ಹೆಸರಷ್ಟೇ ಕುಸುಮ, ಕಾಯಿಲೆ ಗಂಭೀರ

7
ಸರ್ಕಾರದಿಂದ ಸಿಗಬೇಕಿದೆ ನೆರವು: ಡಾ.ಸುರೇಶ್ ಹನಗವಾಡಿ ಮನವಿ

ಹೆಸರಷ್ಟೇ ಕುಸುಮ, ಕಾಯಿಲೆ ಗಂಭೀರ

Published:
Updated:

ಚಿತ್ರದುರ್ಗ: ಹಿಮೋಫಿಲಿಯಾ (ಕುಸುಮರೋಗ) ಅನುವಂಶಿಕ ಕಾಯಿಲೆಯಾಗಿದ್ದು, ಸಂಪೂರ್ಣ ಗುಣಪಡಿಸಲು ಸಾಧ್ಯವಾಗದಿರುವ ಕಾರಣ ಸಾಯುವವರೆಗೂ ರೋಗಿಗೆ ಚಿಕಿತ್ಸೆ ಅಗತ್ಯ ಎಂದು ರಾಜ್ಯ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ ತಿಳಿಸಿದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವನ ದೇಹದಲ್ಲಿ ರಕ್ತಸ್ರಾವವಾಗದಂತೆ ನೋಡಿಕೊಳ್ಳುವಂಥ 13 ಪ್ರೋಟಿನ್ ಅಂಶಗಳಿರುತ್ತವೆ. ಅದರಲ್ಲಿ ಯಾವುದಾದರೂ ಒಂದರಲ್ಲಿ ನ್ಯೂನತೆ ಕಂಡು ಬಂದರೆ ರಕ್ತಸ್ರಾವ ನಿಲ್ಲುವುದಿಲ್ಲ. 8 ಮತ್ತು 9ರ ಪ್ರೋಟಿನ್ ಅಂಶದ ಕೊರತೆ ಕಂಡರೆ, ಆ ವ್ಯಕ್ತಿಯು ಈ ರೋಗದಿಂದ ಬಳಲುತ್ತಾನೆ. ಒಂದು ವೇಳೆ ಆತನಿಗೆ ಗಾಯವಾದರೆ, ರಕ್ತ ಹೆಪ್ಪುಗಟ್ಟದೆ ರಕ್ತಸ್ರಾವ ನಿಲ್ಲುವುದಿಲ್ಲ. ಕೂಡಲೇ ಆತನಿಗೆ ಚಿಕಿತ್ಸೆಗೆ ಒಳಪಡಿಸಬೇಕು ಎಂದರು.ರಕ್ತಸ್ರಾವ ಮೆದುಳು, ಜಠರ ಹಾಗೂ ಕುತ್ತಿಗೆ ಭಾಗವನ್ನು ಆವರಿಸಿದರೆ ವ್ಯಕ್ತಿ ಬದುಕುವುದು  ಬಹುತೇಕ ವಿರಳ. ಜತೆಗೆ ಈ ರೋಗದಿಂದ  ಬಳಲು ತ್ತಿರುವ ವ್ಯಕ್ತಿಗೆ ಹೆಚ್ಚಾಗಿ ಕೀಲು, ಮಾಂಸ ಖಂಡಗಳಲ್ಲಿ ರಕ್ತಸ್ರಾವ ಆಗುತ್ತದೆ. ಹೊರ ರೋಗದಿಂದ ಅಷ್ಟೇ ಅಲ್ಲ ಆಂತರಿಕ ರಕ್ತಸ್ರಾವ ಕೂಡ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಎಷ್ಟೋ ಮಂದಿ ಶಾಶ್ವತ ಅಂಗವಿಕಲರು ಕೂಡ ಆಗಿದ್ದಾರೆ ಎಂದರು.ಬಡವರು, ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಈ ರೋಗಕ್ಕೆ ಸಂಬಂಧಿಸಿದ ಚುಚ್ಚುಮದ್ದು ಸಿಗುವುದಿಲ್ಲ. ನಮ್ಮ ರಾಷ್ಟ್ರದಲ್ಲಿ ಈ ರೋಗಕ್ಕೆ ಔಷಧಿ ಕೂಡ ತಯಾರಾಗುತ್ತಿಲ್ಲ. ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಪ್ರತಿ ಬಾರಿ ರಕ್ತಸ್ರಾವವಾದ ಸಂದರ್ಭದಲ್ಲಿ ಒಂದು ಚುಚ್ಚುಮದ್ದಿಗೆ  ್ಙ 8ರಿಂದ 10 ಸಾವಿರ ವೆಚ್ಚವಾಗುತ್ತದೆ ಎಂದರು.ದೇಶದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.ರಾಷ್ಟ್ರದಾದ್ಯಂತ 72 ಖಾಸಗಿ ಸಂಘ ಸಂಸ್ಥೆಗಳು ಒಟ್ಟಾಗಿ ಸರ್ಕಾರದಿಂದ ಯಾವುದೇ ಸಹಕಾರ ಪಡೆಯದೆ ಈವರೆಗೆ ಚಿಕಿತ್ಸೆ ನೀಡುತ್ತಾ ಕಾರ್ಯೋನ್ಮುಖವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 20 ವರ್ಷಗಳ ಹೋರಾಟದ ಪ್ರತಿಫಲವಾಗಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ ಎಂದರು.`ಈ ರೋಗಕ್ಕೆ ತಕ್ಷಣ ಚಿಕಿತ್ಸೆ ನೀಡಬೇಕಾದ್ದರಿಂದ ಪ್ರತಿ ಜಿಲ್ಲೆಯಲ್ಲಿ ಹಿಮೋಫಿಲಿಯಾ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಚಿತ್ರದುರ್ಗದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರವನ್ನು ಸ್ಥಾಪಿಸಿ ನಮಗೆ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ ಇಲ್ಲಿ ರಕ್ತ ಸಂಗ್ರಹಣಾ ಘಟಕವಿರುವುದರಿಂದ ಎಷ್ಟೇ ರೋಗಿಗಳು ಬಂದರು ಉಚಿತವಾಗಿ ಅವರಿಗೆ ರಕ್ತವನ್ನು ನೀಡುವ ಸೌಲಭ್ಯ ಒದಗಿಸಿದ್ದಾರೆ' ಎಂದು ಹೇಳಿದರು.ಎಸ್‌ಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಈ.ಚಿತ್ರಶೇಖರ್, ಡಾ.ನಾರಾಯಣ ಮೂರ್ತಿ, ಮೀರಾ ಹನಗವಾಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry