ಮಂಗಳವಾರ, ಮೇ 11, 2021
27 °C

ಹೆಸರು ಗಿಡಕ್ಕೆ ಹಳದಿ ರೋಗ: ಸಾಲದ ಸುಳಿಯಲ್ಲಿ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಕಳೆದ ಮೂರು ನಾಲ್ಕು ವರ್ಷಗಳಿಂದ ಮುಂಗಾರು ಮಳೆ ಸಮರ್ಪಕವಾಗಿ ಬಾರದೆ ಕಂಗಾಲಾಗಿದ್ದ ತಾಲ್ಲೂಕಿನ ರೈತರು ಈ ಬಾರಿ ಮಳೆಯ ಸಿಂಚನದಿಂದ ಖುಷಿಯಾಗಿದ್ದಾರೆ. ಆದರೆ ಹುಲುಸಾಗಿ ಬೆಳೆದಿದ್ದ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ಉತ್ತಮ ಇಳುವರಿ ಬಂದು ಲಾಭ ತರುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಹೆಚ್ಚಾಗಿದೆ.ತಾಲ್ಲೂಕಿನಲ್ಲಿ ವಾಡಿಕೆಯಂತೆ ಪ್ರತಿ ವರ್ಷ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯುತ್ತದೆ. ಆದರೆ ಮುಂಗಾರು ಮಳೆ ಮೇ ತಿಂಗಳ ಮಧ್ಯದಲ್ಲಿ ಆರಂಭವಾಗಿದ್ದರಿಂದ ಕೇವಲ 2975 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹೆಸರು ಬಿತ್ತನೆಯಾಗಿದೆ. ಇತರೆ ಬೆಳೆಗಳಿಗೆ ಹೋಲಿಸಿದರೆ ಹೆಸರು ಬೆಳೆಯಲು ವೆಚ್ಚ ಕಡಿಮೆ, ಲಾಭ ಹೆಚ್ಚು. ಸೋನೆ ಮಳೆ ಉತ್ತಮವಾಗಿ ಸುರಿದಿದ್ದರಿಂದ ಹೆಸರು ಗಿಡ ಉತ್ತಮವಾಗಿ ಚಿಗುರಿತ್ತು. ಆದರೆ ಹೆಸರು ಬೆಳೆಗೆ ಎಲೆ ಜಿಗಿ ಹುಳು, ಸಸ್ಯಹೇನು, ನಂಜುರೋಗ ಹಾಗೂ ಬೂದಿರೋಗ ತಗುಲಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಕುಂಠಿತ: ಹೆಸರು ಬೆಳೆಯನ್ನು ಹೆಚ್ಚು ಕಾಡುವ ನಂಜುರೋಗದಿಂದ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಸರಿಯಾಗಿ ಬೆಳವಣಿಗೆಯಾಗದೆ ಇರುವುದರಿಂದ ಹೂ ಹಾಗೂ ಕಾಳು ಕಟ್ಟುವುದು ಕುಂಠಿತವಾಗುತ್ತದೆ. ಮುಖ್ಯವಾಗಿ ಬಿಳಿ ನೊಣ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹಾರಿ ರೋಗ ಹರಡುತ್ತದೆ. ರೋಗ ಬಾಧಿತ ಗಿಡಗಳನ್ನು ಆರಂಭದ ಹಂತದಲ್ಲಿಯೇ ಗುರುತಿಸಿ ಗಾಳಿಯ ಸಂಪರ್ಕಕ್ಕೆ ಸಿಗದಂತೆ ಮಣ್ಣಿನಲ್ಲಿ ಹೂಳಬೇಕು. ಅಲ್ಲದೆ ಪ್ರತಿ ಲೀಟರ್ ನೀರಿಗೆ ಡೈ ಮಿಥೋಯೇಟ್ ಎರಡು ಮಿಲಿ ಲೀಟರ್ ಅಥವಾ ಮನೋಕ್ರೋಟೋಪಾಸ್ 2 ಮಿಲಿ ಲೀಟರ್ ಬೆರಸಿ ಸಿಂಪಡಿಸುವ ಮೂಲಕ ರೋಗ ಹತೋಟಿಗೆ ತರಬಹುದು. ಮುಂಗಾರು ಮಳೆ ವಿಳಂಬದಿಂದಾಗಿ ರೋಗದ ಲಕ್ಷಣ ಕಂಡು ಬಂದಿದ್ದು, ಹತೋಟಿಗೆ ಕೃಷಿ ಇಲಾಖೆಯಿಂದ ರೈತರು ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಕೃಷಿ ತಾಂತ್ರಿಕ ಅಧಿಕಾರಿ ನಾಗರಾಜ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.