ಶುಕ್ರವಾರ, ನವೆಂಬರ್ 15, 2019
21 °C

ಹೆಲಿಕೋನಿಯ ಸೌಂದರ್ಯ ಅವರ್ಣನೀಯ

Published:
Updated:
ಹೆಲಿಕೋನಿಯ ಸೌಂದರ್ಯ ಅವರ್ಣನೀಯ

ಆಕರ್ಷಕ ಬಣ್ಣ, ವಿನ್ಯಾಸಗಳಿಂದ ಹಾಗೂ ತನ್ನ ದೀರ್ಘಕಾಲಿಕ ಬಾಳಿಕೆಯಿಂದಾಗಿ ಅಲಂಕಾರಿಕ ಪುಷ್ಪಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ ಹೆಲಿಕೋನಿಯ ಹೂವು. ಪುಷ್ಪಾಲಂಕಾರಗಳಲ್ಲಿ ಇತರ ಹೂವುಗಳೊಡನೆ ಬಹಳ ಚೆನ್ನಾಗಿ ಹೊಂದಿಕೊಳ್ಳುವುದು ಇದರ ವಿಶೇಷತೆ. ಕೆಂಪು, ಹಳದಿ, ಕೇಸರಿ, ಗುಲಾಬಿ, ನಸುಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಅರಳಿ ನಿಂತಾಗ ಎಂಥವರನ್ನೂ ತನ್ನತ್ತ ಸೆಳೆಯಬಲ್ಲ ಸಾಮರ್ಥ್ಯ ಇದಕ್ಕಿದೆ. ಮನೆ, ಕಚೇರಿಗಳ ಆಯಕಟ್ಟಿನ ಸ್ಥಳಗಳಲ್ಲಿ ಇದಕ್ಕೆ ವಿಶೇಷ ಸ್ಥಾನ. ಒಳಾಂಗಣವನ್ನು ಸುಂದರವಾಗಿಸಿಕೊಳ್ಳಲು ಹಾಗೂ ಸಭೆ ಸಮಾರಂಭಗಲ್ಲಿ ವೇದಿಕೆ ಅಲಂಕಾರಕ್ಕೂ ಬಳಸುತ್ತಾರೆ.ಇಂಥದ್ದೊಂದು ಅಪರೂಪದ ಸೌಂದರ್ಯಭರಿತ ಯಶಸ್ವಿ ಪುಷ್ಪಕೃಷಿ ಮಾಡಿರುವ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯಲ್ಲಿ ಲಲಿತ ಕೇಶವಕೃಷ್ಣ ಅವರದ್ದು. ಗಿಡದಿಂದ ಕಿತ್ತಮೇಲೆ ಸುಮಾರು ಇಪ್ಪತ್ತು ದಿನಗಳ ಕಾಲ ಕಳೆಗುಂದದೇ ಇರುವುದೇ ಈ ಹೂವಿನ ವಿಶೇಷತೆ. ಪಟ್ಟಣಗಳಲ್ಲಿ ಈ ಹೂವಿಗೆ ಸುಮಾರು 50 ರಿಂದ 75 ರೂಪಾಯಿಗಳಷ್ಟು ದರವಿದೆ. ಹೂವುಗಳ ಬಣ್ಣಗಳಿಗೆ ಅನುಗುಣವಾಗಿ ಹೂವಿನ ಗಿಡಗಳಿಗೆ 50- 100 ರೂಪಾಯಿವರೆಗೂ ದರವಿದೆ.ಈ ಹೂವುಗಳ ವೈಜ್ಞಾನಿಕ ಹೆಸರು ಹೆಲಿಕೋನಿಯ. ಅಮೆರಿಕದ ಉಷ್ಣವಲಯದ ಪ್ರದೇಶಗಳು ಹಾಗು ಇಂಡೊನೇಷಿಯಾದ ಪಶ್ಚಿಮದಲ್ಲಿರುವ ಶಾಂತಸಾಗರದ ದ್ವೀಪಗಳು ಇದರ ತವರು. ಹೆಚ್ಚು ಶ್ರಮವಿಲ್ಲದೆ ಕಡಿಮೆ ಖರ್ಚಿನಲ್ಲಿ ಈ ಗಿಡವನ್ನು ಬೆಳೆಸಿದರೆ ಉತ್ತಮ ಆದಾಯ ಕಟ್ಟಿಟ್ಟ ಬುತ್ತಿ. ಹೆಚ್ಚಿಗೆ ಬಿಸಿಲು ಬೀಳದ ಸ್ಥಳಗಳಲ್ಲಿ ಕಂದುಗಳ ಮೂಲಕ ನಾಟಿಮಾಡಿ ಈ ಹೂವಿನ ಗಿಡವನ್ನು ಬೆಳೆಸಬಹುದು. ಒಗುಮಣ್ಣು ಇದಕ್ಕೆ ಹೆಚ್ಚು ಸೂಕ್ತ. ಒಂದು ಗಿಡವನ್ನು ನಾಟಿ ಮಾಡಿದರೆ ಸಾಕು, ಬುಡದಲ್ಲಿ ಸಣ್ಣಸಣ್ಣ ಪಿಳ್ಳೆಗಳು ಹುಟ್ಟಿಕೊಳ್ಳುತ್ತವೆ. ಈ ಪಿಳ್ಳೆಗಳಿಂದಲೇ ಸಸ್ಯಾಭಿವೃದ್ಧಿ ಮಾಡಬಹುದು.ರೋಗ ಕೀಟಗಳ ಬಾಧೆಗಳಿಲ್ಲದ ಈ ಗಿಡಕ್ಕೆ ಚೆನ್ನಾಗಿ ನೀರು ಮತ್ತು ಉತ್ತಮ ಮಣ್ಣು ಹಾಗೂ ಒಂದು ಬಾರಿ ಗೊಬ್ಬರ ಕೊಟ್ಟರೂ ಸಾಕು. ನಾಟಿ ಮಾಡಿದ ಗಿಡದಲ್ಲಿ ಸಾಮಾನ್ಯವಾಗಿ ಮೂರು ತಿಂಗಳಲ್ಲಿಯೇ ಹೂವು ಬಿಡಲು ಪ್ರಾರಂಭವಾಗುತ್ತದೆ. ವರ್ಷವಿಡೀ ಹೂವು ಬಿಡುವ ಈ ಗಿಡದಲ್ಲಿ ಹೂವುಗಳು ಸುಮಾರು ಒಂದು ತಿಂಗಳ ಕಾಲ ಬಾಳಿಕೆ ಬರುತ್ತದೆ. ಕೊಯ್ಲು ಮಾಡಿದ ಹೂವುಗಳನ್ನು ನೀರಿನಲ್ಲಿಟ್ಟರೆ ಸಾಮಾನ್ಯವಾಗಿ ಇಪ್ಪತ್ತು ದಿವಸ ಬಾಳುತ್ತದೆ ಎಂದು ಈ ಹೂವಿನ ಬೇಸಾಯದ ಬಗ್ಗೆ ವಿವರಿಸುತ್ತಾರೆ.ಲಲಿತಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಕಲೆ, ಕಸೂತಿ, ಪೇಂಟಿಂಗ್, ಹೈನುಗಾರಿಕೆ, ಮಲ್ಲಿಗೆ ಕೃಷಿ ಇತ್ಯಾದಿ ಹಲವಾರು ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ನರ್ಸರಿಯಲ್ಲಿ ಈ ಹೆಲಿಕೋನಿಯ ಹೂವನ್ನು ಕಂಡು ಮನಸೋತು ಮನೆಯಂಗಳದ ಹೂ ತೋಟದ ಅಂದಕ್ಕಾಗಿ ಗಿಡವನ್ನು ತಂದು ನಾಟಿಮಾಡಿದರು. ಅನೇಕ ಕಂದುಗಳು ಹುಟ್ಟಿ ಅವುಗಳಲ್ಲಿ ಆಕರ್ಷಕ ಬಣ್ಣಗಳಲ್ಲಿ ಹೂವುಗಳು ಅರಳಿ ಎಲ್ಲರನ್ನೂ ತನ್ನತ್ತ ಸೆಳೆಯಿತು. ಬೇಡಿಕೆ ಹೆಚ್ಚಿತು.

ಇದನ್ನು ಕಂಡು ಇತ್ತೀಚೆಗೆ ಇವರು ತಮ್ಮ ಅಡಿಕೆ ತೋಟದಲ್ಲಿಯೂ ಇದನ್ನು ಬೆಳೆಸಲು ಮುಂದಾಗಿದ್ದಾರೆ. ಅಡಿಕೆ ತೋಟದಲ್ಲಿ ನಾಟಿ ಮಾಡಿದರೆ ಹೆಚ್ಚಿನ ಆರೈಕೆ ಬೇಕಿಲ್ಲ. ಅಡಿಕೆ ಮರಗಳಿಗೆ ಹಾಕಿದ ಗೊಬ್ಬರ ನೀರನ್ನು ಬಳಸಿಕೊಂಡು ಗಿಡಗಳು ಸಮೃದ್ಧವಾಗಿ ಬೆಳೆಯುತ್ತದೆ, ಅಲ್ಲದೇ ಅಲ್ಲಿನ ತಂಪಿನ ವಾತಾವರಣಕ್ಕೆ ಹೂಗಳು ಬಹಳ ಚೆನ್ನಾಗಿ ಬಿಡುತ್ತದೆ ಎನ್ನುತ್ತಾರೆ ಲಲಿತಾ. ರೋಗ ಕೀಟಗಳ ಬಾಧೆ ಇಲ್ಲದೆ ಬಹಳ ಸುಲಭವಾಗಿ ಬೆಳೆಸಬಹುದಾದ ಈ ಹೂವಿಗೆ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆಯಿದ್ದರೆ ದೊಡ್ಡ ಪ್ರಮಾಣದಲ್ಲಿ ಉಪಬೆಳೆಯಾಗಿ ಬೆಳೆಸಿ ಉತ್ತಮ ಆದಾಯ ಪಡೆಯಬಹುದು.

ಪ್ರತಿಕ್ರಿಯಿಸಿ (+)