ಸೋಮವಾರ, ಜನವರಿ 27, 2020
26 °C
ಚಿಂಚೋಳಿ: ಹೂ ಮೊಗ್ಗು ಉದುರಿ ಸೊಡ್ಡಿನಂತಾದ ತೊಗರಿ ಬೆಳೆ

ಹೆಲೆನ್‌ ಪರಿಣಾಮ: ರೈತ ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಲೆನ್‌ ಪರಿಣಾಮ: ರೈತ ಕಂಗಾಲು

ಚಿಂಚೋಳಿ: ತಾಲ್ಲೂಕಿನ ವಾಣಿಜ್ಯ ಬೆಳೆ ತೊಗರಿಯ ಬಂಪರ್‌ ಇಳುವರಿಯ ಕನಸು ಸಂಪೂರ್ಣ ಭಗ್ನವಾಗಿದೆ. ವಾರದ ಹಿಂದೆ ಭರ್ಜರಿ ಹೂವು ಮೊಗ್ಗು ಹೊತ್ತು ಕಣ್ಣು ಕುಕ್ಕುತ್ತಿದ್ದ ಬೆಳೆ ಪ್ರಕೃತಿ ವಿಕೋಪದ ಪರಿಣಾಮವಾಗಿ ಹೂವು, ಮೊಗ್ಗು, ಚಳ್ಳಿ ಉದುರಿ­ದ್ದರಿಂದ ತೊಗರಿ ಬೆಳೆಗಾರರು ಕಂಗಾಲಾಗಿದ್ದಾರೆ.ಹೆಲೆನ್‌ ಮತ್ತು ಲೆಹರ್‌ ಚಂಡ ಮಾರುತದ ಪರಿಣಾಮ ಹಾಗೂ ನಿರಂತರ ಬೀಳುತ್ತಿರುವ ಮಂಜಿನಿಂದ ತತ್ತರಿಸಿದ ಬೆಳೆ ಹೊಲಗಳಲ್ಲಿ ಕಸಬರಿಗೆ ಸೊಡ್ಡಿನಂತೆ ಬರಡಾಗಿ ನಿಂತಿದೆ.ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಸುರಿದ ಉತ್ತಮ ಮಳೆ ನಂಬಿದ ರೈತರು ತೊಗರಿಗೆ ಸಕಾಲದಲ್ಲಿ ಕೀಟನಾಶಕ ಹಾಗೂ ಪೋಷಕಾಂಶಗಳನ್ನು ಸಿಂಪರಣೆ ಮಾಡಿ ಬಂಪರ್‌ ಇಳುವರಿಯ ಲೆಕ್ಕಾಚಾರದಲ್ಲಿದ್ದರು.ಆದರೆ ಪ್ರಕೃತಿಯ ಮುನಿಸಿನಿಂದಾಗಿ ಕೋಡ್ಲಿ, ಐನಾಪುರ, ಚಿಂಚೋಳಿ ಮತ್ತು ಸುಲೇಪೇಟ ಕಂದಾಯ ಹೋಬಳಿ ವಲಯದಲ್ಲಿ ಶೇ. 70ರಿಂದ75ರಷ್ಟು ಬೆಳೆ ಹಾನಿಗೊಳಗಾಗಿದೆ.ತಾಲ್ಲೂಕಿನಲ್ಲಿ 48,555 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ತೊಗರಿ ಬೆಳೆ ಭಾರಿ ಪ್ರಮಾಣದಲ್ಲಿ ಹಾಳಾಗಿದೆ. ಅಧಿಕ ತೇವಾಂಶ ಹೊಂದಿರುವ ಹಾಗೂ ತಡವಾಗಿ ಬಿತ್ತನೆಯಾದ ಹೊಲದಲ್ಲಿನ ಬೆಳೆ ಹೂವು, ಕಾಯಿ ಇಲ್ಲದೇ ಭಣಗುಟ್ಟುತ್ತಿದೆ.ಬೇಗ ಕಾಯಿಕಚ್ಚಿ ಮಾಗುವ ಟಿಎಸ್‌ಆರ್‌ –3, ಹಾಗೂ ಸ್ಥಳೀಯ ಉತಾಳಿ ತಳಿಯ ತೊಗರಿ ಹೊಲದಲ್ಲಿ ಕಾಯಿ ಕಚ್ಚಿ ಒಣಗುತ್ತಿದ್ದರೆ, ಬಂಗಾ­ರದ ವರ್ಣದ ಹೂವಿನಿಂದ ಇಡಿ ಹೊಲವೇ ಸುವರ್ಣಮಯವಾಗಿ ಗೋಚರಿ­ಸುತ್ತಿದ್ದ ತೊಗರಿ ಬೆಳೆಯ ಹೊಲಗಳು ಈಗ ಬಣ್ಣಗೆಟ್ಟಿದ್ದು ಬೆಳೆಗಾರರನ್ನು ಕಂಗಾಲಾಗಿಸಿದೆ.ಪ್ರಕೃತಿ ವಿಕೋಪದಿಂದ ತಾಲ್ಲೂಕಿ­ನಲ್ಲಿ ನಷ್ಟಕ್ಕೊಳಗಾದ ತೊಗರಿ ಬೆಳೆಗಾ­ರರಿಗೆ ವಿಮೆ ಮಂಜೂರು ಮಾಡ­ಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.ತಾಲ್ಲೂಕಿನ ರೈತರ ಬೆನ್ನೆಲುಬಾದ ದೀರ್ಘಾವಧಿ ತೊಗರಿ ಬೆಳೆಯ ಮೇಲೆ ಸಾಲ ಪಡೆದ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಸಾಲ ಪಡೆ­ಯದ ರೈತರಿಗೆ ಪರಿಹಾರ ಮಂಜೂರು ಮಾಡಬೇಕೆಂದು ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಅಮೃತರಾವ್‌ ಗುತ್ತೇದಾರ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)