ಹೆಸರಿಗೆ ಉದ್ಯಾನ; ನೋಡಿದರೆ ಅಧ್ವಾನ

7

ಹೆಸರಿಗೆ ಉದ್ಯಾನ; ನೋಡಿದರೆ ಅಧ್ವಾನ

Published:
Updated:

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಹೆಸರಿಗಷ್ಟೇ ಉದ್ಯಾನಗಳಿವೆ. ಆದರೆ, ನಿರ್ವಹಣೆ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಪರಿಣಾಮ ಅಭಿವೃದ್ಧಿಯಿಂದ ದೂರ ಉಳಿದಿವೆ.ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ಪುಟ್ಟಮ್ಮಣ್ಣಿ ಪಾರ್ಕ್, ಹೌಸಿಂಗ್ ಬೋರ್ಡ್ ಕಾಲೊನಿ ಉದ್ಯಾನ ಹಾಗೂ ದೊಡ್ಡಅರಸನ ಕೊಳದ ಉದ್ಯಾನದ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಸದ್ಯಕ್ಕೆ ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನ ಮಾತ್ರ ಕೊಂಚಮಟ್ಟಿಗೆ ಅಭಿವೃದ್ಧಿ ಕಂಡಿದೆ. ಇದು ಈ ಭಾಗದ ನಾಗರಿಕರಲ್ಲಿ ಸಮಾಧಾನ ತಂದಿದೆ.ಉಳಿದಂತೆ ಪುಟ್ಟಮ್ಮಣ್ಣಿ ಪಾರ್ಕ್ ಹಾಗೂ ದೊಡ್ಡಅರಸನಕೊಳದ ಉದ್ಯಾನ ಸಾರ್ವಜನಿಕರ ಬಳಕೆಗೆ ಸಿಕ್ಕಿದ್ದು, ಕಡಿಮೆ. ಗಣೇಶನ ವಿಸರ್ಜನೆ ವೇಳೆ ಮಾತ್ರವೇ ದೊಡ್ಡಅರಸನಕೊಳ ಬಳಕೆಯಾಗುತ್ತದೆ.ಉಳಿದಂತೆ ಉದ್ಯಾನ ಪಾಳುಬೀಳುತ್ತದೆ. ಲಕ್ಷಾಂತರ ರೂ ವೆಚ್ಚ ಮಾಡಿದರೂ ಈ ಎರಡು ಉದ್ಯಾನಗಳು ಅಭಿವೃದ್ಧಿ ಕಾಣದಿರುವುದೇ ನಾಗರಿಕರಿಗೆ ಬೇಸರ ಮೂಡಿಸಿದೆ.ಜಿಲ್ಲಾ ಕೇಂದ್ರದ ಬೀಡಿ ಕಾಲೊನಿ, ಮಾರುತಿ ನಗರ, ಪ್ರಶಾಂತ ನಗರ ಹಾಗೂ ಜೆಎಸ್‌ಎಸ್ ಲೇಔಟ್‌ನಲ್ಲೂ ಉದ್ಯಾನಕ್ಕೆ ಸ್ಥಳ ಮೀಸಲಿಡಲಾಗಿದೆ. ಆದರೆ, ಅಭಿವೃದ್ಧಿಗೆ ಮಾತ್ರ ಒತ್ತು ನೀಡಿಲ್ಲ.ಈ ಉದ್ಯಾನಗಳು ಹಾಗೂ ಪುಟ್ಟಮ್ಮಣ್ಣಿ ಪಾರ್ಕ್ ಅಭಿವೃದ್ಧಿಗೆ ಒಟ್ಟು 45.30 ಲಕ್ಷ ರೂ ಅಂದಾಜು ಮೊತ್ತ ಸಿದ್ಧಪಡಿಸಲಾಗಿದೆ. ಆದರೆ, ಸರ್ಕಾರದಿಂದ ಅನುದಾನ ಲಭಿಸಿಲ್ಲ. ಮತ್ತೊಂದೆಡೆ ನಗರಸಭೆ ಬಜೆಟ್‌ನಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಮೀಸಲಿಡುವ ಅನುದಾನ ಸಮರ್ಪಕವಾಗಿ ಸದ್ಬಳಕೆ ಆಗುತ್ತಿಲ್ಲ ಎನ್ನುವುದು ನಾಗರಿಕರ ಸಾಮಾನ್ಯ ಆರೋಪ.ಯಾವುದೇ, ನಗರ ಮತ್ತು ಪಟ್ಟಣ ಅಭಿವೃದ್ಧಿಯಾದಂತೆ ಉದ್ಯಾನಗಳಿಗೆ ಹೆಚ್ಚು ಒತ್ತು ನೀಡುವುದು ಸಾಮಾನ್ಯ. ಆದರೆ, ಇರುವ ಉದ್ಯಾನಗಳ ನಿರ್ವಹಣೆಗೆ ನಗರಸಭೆ ಆಡಳಿತ ಹಿಂದೇಟು ಹಾಕಿರುವುದು ಅಚ್ಚರಿ ತಂದಿದೆ. ಜತೆಗೆ, ಮಕ್ಕಳಿಗಾಗಿ ಪ್ರತ್ಯೇಕ ಉದ್ಯಾನ ನಿರ್ಮಿಸಲು ಇಂದಿಗೂ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ. ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಅಳವಡಿಸಿರುವ ಜಾರುಬಂಡಿ, ತೂಗುಯ್ಯಾಲೆಗೆ ಚಿಣ್ಣರು ತೃಪ್ತಿಪಟ್ಟುಕೊಳ್ಳಬೇಕಿದೆ.ಸ್ಥಳ ಮೀಸಲಿಲ್ಲ

ಜಿಲ್ಲಾ ಕೇಂದ್ರದ ಹೊರವಲಯದಲ್ಲಿ ಪ್ರಸ್ತುತ ಹೊಸದಾಗಿ ಬಡಾವಣೆಗಳನ್ನು ನಿರ್ಮಿಸುವ ಕೆಲಸ ಭರದಿಂದ ಸಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಉದ್ಯಾನಗಳನ್ನು ಒಳಗೊಂಡ ಬಡಾವಣೆಗಳ ನಿರ್ಮಾಣವೇ ನಡೆಯುತ್ತಿಲ್ಲ.ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಯಾವುದೇ ಹೊಸ ಬಡಾವಣೆ ನಿರ್ಮಿಸಿದರೂ ನಿಗದಿತ ಪ್ರಮಾಣದಲ್ಲಿ ಉದ್ಯಾನಕ್ಕೆ ಸ್ಥಳ ಮೀಸಲಿಡಬೇಕು ಎಂಬ ಸೂಚನೆಯಿದೆ. ಈ ಆದೇಶ ನಗರದಲ್ಲಿ ಪಾಲನೆಯಾಗುತ್ತಿಲ್ಲ. ಈ ಕುರಿತು ಪರಿಶೀಲನೆ ನಡೆಸುವುದು ನಗರಾಭಿವೃದ್ಧಿ ಪ್ರಾಧಿಕಾರದ ಹೊಣೆ. ಆದರೆ, ಚೂಡಾ ಆಡಳಿತ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಇದರ ಪರಿಣಾಮ ಹೊಸ ಬಡಾವಣೆಗಳಲ್ಲೂ ಉದ್ಯಾನಕ್ಕೆ ಸ್ಥಳ ಮೀಸಲಿಡುತ್ತಿಲ್ಲ ಎನ್ನುವುದು ನಾಗರಿಕರ ಆರೋಪ.`ಉದ್ಯಾನಗಳು ನಗರವೊಂದರ ಸೌಂದರ್ಯ ಹೆಚ್ಚಿಸುತ್ತವೆ. ಜಿಲ್ಲಾ ಕೇಂದ್ರ ಅಭಿವೃದ್ಧಿ ಹೊಂದಿದಂತೆ ಉದ್ಯಾನಗಳ ಸಂಖ್ಯೆಯೂ ಹೆಚ್ಚಬೇಕಿದೆ. ಆದರೆ, ರಿಯಲ್ ಎಸ್ಟೇಟ್ ಉದ್ಯಮಿಗಳ ಹಣದಾಸೆ, ಚೂಡಾ ಹಾಗೂ ನಗರಸಭೆಯ ನಿರ್ಲಕ್ಷ್ಯದ ಧೋರಣೆಯಿಂದ ಉದ್ಯಾನಗಳ ಸಂಖ್ಯೆ ಕಡಿಮೆಯಾಗುತ್ತಿದೆ~ ಎನ್ನುತ್ತಾರೆ ಚಾಲಕ ರವೀಶ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry