ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ಸಂಸದೀಯ ಕಾರ್ಯದರ್ಶಿ!

ನೇಮಕವಾಗಿ 23 ದಿನ ಕಳೆದರೂ ಕಾರಿಲ್ಲ, ಕಚೇರಿ ಇಲ್ಲ, ಕೆಲ್ಸ ಕೊಟ್ಟೇ ಇಲ್ಲ
Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 11 ಶಾಸಕರಿಗೆ ಸಂಸದೀಯ ಕಾರ್ಯದರ್ಶಿಗಳ ಸ್ಥಾನಮಾನ ಕೊಟ್ಟು 23 ದಿನ ಕಳೆದಿದೆ. ಆದರೆ, ಅವರಲ್ಲಿ 10 ಮಂದಿಗೆ ತಮ್ಮ ಕೆಲಸ ಏನು ಎಂಬುದನ್ನೇ ತಿಳಿಸಿಲ್ಲ!

‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ಭತ್ಯೆ ಕಾಯ್ದೆ– 1963’ರ ಪ್ರಕಾರ ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಇಲಾಖೆಗಳ ಸಚಿವರೇ ತಮ್ಮ ವ್ಯಾಪ್ತಿಯ ಸಂಸದೀಯ ಕಾರ್ಯದರ್ಶಿಗಳಿಗೆ ಅಧಿಕಾರ ಹಂಚಿಕೆ ಮಾಡಬೇಕು.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತುಪಡಿಸಿ ಉಳಿದ 10 ಸಚಿವರೂ ತಮ್ಮ ವ್ಯಾಪ್ತಿಯ ಸಂಸದೀಯ ಕಾರ್ಯದರ್ಶಿಗಳಿಗೆ ಅಧಿಕಾರ ಹಂಚಿಕೆ ಮಾಡಿಲ್ಲ. ಹೀಗಾಗಿ ಇವರೆಲ್ಲ ವಿಧಾನಸೌಧದ ‘ಕಂಬ ಸುತ್ತುವ’ ಕೆಲಸ ಮಾಡುತ್ತಿದ್ದಾರೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆಕಾಂಕ್ಷಿಗಳೆಲ್ಲರಿಗೂ ಸಚಿವ ಸ್ಥಾನ ನೀಡುವುದು ಕಷ್ಟ ಎಂದು ಕೆಲವರನ್ನು ಸಮಾಧಾನಪಡಿಸಲು ಜಾತಿ– ಪ್ರದೇಶದ ಆಧಾರದ ಮೇಲೆ ಸಂಸದೀಯ ಕಾರ್ಯದರ್ಶಿಗಳ ಹುದ್ದೆ ನೀಡಲಾಗಿತ್ತು. ಅವರಿಗೆಲ್ಲ ನವೆಂಬರ್‌  8ರಂದು ಮುಖ್ಯಮಂತ್ರಿಯವರು ಪ್ರಮಾಣ ವಚನ ಬೋಧಿಸಿದ್ದರು.

ಸಚಿವರಿಗೆ ಸಂಕಟ!: ‘ನಮಗೆ ಅಧಿಕಾರ ನೀಡಲು ಸಚಿವರಿಗೆ ಇಷ್ಟ ಇಲ್ಲ. ನಾವು ಹೋಗಿ ನಮ್ಮ ಕೆಲಸ ಏನು ಹೇಳಿ ಎಂದು ಕೇಳಿದರೂ ತಲೆ ಎತ್ತಿ ನೋಡದ ಪರಿಸ್ಥಿತಿ ಇದೆ. ಒಂದು ರೀತಿ ನಾವೇನೊ ಅವರ ಪಾಲು ಕೇಳಲು ಹೋದವರ ಹಾಗೆ ವರ್ತಿಸುತ್ತಾರೆ. ನಮಗಂತೂ ತುಂಬ ಬೇಸರ ಆಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಂಸದೀಯ ಕಾರ್ಯದರ್ಶಿಯೊಬ್ಬರು ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಕಚೇರಿ, ಅಗತ್ಯ ಆಪ್ತ ಸಿಬ್ಬಂದಿ ಮತ್ತು ಓಡಾಡಲು ಕಾರು ಒದಗಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ಸಬೂಬು ಹೇಳಿಕೊಂಡು ನಮಗೆ ಸಿಗಬೇಕಾದ ಸೌಲಭ್ಯಗಳಿಗೂ ಕತ್ತರಿ ಹಾಕಿದ್ದಾರೆ’ ಎಂದು ದೂರಿದರು. ಜಿಜ್ಞಾಸೆ: ಕಾರು ಮತ್ತು ಕಚೇರಿಗೆ ಕೊಠಡಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಒದಗಿಸಬೇಕೇ ಅಥವಾ ಆಯಾ ಇಲಾಖೆಗಳು ಕೊಡಬೇಕೇ ಎನ್ನುವ ಬಗ್ಗೆ ಜಿಜ್ಞಾಸೆ ಇದೆ.

‘ಸಂಸದೀಯ ಕಾರ್ಯದರ್ಶಿಗಳಿಗೆ ಆಯಾ ಇಲಾಖೆಗಳೇ ಕಚೇರಿ ಮತ್ತು ವಾಹನ ಸೌಲಭ್ಯ ಒದಗಿಸಲಿವೆ ಎಂದು ಡಿಪಿಎಆರ್‌ ಹೇಳುತ್ತಿದೆ. ಇಲಾಖೆಗಳಿಗೆ ಹೋಗಿ ಕೇಳಿದರೆ, ‘ಅದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ಬೇಕು’ ಅನ್ನುತ್ತಾರೆ. ಹಣಕಾಸು ಇಲಾಖೆ ಮುಂದೆ ಕಡತ ಮಂಡಿಸಿದರೆ, ಅದಕ್ಕೆ ಡಿಪಿಎಆರ್‌ ಒಪ್ಪಿಗೆ ಬೇಕು ಎನ್ನುತ್ತಾರೆ. ಹೀಗೆ ಗೊಂದಲದ ಗೂಡಾಗಿರುವ ಕಾರಣ ಸಮಸ್ಯೆ ಜಟಿಲವಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಯವರಿಗೂ ದೂರು ನೀಡಲಾಗಿದೆ’ ಎನ್ನುತ್ತಾರೆ ಅವರು.

ಅಧಿಕಾರಿಗಳಿಂದಲೂ ಅಸಡ್ಡೆ: ಕೆಲ ಸಂಸದೀಯ ಕಾರ್ಯದರ್ಶಿಗಳು ತಮಗೆ ಹಂಚಿಕೆ ಮಾಡಿರುವ ಇಲಾಖೆಗಳ ಮುಖ್ಯಸ್ಥ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿದರೂ, ‘ಸಾರ್‌ ನೀವೊಮ್ಮೆ ಸಚಿವರನ್ನು ಭೇಟಿ ಮಾಡಿ. ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಹೇಳುತ್ತಾರೆ. ಸಚಿವರ ಆಪ್ತ ಕಾರ್ಯದರ್ಶಿ ಬಳಿ ಹೋಗಿ, ಏನಾದರೂ ಇಲಾಖೆ ವಿಷಯ ಇದ್ದರೆ ತಿಳಿಸಿ ಎಂದು ಹೇಳಿದರೆ ಅವರು ಕೂಡ, ಸಚಿವರನ್ನು ಹೋಗಿ ನೋಡಿ ಸಾರ್‌ ಅನ್ನುತ್ತಾರೆ. ಒಟ್ಟಿನಲ್ಲಿ ನಾವು ಯಾರಿಗೂ ಬೇಡವಾದ ಸಂಸದೀಯ ಕಾರ್ಯದರ್ಶಿಗಳಾಗಿದ್ದೇವೆ’ ಎಂದು ಅಸಮಾಧಾನ ತೋಡಿಕೊಂಡರು.

‘ಜಿಲ್ಲೆಗಳಿಗೆ ಹೋದರೂ ಶಿಷ್ಟಾಚಾರ ಇಲ್ಲ. ನಮ್ಮ ನೇಮಕಾತಿ ವಿಷಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇನ್ನೂ ಅಧಿಕೃತವಾಗಿ ತಲುಪಿಲ್ಲ. ರಾಜ್ಯ ಸಚಿವರ ಸ್ಥಾನಮಾನ ಕೊಟ್ಟಿದ್ದರೂ ಅದಕ್ಕೆ ಜಿಲ್ಲಾ ಮಟ್ಟದಲ್ಲಿ ಯಾವ ಗೌರವವೂ ಸಿಗುತ್ತಿಲ್ಲ’ ಎಂದು ದೂರುತ್ತಾರೆ.

ಎಂಜಿನಿಯರ್‌ ಕಾರು ಕೊಡಿಸಿದರು!
ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ತಮ್ಮ ಇಲಾಖೆಯ ಎಂಜಿನಿಯರ್‌ ಒಬ್ಬರ ಕಾರನ್ನು ತಮ್ಮ ಸಂಸದೀಯ ಕಾರ್ಯದರ್ಶಿ ಇ.ತುಕಾರಾಂ ಅವರಿಗೆ ಕೊಡಿಸಿದ್ದಾರೆ. ಆದರೆ, ಅವರ ಕರ್ತವ್ಯ ಮತ್ತು ಜವಾಬ್ದಾರಿ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT