ಗುರುವಾರ , ನವೆಂಬರ್ 21, 2019
20 °C

ಹೆಸರು ಒಂದೇ ಅಭ್ಯರ್ಥಿಗಳು ಹಲವು!

Published:
Updated:

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಸಕ್ತ ವಿಧಾನಸಭೆ ಚುನಾವಣೆಯು ಕುತೂಹಲಕಾರಿಯಷ್ಟೇ ಅಲ್ಲ, ಸವಾಲಿನ ಕೆಲಸವಾಗಿಯೂ ಮಾರ್ಪಟ್ಟಿದೆ. ಈ ಸವಾಲು ಚುನಾವಣೆ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳಿಗಷ್ಟೇ ಅಲ್ಲ, ಮತದಾರರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಕಣಕ್ಕೆ ಇಳಿದಿರುವುದು.ಬಾಗೇಪಲ್ಲಿಯಲ್ಲಿ ಒಂದೇ ಹೆಸರಿನಲ್ಲಿ ಮೂವರು ಕಣದಲ್ಲಿ ಉಳಿದಿದ್ದರೆ, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲೂ ಸಹ ಕ್ರಮವಾಗಿಇಬ್ಬರು ಮತ್ತು ಮೂವರು ಸ್ಪರ್ಧಿಸಿದ್ದಾರೆ. ಗೌರಿಬಿದನೂರು ಮತ್ತು ಶಿಡ್ಲಘಟ್ಟದಲ್ಲೂ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.`ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಒಂದೇ ಹೆಸರಿನ ವ್ಯಕ್ತಿಗಳು ಸ್ಪರ್ಧಿಸುತ್ತಿರುವುದು ವಿಶೇಷ. ಬೇರೆ ಕ್ಷೇತ್ರಗಳಲ್ಲಿ ಹೆಚ್ಚಿನ ಗೊಂದಲಮಯ ವಾತಾವರಣ ಉಂಟಾಗದಿದ್ದರೂ ಬಾಗೇಪಲ್ಲಿಯಲ್ಲಿ ಮಾತ್ರ ಮತದಾರರಿಗೆ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸಲು ಗೊಂದಲ ಉಂಟಾಗಬಹುದು.ಸುಬ್ಬಾರೆಡ್ಡಿ ಮತ್ತು ಸುಬ್ಬಿರೆಡ್ಡಿ ಎಂಬ ಹೆಸರಿನ ಐವರು ಪಕ್ಷೇತರರು ಆಗಿರುವ ಕಾರಣ ಚಿಹ್ನೆ ಆಧಾರದ ಮೇಲೆ ತಮ್ಮ ಅಭ್ಯರ್ಥಿಗಳನ್ನು ಪತ್ತೆ ಮಾಡಬೇಕು. ಅಭ್ಯರ್ಥಿ ನೋಂದಣಿ ಸಂಖ್ಯೆ, ಹೆಸರು ಮತ್ತು ಚಿಹ್ನೆ ನೋಡಿಕೊಂಡು ಮತದಾರರು ಮತ ಚಲಾಯಿಸಬೇಕು. ಕೆಲ ಮತದಾರರು ಅನಕ್ಷರಸ್ಥರಾಗಿದ್ದರೆ, ಸ್ವಲ್ಪ ಗೊಂದಲಮಯ ಸ್ಥಿತಿ ನಿರ್ಮಾಣವಾಗಬಹುದು' ಎಂದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ತಿಳಿಸಿದರು.

 

ಪ್ರತಿಕ್ರಿಯಿಸಿ (+)