ಗುರುವಾರ , ನವೆಂಬರ್ 21, 2019
27 °C
ರೆಡ್ಡಿ ವೃದ್ಧಾಶ್ರಮದೆದುರು ಪೊಲೀಸ್ ಪಹರೆ

ಹೆಲಿಕಾಪ್ಟರ್‌ನಲ್ಲಿ ಹಣ ಸಾಗಣೆ ಮಾಹಿತಿ: ಕಟ್ಟೆಚ್ಚರ

Published:
Updated:

ಬಳ್ಳಾರಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಕೋಟ್ಯಂತರ ರೂಪಾಯಿ ಹಣ ತರಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮಾಜಿ ಸಚಿವ ಜನಾರ್ದನರೆಡ್ಡಿ ಒಡೆತನದ ವೃದ್ಧಾಶ್ರಮದ ಆವರಣದಲ್ಲಿನ ಹೆಲಿಪ್ಯಾಡ್‌ನಲ್ಲಿ ಪೊಲೀಸರು ಗುರುವಾರ ತೀವ್ರ ಕಟ್ಟೆಚ್ಚರ ವಹಿಸಿದರು.ನಗರದ ಬೆಳಗಲ್ ರಸ್ತೆಯಲ್ಲಿ ರೆಡ್ಡಿ ಸಹೋದರರು ಆರಂಭಿಸಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಯೆದುರಿನ ಹೆಲಿಪ್ಯಾಡ್‌ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು, ಮಾದರಿ ನೀತಿ ಸಂಹಿತೆ ಸಿಬ್ಬಂದಿ, ಕಂದಾಯ, ವಾಣಿಜ್ಯ ತೆರಿಗೆ, ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಮೂರು ಗಂಟೆಗಳ ಕಾಲ ಪಹರೆ ನಡೆಸಿದರು.ಮಾಜಿಸಚಿವ ಜಿ. ಜನಾರ್ದನರೆಡ್ಡಿ ಬಂಧನದ ಸಂದರ್ಭ ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಅವರ ಹೆಲಿಕಾಪ್ಟರ್ ಅನ್ನು ಮರಳಿ ನೀಡಲಾಗಿದ್ದು, ಅದೇ ಹೆಲಿಕಾಪ್ಟರ್‌ನಲ್ಲಿ ಹಣವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರೆತಿತ್ತು. ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತೆರಳಿ ಕಟ್ಟೆಚ್ಚರ ವಹಿಸಲಾಯಿತು. ಆದರೆ, ಹೆಲಿಕಾಪ್ಟರ್ ಬರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.ಗುರುವಾರ ಬೆಳಿಗ್ಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಗುಲ್ಬರ್ಗಕ್ಕೆ ಖಾಸಗಿ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ತೋರಣಗಲ್‌ನ ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ನ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆ ಮಾಡಿ ಮುಂದೆ ಸಾಗಿದ್ದಾರೆ. ಆದರೆ, ಅವರ ಒಡೆತನದ ಹೆಲಿಕಾಪ್ಟರ್ ಬಳ್ಳಾರಿಗೆ ಆಗಮಿಸಲಿದ್ದು, ಅದರ ಮೂಲಕ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರೆತಿತ್ತು. ಆದರೆ, ಆ ಹೆಲಿಕಾಪ್ಟರ್ ಬೆಳಗಲ್ ರಸ್ತೆಯಲ್ಲಿನ ಹೆಲಿಪ್ಯಾಡ್‌ಗೆ ಮಧ್ಯಾಹ್ನ 2ರವರೆಗೂ ಆಗಮಿಸಲಿಲ್ಲ ಎಂದು ಅವರು ತಿಳಿಸಿದರು.ಅರೆ ಸೇನಾಪಡೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯನ್ನೂ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ತಹಶೀಲ್ದಾರ್ ಶರಣಪ್ಪ, ಡಿವೈಎಸ್‌ಪಿ ರುದ್ರಮುನಿ, ಲೋಕೋಪಯೋಗಿ, ಕಂದಾಯ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎರಡು ಗಂಟೆ ಕಾಲ ಕಾದುನಿಂತಿದ್ದರು.

ಪ್ರತಿಕ್ರಿಯಿಸಿ (+)