ಶನಿವಾರ, ಜನವರಿ 25, 2020
28 °C

ಹೆಮ್ಮರವಾದ ಕನ್ನಡ ಸಂಘ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ನಗರದಲ್ಲಿ 4 ದಶಕ­ಗಳಿಂದ ಕನ್ನಡಪರವಾಗಿ ಕೆಲಸ ಮಾಡು­ತ್ತಿರುವ ಕನ್ನಡ ಸಂಘದ ಆವ­ರಣದಲ್ಲೇ ಇಂದು ಜಿಲ್ಲಾ ಮಟ್ಟದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ವಿಶೇಷ.

 

ಒಂದು ಕಾಲದಲ್ಲಿ ನಗರದಲ್ಲಿ ಕನ್ನಡ ಮಾತನಾಡುವುದೇ ದುಸ್ತರವಾಗಿದ್ದಾಗ ಕನ್ನಡ ನಾಡು ನುಡಿಯ ಉಳಿವಿಗಾಗಿ ಸಣ್ಣದಾಗಿ ಶುರುವಾದ ಕನ್ನಡಿಗರ ಗುಂಪಿನ ಪ್ರಯತ್ನದ ಫಲವಾಗಿ ಇಂದು ಕನ್ನಡ ಸಂಘ ವಿಶಾಲವಾಗಿ ಹೆಮ್ಮರದಂತೆ ಬೆಳೆದುನಿಂತಿದೆ.1959 ರಲ್ಲಿ  ಜಾಗೃತಿ ಕನ್ನಡಿಗರ ವೇದಿಕೆಯನ್ನು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿ.ರಘುರಾಮರಾವ್‌ ಗುಂಪನ್ನು ಹುಟ್ಟುಹಾಕಿದರು. ಅವರಿಗೆ ಬೆಂಬಲವಾಗಿ ಎ.ಕೆ.ಅನಂತ­ಮೂರ್ತಿ, ಎಚ್‌.ವಿ.ಕೃಷ್ಣಮೂರ್ತಿ, ಎ.ಜಿ.ಗುರುಶಾಂತಪ್ಪ, ಎಸ್.ಬಾಬು­ಲಾಲ್‌ ಮತ್ತಿತರಿದ್ದರು.ಸುಮತಿ ಜೈನ್‌ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಿ.ಎಲ್‌.ನರಸಿಂಹನ್‌ ಉದ್ಘಾಟಿ­ಸಿದ್ದರು. ನಂತರ ಕರ್ನಾಟಕ ಸಂಘ ಎಂದು ಹೆಸರು ಬದಲಾಯಿಸ­ಲಾಯಿತು. ಕರ್ನಾಟಕ ಸಂಘದ ಸ್ಥಾಪಕ ಅಧ್ಯಕ್ಷ ಚಿ.ನಾ.ವಿಶ್ವನಾಥ­ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಸುಮಾರು 70 ಕ್ಕೂ ಹೆಚ್ಚು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.  ನಂತರ ಕನ್ನಡ ಕಲಾಸಂಘ ರಚನೆಯಾಯಿತು.ರಾಜ್ಯೋತ್ಸವ ಸಮಿತಿ ಎಂಬ ಸಂಸ್ಥೆ ಸಹ ಕನ್ನಡ ಪರ ಕಾರ್ಯಕ್ಕಾಗಿ ಸ್ಥಾಪಿತವಾಯಿತು. ಹೀಗೆ ಬೇರೆ ಬೇರೆಯಾಗಿ ಕನ್ನಡ ಕೆಲಸವನ್ನು ಸಣ್ಣದಾಗಿ ಮಾಡುತ್ತಿದ್ದ ಗುಂಪನ್ನು ಸೇರಿಸಿ ಕನ್ನಡ ಸಂಘವನ್ನು ಕಟ್ಟುವ ಕೆಲಸವನ್ನು ಮಾಡಲಾಯಿತು. ಹೀಗೆ ರಚಿತವಾಗಿದ್ದು ಇಂದಿನ ಕನ್ನಡ ಸಂಘ. 1972 ರ ಅಕ್ಟೋಬರ್‌ 2 ರಂದು ಉದ್ಘಾಟನೆಯಾಯಿತು.ಅಂದಿನಿಂದ ಇಲ್ಲಿಯವರೆವಿಗೂ ರಾಜ್ಯದ ಪ್ರಖ್ಯಾತ ನಟರು, ಸಾಹಿತಿಗಳು, ಕಲಾವಿದರು ಸಂಘಕ್ಕೆ ಭೇಟಿ ನೀಡಿದ್ದಾರೆ. ಡಾ.ರಾಜ್‌­ಕುಮಾರ್‌ ಅವರಿಗೆ ಸನ್ಮಾನ ಮಾಡುವುದರಿಂದ ಕನ್ನಡ ಸಂಘ ತನ್ನ ಚಟುವಟಿಕೆಯನ್ನು ವಿಸ್ತರಿಸಿ­ಕೊಂಡಿದ್ದು, ನೂರಾರು ಕಾರ್ಯ­ಕ್ರಮಗಳನ್ನು ನೀಡಿ ಕೆಜಿಎಫ್‌ನಲ್ಲಿ ಕನ್ನಡ ಕಂಪನ್ನು ಹರಡುತ್ತಿದೆ.ನಗರದ ಹೃದಯಭಾಗದಲ್ಲಿರುವ ಕನ್ನಡ ಸಂಘದ ಆವರಣದಲ್ಲಿ ಸುಸಜ್ಜಿತ ರಂಗಮಂದಿರವನ್ನು ರಚಿಸಬೇಕು ಎಂಬುದು ಈಗಿನ ಪದಾಧಿಕಾರಿಗಳ ಮತ್ತು ಕನ್ನಡಿಗರ ಆಶಯವಾಗಿದೆ. ಮುಖ್ಯಮಂತ್ರಿ ಚಂದ್ರು  ತಮ್ಮ ಶಾಸಕರ ಅಭಿವೃದ್ಧಿ ನಿಧಿಯಿಂದ ಐದು ಲಕ್ಷ ರೂಪಾಯಿ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾದ ಅ.ಮು.ಲಕ್ಷ್ಮೀ­ನಾರಾಯಣ ಮತ್ತು ಆರ್‌.­ನಾರಾ­ಯಣರೆಡ್ಡಿ ತಲಾ 1,11,111 ರೂಪಾಯಿ ನೀಡಿದ್ದಾರೆ. ಕನ್ನಡ ಸಂಘವನ್ನು ಆಧುನಿಕಗೊಳಿಸಿ, ಉಳಿದ ಸಮಯದಲ್ಲಿ ವಾಣಿಜ್ಯ ಉದ್ದೇಶಕ್ಕೆ ನೀಡಿ ಅದರಿಂದ ಬರುವ ಹಣದಲ್ಲಿ ಕನ್ನಡ ಚಟುವಟಿಕೆಗಳನ್ನು ನಿರಂತರ­ವಾಗಿ ನಡೆಸಿಕೊಂಡು ಹೋಗುವುದು ಕನ್ನಡ ಸಂಘದ ಗುರಿಯಾಗಿದೆ ಎನ್ನುತ್ತಾರೆ ಸಂಘದ ಪ್ರಮುಖರು.

 

ಪ್ರತಿಕ್ರಿಯಿಸಿ (+)