ಸೋಮವಾರ, ಮಾರ್ಚ್ 1, 2021
30 °C

ಹೆಸರಿಗೆ ಹೈಟೆಕ್, ಇಲ್ಲಿ ಎಲ್ಲವೂ ಅಸಮರ್ಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಸರಿಗೆ ಹೈಟೆಕ್, ಇಲ್ಲಿ ಎಲ್ಲವೂ ಅಸಮರ್ಪಕ

ಶಿವಮೊಗ್ಗ: ಹೆಸರಿಗೆ ಹೈಟೆಕ್ ಬಸ್‌ನಿಲ್ದಾಣ, ಆದರೆ, ಯಾವ ಸೇವೆಗಳೂ ಸಸೂತ್ರವಾಗಿ ಲಭ್ಯವಿಲ್ಲ. ಉದ್ಘಾಟನೆ ಗೊಂಡು ಆರು ತಿಂಗಳು ಕಳೆದಿವೆ. ಜನರಿಗೆ ಈ `ಸುಸಜ್ಜಿತ~ ನಿಲ್ದಾಣದ ಸೇವೆಗಳು ಇನ್ನೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ.-ಇದು ಶಿವಮೊಗ್ಗದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ನಿಲ್ದಾಣದ ಪ್ರಸ್ತುತ ಸ್ಥಿತಿ. ಜನರ ಬಹುದಿನದ ನಿರೀಕ್ಷೆಯಂತೆ ಬಸ್‌ನಿಲ್ದಾಣ ಸಿದ್ಧಗೊಂಡಿದೆ. ಆದರೆ, ನಾನಾ ಕೊರತೆಗಳಿಂದ ಇಂದಿಗೂ ನಲುಗುತ್ತಿದೆ.

ಶೌಚಾಲಯದ ಸ್ವಚ್ಛತೆ ನಿಯಮಿತವಾಗಿಲ್ಲ; ಕುಡಿಯಲು ಹನಿ ನೀರಿಲ್ಲ. ಕ್ಯಾಂಟೀನ್ ಆರಂಭವಾಗಿಲ್ಲ. ಲಗೇಜ್ ರೂಂ ಬಾಗಿಲು ತೆಗೆದಿಲ್ಲ. ಕುಳಿತುಕೊಳ್ಳುವುದಕ್ಕೆ ಸರಿಯಾದ ಆಸನ ವ್ಯವಸ್ಥೆ ಇಲ್ಲ. ಮಳೆ ಬಂದರೆ ಸೋರುವ ಮಾಳಿಗೆ. ದೂರದ ಹಳ್ಳಿಗೆ ತೆರಳುವವರಿಗೆ ಬಸ್ ಸೌಲಭ್ಯದ ಕೊರತೆ.ಬಸ್‌ನಿಲ್ದಾಣದಲ್ಲಿ ಎರಡು ಶೌಚಾಲಯಗಳಿವೆ. ಇಲ್ಲಿ ಮೂತ್ರವಿಸರ್ಜನೆ ಉಚಿತ ಎಂಬ ಬೋರ್ಡ್ ಗಂಡಸರ ಶೌಚಾಲಯ ದಲ್ಲಿದೆ. ಆದರೆ, ಹೆಂಗಸರ ಶೌಚಾಲಯದಲ್ಲಿ ಉಚಿತ ಎಂಬುದೇ ಕಣ್ಮರೆಯಾಗಿದೆ. ಗಂಡಸರ ಶೌಚಾಲಯದಲ್ಲಿ ಶೌಚಕ್ಕೆ ರೂ2 ಎಂದು ಬೋರ್ಡ್‌ನಲ್ಲಿದ್ದರೂ ಪ್ರಯಾಣಿಕರ ಬಳಿ ತೆಗೆದುಕೊಳ್ಳುವುದು ರೂ3. ಕೆಲವೊಮ್ಮೆ ಮೂತ್ರವಿಸರ್ಜನೆಗೂ ರೂ2 ಕೇಳಲಾಗುತ್ತದೆ ಎಂಬುದು ಪ್ರಯಾಣಿಕರ ದೂರು.ಇನ್ನೂ ಮಹಿಳೆಯರ ಶೌಚಾಲಯಕ್ಕೆ ಪ್ರವೇಶ ಪಡೆಯುವುದಕ್ಕೆ ರೂ3 ಕಡ್ಡಾಯ. ಬೋರ್ಡ್‌ನಲ್ಲಿ ರೂ2 ಇದೆಯಲ್ಲಾ ಎಂದು ಪ್ರಶ್ನಿಸಿದರೆ ನಿಮಗೆ ಬೈಗುಳ ಉಚಿತ. ಹಣ ನೀಡಿ ಒಳಗೆ ಹೋದರೆ, ಅಲ್ಲಿ ನರಕದರ್ಶನ. ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ.ದೂರದ ಊರುಗಳಿಂದ ಬರ‌್ತೀವಿ, ಹೋಗ್ತೀವಿ. ಅನಿವಾರ್ಯತೆ ಇರುತ್ತೆ. ವಾದ ಮಾಡೋದು ಏಕೆ ಎಂದು ಹಣ ಕೊಟ್ಟು ಹೋಗುತ್ತಿವೆ. ಇಲ್ಲದವರು ಸೈಡಲ್ಲಿ ಮಾಡ್ತಾರೆ. ಅನಗತ್ಯ ಹಣ ವಸೂಲಿ ಸರಿಯಲ್ಲ ಎನ್ನುತ್ತಾರೆ ಉಪನ್ಯಾಸಕಿ ನಾಗರತ್ನಾ ಭಟ್.ಸ್ವಚ್ಛತಾ ನಿರ್ವಹಣೆಗೆ ಹಣ ತೆಗೆದುಕೊಳ್ಳುತ್ತೇವೆ. ಪ್ರಯಾಣಿಕರು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಾರೆ. ಮಹಿಳೆಯರು ಶೌಚಾಲಯದ ಗುಂಡಿ ಒಳಗೆ ಬಟ್ಟೆ ಇತರೆ ವಸ್ತುಗಳನ್ನು ಹಾಕುತ್ತಾರೆ. ಅದು ಕಟ್ಟಿಕೊಂಡಾಗ ಮಿಷನ್ ತರಿಸಿ ಸ್ವಚ್ಛ ಮಾಡಿಸಬೇಕು. ಇಲ್ಲ ಕೈ ಹಾಕಿ ತೆಗೆಯಬೇಕು. ಈ ಕೆಲಸಕ್ಕೆ ಯಾರೂ ಬರುವುದಿಲ್ಲ.ಬಂದವರು ಹೆಚ್ಚಿನ ಹಣ ಕೇಳುತ್ತಾರೆ ಎನ್ನುತ್ತಾರೆ ಬಸ್‌ನಿಲ್ದಾಣದ ಸ್ವಚ್ಛತಾ ಕೆಲಸ ಗುತ್ತಿಗೆ ಪಡೆದ ಆರ್. ಬಾಬು.

ಸಂಜೆ 4ಕ್ಕೆ ಶಿವಮೊಗ್ಗದಿಂದ ಹೊನ್ನಾಳಿಗೆ ಕೊನೆ ಬಸ್. ಹೀಗಾಗಿ ನಾವು ಗೋವಿನಕೋವಿ ಇಳಿದು, ಅಲ್ಲಿಂದ ಪುನಃ ಅರಳಹಳ್ಳಿಗೆ ಆಟೋ ಅಥವಾ ಟ್ಯಾಕ್ಸಿ ಹಿಡಿದು ಹೋಗಬೇಕು. ಹೆಚ್ಚುವರಿ ಬಸ್ ಬಿಟ್ಟರೆ ನಮಗೆ ಅನುಕೂಲ ಎನ್ನುತ್ತಾರೆ ಅರಳಹಳ್ಳಿಯ ಮಮತಾ.ಈ ಸಮಸ್ಯೆಗಳ ಕುರಿತು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ದಿನೇಶ್‌ಕುಮಾರ್ ಅವರನ್ನು `ಪ್ರಜಾವಾಣಿ~ ಮಾತನಾಡಿಸಿದಾಗ, `ಶೌಚಾಲಯಕ್ಕೆ ರೂ2 ನಿಗದಿ ಮಾಡಲಾಗಿದೆ. ಆದರೆ, ಮೂತ್ರವಿಸರ್ಜನೆ ಉಚಿತ. ಹೆಚ್ಚು ವಸೂಲಿ ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಬಂದರೆ ಈ ಬಗ್ಗೆ ಕ್ರಮ ಕೈಗೊಳ್ಳುಲಾಗುತ್ತದೆ~ ಎಂದರು.ಗ್ರಾಮಾಂತರ ಪ್ರದೇಶಗಳಿಗೆ ಸಾಕಷ್ಟು ಬಸ್‌ಗಳಿವೆ. ಹೊನ್ನಾಳಿಗೆ ಬಸ್ ಇಲ್ಲ ನಿಜ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಇನ್ನೊಂದು ವಾರದಲ್ಲಿ ಈ ಮಾರ್ಗದಲ್ಲಿ ಸಂಜೆ 7ಕ್ಕೆ ಒಂದು ಬಸ್ ಬಿಡುವ ವ್ಯವಸ್ಥೆ ಮಾಡಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯದ ಪಕ್ಕದಲ್ಲಿ  ಇರುವುದರಿಂದ ಅದನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ.ಈಗಾಗಲೇ 7,8,9 ಪ್ಲಾಟ್‌ಫಾರಂ ಬಳಿ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮೂತ್ರ ವಿಸರ್ಜನೆ ಉಚಿತ ಎಂಬುದನ್ನು ಧ್ವನಿವರ್ಧಕದ ಮೂಲಕ ಆಗಾಗ ಘೋಷಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಬಸ್‌ನಿಲ್ದಾಣದ ಮೇಲ್ವಿಚಾರಕ ನಾಗರಾಜ್. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.