ಹೆಲಿಕಾಪ್ಟರ್ ನಿರ್ಮಿಸಿದ ಮೆಕ್ಯಾನಿಕ್!

7

ಹೆಲಿಕಾಪ್ಟರ್ ನಿರ್ಮಿಸಿದ ಮೆಕ್ಯಾನಿಕ್!

Published:
Updated:
ಹೆಲಿಕಾಪ್ಟರ್ ನಿರ್ಮಿಸಿದ ಮೆಕ್ಯಾನಿಕ್!

ಬೆಂಗಳೂರು: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವಾಂಗಿ ಎಂಬುದು ಕುಗ್ರಾಮ. ಇಲ್ಲಿಯ ಟ್ರ್ಯಾಕ್ಟರ್ ಮೆಕ್ಯಾನಿಕ್ ಪ್ರದೀಪ್ ಮೋಹಿತೆ ಎಂಬ ಯುವಕನ ಮನೆಯ ಮುಂದೊಂದು ಹೆಲಿಕಾಪ್ಟರ್ ಯಾವಾಗಲೂ ನಿಂತಿರುತ್ತದೆ. ಅದನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಈ ಪುಟ್ಟ ಊರಿಗೆ ಲೆಕ್ಕವಿಲ್ಲದಷ್ಟು ವಿಜ್ಞಾನಿಗಳು ಬರುತ್ತಾರೆ. ಏಕೆಂದರೆ, ಕಾಲೇಜು ಮೆಟ್ಟಿಲನ್ನೂ ತುಳಿಯದ ಹಳ್ಳಿ ಹೈದ ನಿರ್ಮಿಸಿದ ಹೆಲಿಕಾಪ್ಟರ್ ಅದಾಗಿದೆ!ಯಾವ ಐಐಟಿ ಮೆಟ್ಟಿಲನ್ನೂ ಈ ಯುವಕ ತುಳಿದಿಲ್ಲ. ವೈಮಾನಿಕ ಸಲಕರಣೆ ಉತ್ಪಾದನೆ ಮಾಡುವ ಕಾರ್ಖಾನೆಗಳನ್ನು ಎಂದಿಗೂ ನೋಡಿಲ್ಲ. ಓದಿದ್ದು ಬರಿ ಒಂಬತ್ತನೇ ತರಗತಿ. ಅದೊಂದು ದಿನ ಮಗುವೊಂದರ ಕೈಯಲ್ಲಿದ್ದ ಹೆಲಿಕಾಪ್ಟರ್ ಆಟಿಕೆ ಕಂಡಿದ್ದೇ ಸಾಕಾಯಿತು; ಪ್ರದೀಪ್ ತಲೆಯಲ್ಲಿ ಹಾರಾಡುವ ಹೆಲಿಕಾಪ್ಟರ್ ನಿರ್ಮಿಸುವ ಯೋಚನೆ ಮೊಳಕೆ ಒಡೆಯಿತು. ಅಪ್ಪ ಶಿವಾಜಿ ಬೇಡ ಎಂದು ಹೇಳಿದರೂ ಕೇಳದೆ ದೊಡ್ಡ ಕೆಲಸಕ್ಕೆ ಪ್ರದೀಪ್ ಕೈಹಾಕಿಯೇ ಬಿಟ್ಟರು.ಮನೆ ಹತ್ತಿರವೇ ಟ್ರ್ಯಾಕ್ಟರ್ ಗ್ಯಾರೇಜ್ ಇಟ್ಟುಕೊಂಡಿರುವ ಈ ಗ್ರಾಮೀಣ ವಿಜ್ಞಾನಿ, ಹೆಲಿಕಾಪ್ಟರ್ ನಿರ್ಮಾಣಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸಿದರು. ಗ್ಯಾರೇಜ್‌ನಲ್ಲೇ ವೈಮಾನಿಕ ಕಾರ್ಖಾನೆ ಸಿದ್ಧವಾಯಿತು. ಮೊದಲು ಡೀಸೆಲ್ ಕಾರಿನ ಎಂಜಿನ್ ತಂದು ಪ್ರಯತ್ನ ಶುರು ಮಾಡಿದರು. ಆದರೆ, ನಿರೀಕ್ಷಿಸಿದಂತೆ ಟರ್ಬೈನ್ ಕೆಲಸ ಮಾಡದ್ದರಿಂದ ಹೆಲಿಕಾಪ್ಟರ್ ರೂಪದ ಅಸ್ಥಿಪಂಜರ ಮೇಲೇರಲಿಲ್ಲ. ನಂತರ `ಆಪೆ' ಆಟೊದಿಂದ ತಂದ ಎಂಜಿನ್ ಬಳಸಿದರು. ಅದು ಸಹ ಹೇಳಿದಂತೆ ಕೇಳಲಿಲ್ಲ.ಆವತ್ತು 2012ರ ಜುಲೈ 7. ಮಾರುತಿ 800 ಕಾರಿನ ಎಂಜಿನ್, ಆಟೊಮೊಬೈಲ್ ಸಲಕರಣೆ ಮತ್ತು ಟ್ರ್ಯಾಕ್ಟರ್ ಬ್ಯಾಟರಿ ಬಳಸಿ ಸಿದ್ಧಪಡಿಸಿದ ಹೆಲಿಕಾಪ್ಟರ್ ನೆಲಬಿಟ್ಟು ಆರು ಅಡಿ ಮೇಲಕ್ಕೆ ಹಾರಿಬಿಟ್ಟಿತು. ನಾಲ್ಕು ವರ್ಷ ಪಟ್ಟ ಪರಿಶ್ರಮಕ್ಕೆ ತಕ್ಕ ಕಾಣಿಕೆ ಸಿಕ್ಕಿತ್ತು. `ಹುಚ್ಚ' ಎಂದು ಹಂಗಿಸಿದವರಿಗೂ ಉತ್ತರ ಸಿಕ್ಕಿತ್ತು.ಹೆಲಿಕಾಪ್ಟರ್ ಮೇಲೇರಿದಾಗ ಅದರಲ್ಲಿದ್ದ ಪ್ರದೀಪ್‌ಗೆ ಆಕಾಶವೇ ಕೈಗೆಟುಕಿದ ಅನುಭವ. ಸ್ಪೀಡೋಮೀಟರ್ ಬಳಸಿ, ಎಂಜಿನ್ ನಿಯಂತ್ರಣ ಮಾಡುತ್ತಿದ್ದರು ಈ ವೈಮಾನಿಕ ವಿಜ್ಞಾನಿ. ಆದರೆ, ಏರಿದ ಕೆಲವೇ ಕ್ಷಣಗಳಲ್ಲಿ ಬ್ಲೇಡ್ ಕಟ್ಟಾಗಿದ್ದರಿಂದ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿತು.ಸಕ್ಕರೆ ಕಾರ್ಖಾನೆಯಲ್ಲಿದ್ದ ಲೇಥ್ ಮಷಿನ್‌ಗಳ ಸಹಾಯದಿಂದ ಆ್ಯಂಗಲ್ ಮತ್ತು ಬ್ಲೇಡ್‌ಗಳನ್ನು ತಯಾರು ಮಾಡಿಕೊಂಡು ಬಂದಿದ್ದ ಪ್ರದೀಪ್, ಸದ್ಯ ಹೆಲಿಕಾಪ್ಟರ್ ಸನ್ನದ್ಧವಾಗಿ ಮತ್ತೆ ಹಾರಬೇಕು ಎನ್ನುವ ತವಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್ ರಿಪೇರಿಯಿಂದ ಸಿಕ್ಕ ದುಡ್ಡನ್ನು ಹೆಲಿಕಾಪ್ಟರ್ ನಿರ್ಮಾಣಕ್ಕೆ ಸುರಿಯುತ್ತಿದ್ದಾರೆ. ಇದುವರೆಗೆ ರೂ 3 ಲಕ್ಷ ಖರ್ಚು ಬಂದಿದೆ. ಕೃಷಿ ಕೆಲಸ ಮಾಡುವ ಅವರ ತಂದೆಗೆ ಮಗನ ಈ ವೆಚ್ಚವೇ ಸಿಟ್ಟು ತರಿಸಿತ್ತು.`ಊಟಕ್ಕೆ ಕೊರತೆ ಮಾಡಿಕೊಂಡು ಇದೆಂತಹದ್ದು ನಿನ್ನ ಕೆಲಸ. ನಮ್ಮಂತಹ ಜನರಿಂದ ಹೆಲಿಕಾಪ್ಟರ್ ಮಾಡಲು ಆದೀತೆ' ಎಂದು ಮಗನನ್ನು ಶಿವಾಜಿ ಗದುರಿಸಿದ್ದರು. ಹೆಲಿಕಾಪ್ಟರ್ ತಯಾರಾದ ಮೇಲೆ ಅದನ್ನು ನೋಡಿ ಹೆಮ್ಮೆಪಟ್ಟವರಲ್ಲಿ ಅವರೇ ಮೊದಲಿಗರಾಗಿದ್ದಾರೆ.`ನನ್ನ ಹೆಲಿಕಾಪ್ಟರ್ ಸಹ ಆಕಾಶದಲ್ಲಿ ಹಾರಾಡಬೇಕು. ಸಾಧ್ಯವಾದರೆ ಮುಂದಿನ `ಏರೋ ಇಂಡಿಯಾ' ಪ್ರದರ್ಶನದಲ್ಲಿ ಪಾಲ್ಗೊಳ್ಳಬೇಕು. ಅದಕ್ಕಿಂತ ಖುಷಿ ಸಮಾಚಾರ ನನ್ನ ಪಾಲಿಗೆ ಬೇರಿಲ್ಲ. ಅಲ್ಲಿಯವರೆಗೆ ಮದುವೆ ಆಗಬಾರದು ಎನ್ನುವ ನಿರ್ಧಾರ ಮಾಡಿದ್ದೇನೆ. ಸದ್ಯ ಹೆಲಿಕಾಪ್ಟರ್ ನನ್ನ ಹೆಂಡತಿ' ಎಂದು ನಗು ಬೀರುತ್ತಾರೆ ಪ್ರದೀಪ್.ಈ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆ ಶನಿವಾರ ಅವರಿಗೆ `ಧ್ರುವ' ದೇಸಿ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಿತು. ಆ ಕ್ಷಣದಲ್ಲೇ ಹತ್ತಾರು ವಿಜ್ಞಾನಿಗಳು, ಅಷ್ಟೇ ಸಂಖ್ಯೆಯ ಪ್ರಾಯೋಜಕರು ಪ್ರದೀಪ್ ಅವರಿಗೆ ನೆರವಿನ ಹಸ್ತ ಚಾಚಲು ಮುಂದೆ ಬಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry