು ದೊಡ್ಡವರು ಚಿಕ್ಕವರು ತೀರ್ಮಾನಕ್ಕೆ ಬಂದರು. ಸರಿ `ಹೆಮ್ಮರ~ ಪತ್ರಿಕೆ ಹುಟ್ಟಿಕೊಂಡಿತು. ತಿಂಗಳಿಗೊಮ್ಮೆ ಅದನ್ನು ಪ್ರಕಟಿಸುವುದು ಎಂದೂ ನಿರ್ಧಾರಕ್ಕೆ ಬರಲಾಯಿತು.ಆದರೆ ಒಂದು ಷರತ್ತು, ಪತ್ರಿಕೆ ಕೈ ಬರಹದಲ್ಲೇ ಇರಬೇಕು ಎಂದು ತೀರ್ಮಾನಿಸಲಾಯಿತು. ಶಾಲೆಯ `ನಾಟ್ಗದ ಮೇಸ್ಟ್ರು~ ಸಂತೋಷ ಗುಡ್ಡಿಯಂಗಡಿ ಪತ್ರಿಕೆಯ ಸಂಪಾದಕರಾದರು. ಮೈಸೂರು ಸೀಮೆಯ ಆಡುನುಡಿಯನ್ನೇ ಬಳಸಿ ಮಕ್ಕಳಿಗೆ ಅರ್ಥವಾಗುವಂತೆ ಪತ್ರಿಕೆ ತಂದರು.ನಗೆಹನಿ, ನೀತಿಕತೆ, ಕವನ, ನಗೆಹನಿ ಇತ್ಯಾದಿ ಇತ್ಯಾದಿ `ಹಣ್ಣು~ಗಳು ಆ ಹೆಮ್ಮರದಲ್ಲಿ ಮೂಡಿದವು. ಒಂದೆಡೆ ಮರಿಗಳು ಆ ಮರಕ್ಕೆ ಹಣ್ಣುಗಳನ್ನು ತಂದು ಪೇರಿಸುತ್ತಿದ್ದವು. ಇನ್ನೊಂದೆಡೆ ಮತ್ತಷ್ಟು ಮರಿಗಳು ತಂದ ಹಣ್ಣನ್ನು ಸವಿಯುತ್ತಿದ್ದವು. ಪತ್ರಿಕೆಯೊಂದೇ ಸಾಕಾಗದು ಅನ್ನಿಸಿತು.

 

ಆಗ ಆ ಮರಿಗಳೆಲ್ಲಾ ಸೇರಿಕೊಂಡು ಒಂದು ದಿನ ಸಂಘ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದವು. ಪಕ್ಕದೂರಿನವರೇ ಆದ ಸಾಹಿತಿ ದೇವನೂರ ಮಹದೇವ ಅವರ ಹೆಸರನ್ನು ಸಂಘಕ್ಕೆ ಇಟ್ಟವು. ಹೀಗೆ `ದೇವನೂರ ಮಹದೇವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ~ ಹುಟ್ಟಿಕೊಂಡಿತು. 29 ಜುಲೈ 2011ರಂದು ಸಂಘದ ಉದ್ಘಾಟನೆ ಹಾಗೂ ಪತ್ರಿಕೆ ಎರಡನೇ ವರ್ಷಾಚರಣೆ ನಡೆಯಿತು.ಈಗ ಹೆಮ್ಮರದಲ್ಲಿ ಹಕ್ಕಿಗೂಡು ಮೂಡಿದೆ. ಅರ್ಥಾತ್ ಪತ್ರಿಕೆಯ ವಿಶೇಷ ಸಂಚಿಕೆ `ಹೆಮ್ಮರದಲ್ಲಿ ಹಕ್ಕಿಗೂಡು~ ಪ್ರಕಟವಾಗಿದೆ. ಸಂಚಿಕೆಯ ವಿಶೇಷ ಏನಪ್ಪಾ ಅಂದರೆ, ದೇವನೂರ ಮಹದೇವ `ಒಂದು ಲಾಲಿ ಪದ~ ಬರೆದು `ದೂರಿ~ ಹಾಡಿದ್ದಾರೆ. ಕವಿಗಳಾದ ಸುಬ್ರಾಯ ಚೊಕ್ಕಾಡಿ, ಜ್ಯೋತಿ ಗುರುಪ್ರಸಾದ್, ರೂಪ ಹಾಸನ, ಸಾಹಿತಿಗಳಾದ ನಾ.ಡಿಸೋಜಾ, ಶ್ರೀನಿವಾಸ ವೈದ್ಯ, ರಂಗಕರ್ಮಿ ರಘುನಂದನ, ಪತ್ರಕರ್ತರಾದ ನಾಗೇಶ ಹೆಗಡೆ, ಜಿ.ಪಿ.ಬಸವರಾಜು ಮಕ್ಕಳ ಜಗತ್ತಿನಲ್ಲಿ ವಿಹರಿಸಿದ್ದಾರೆ.ಜತೆಗೆ ಮಕ್ಕಳು ಬರೆದ ಪದ್ಯ, ಕತೆ ಹಾಗೂ ಚಿತ್ರಗಳಿಂದ `ಹಕ್ಕಿಗೂಡಿ~ನಲ್ಲಿ ಚೀಂವ್ ಚೀಂವ್ ಸದ್ದು ಇಂಪಾಗಿ ಕೇಳುತ್ತಿದೆ. ವಿಶೇಷ ಸಂಚಿಕೆಯ ಸಂಪಾದಕರು  ಸಂತೋಷ ಗುಡ್ಡಿಯಂಗಡಿ, ಹಾಗೂ ಡಿ.ಎಂ.ಜಯಣ್ಣ. ರಂಗಕರ್ಮಿ, ಕಲಾವಿದ ಚನ್ನಕೇಶವ ವಿಶೇಷ ಸಂಚಿಕೆಯನ್ನು ವಿನ್ಯಾಸಗೊಳಿಸಿದ್ದಾರೆ.

 

ಪತ್ರಿಕೆ ಕಟ್ಟುವ ನೆಪದಲ್ಲಿ ನಾಡಿನ ಖ್ಯಾತನಾಮರನ್ನೆಲ್ಲಾ ಒಂದೆಡೆ ಸೇರಿದ್ದಾರೆ. ಮಕ್ಕಳೊಂದಿಗೆ ತಾವೂ ನಲಿದಿದ್ದಾರೆ. ಹೆಮ್ಮರ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಅಂತ ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry