ಶನಿವಾರ, ಮೇ 8, 2021
26 °C

ಹೆಲಿಕಾಪ್ಟರ್ ಖರೀದಿ ಅವ್ಯವಹಾರ: ಹೊಸದಾಗಿ ತನಿಖೆ ನಡೆಸಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಭಾರತೀಯ ವಾಯುಪಡೆಯ ಅತಿಗಣ್ಯ ಅಧಿಕಾರಿಗಳಿಗಾಗಿ ಇಟಲಿಯ ಕಂಪೆನಿಯೊಂದರಿಂದ 12 ಹೆಲಿಕಾಪ್ಟರ್‌ಗಳನ್ನು ಖರೀದಿಸಲಾಗಿದ್ದು ಈ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪಗಳ ಕುರಿತು ಹೊಸದಾಗಿ ತನಿಖೆ ನಡೆಸಲು ಆದೇಶಿಸಲಾಗಿದೆ.

ಹೆಲಿಕಾಪ್ಟರ್ ತಯಾರಿಕಾ ಕಂಪನಿಯಾದ ಆಗಸ್ಟಾ ವೆಸ್ಟ್‌ಲ್ಯಾಂಡ್ ಈ ಮಾರಾಟ ಕುದುರಿಸಿಕೊಳ್ಳಲು ಸ್ವಿಟ್ಜರ್‌ಲೆಂಡ್ ಮೂಲದ ಸಮಾಲೋಚಕರಿಗೆ 350 ಕೋಟಿ ರೂಪಾಯಿ ಕಮಿಷನ್ ನೀಡಿತ್ತು ಎಂಬ ಆರೋಪಗಳು ಇಟಲಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕುರಿತು ಇಟಲಿ ತನಿಖೆ ಕೈಗೊಂಡಿದೆ.

ಆರೋಪಗಳ ಕುರಿತು ತನಿಖೆ ಕೈಗೊಂಡು ಅಗತ್ಯ ಬಿದ್ದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

ಸಂಸತ್ತಿನ ಹೊರಭಾಗದಲ್ಲಿ ಅಕ್ರಮದ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ, ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಖಂಡಿತವಾಗಿ ತನಿಖೆಗೆ ಒಳಪಡಿಸುವುದಾಗಿ ತಿಳಿಸಿದರು. ಈ ಸಂಬಂಧ ಇಟಲಿ ಕೈಗೊಂಡಿರುವ ತನಿಖೆಯ ವರದಿಯನ್ನು ನೀಡಲು ರೋಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕಳೆದ ಫೆಬ್ರುವರಿಯಲ್ಲೇ ಕೋರಿರುವುದಾಗಿಯೂ ತಿಳಿಸಿದರು.

ಅವ್ಯವಹಾರ ಪ್ರಕರಣದ ಕುರಿತು ಇಟಲಿಯ ಅಧಿಕಾರಿಗಳು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ ಎಂದು ರೋಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಈಗಿರುವ ರಷ್ಯ ನಿರ್ಮಿತ ಹೆಲಿಕಾಪ್ಟರ್‌ಗಳ ಹಾರಾಟದ ಅವಧಿ ಮುಗಿಯುತ್ತ ಬಂದಿರುವುದರಿಂದ 3,546.17 ಕೋಟಿ ಮೊತ್ತದ 12 ಹೆಲಿಕಾಪ್ಟರ್ ಖರೀದಿ ಸಂಬಂಧ ಕಳೆದ 2010ರಲ್ಲಿ ಭಾರತ ಇಟಲಿಯ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.