ಹೆಸರು-ವಾಸಿಯಾಗಬೇಕು!

7
ಬೋರ್ಡ್‌ರೂಮಿನ ಸುತ್ತಮುತ್ತ

ಹೆಸರು-ವಾಸಿಯಾಗಬೇಕು!

Published:
Updated:

ಉಸಿರು ಕಟ್ಟುವುದಯ್ಯ ಕೆಲಸದೊತ್ತಡವಿರಲು/

ಹಾಸ್ಯವಿರಲಲ್ಲಲ್ಲಿ, ಅದೆ ಆಮ್ಲಜನಕ//

ಬೇಸರದ ಅನುದಿನದ ನಿತ್ಯ ಕೆಲಸಗಳಲ್ಲಿ/

ಬೆಸೆದಿರಲಿ ತಿಳಿಹಾಸ್ಯ -ನವ್ಯಜೀವಿ//

ಇತ್ತೀಚಿನ ದಿನಗಳಲ್ಲಿ ರಾಜ್ಯದ ಯಾವ ಸಭೆ-ಸಮಾರಂಭಗಳಲ್ಲಿ ಜನ ಸ್ವಯಂಪ್ರೇರಿತರಾಗಿ ಕಾರ್ಯಕ್ರಮದ ವಿಷಯಗಳಲ್ಲಿ ಆಸ್ಥೆ ವಹಿಸಿ ಅತ್ಯಧಿಕ ಸಂಖ್ಯೆಯಲ್ಲಿ ಬಂದು ಜಮಾಯಿಸುತ್ತಾರೆ?ರಾಜಕೀಯ ರಂಗದ ರ‌್ಯಾಲಿ ಎಂದರೆ ತಪ್ಪಾಗುತ್ತದೆ. ಏಕೆಂದರೆ, ಅಲ್ಲಿ ಜನಸಾಗರವಿದ್ದರೂ ಯಾರೂ ಸ್ವಯಂ ಪ್ರೇರಿತರಾಗಿ ಬಂದವರಲ್ಲ.

ಯಾವುದೇ ಸಿನಿಮಾರಂಗದ ಸಭೆ? ಅಲ್ಲಿಗೆ ಸ್ವಂತ ಆಸಕ್ತಿಯಿಂದ ಬಂದರೂ ನಟ-ನಟಿಯರ ಹಳಸಲಾದ ಕುಣಿತವನ್ನು ಕಾಣುವುದೊಂದೇ ಗುರಿ.ಕಾರ್ಯಕ್ರಮದ ಇನ್ನಾವುದೋ ವಿಷಯದಲ್ಲಿಯೂ ಮನಸ್ಸಿರುವುದಿಲ್ಲ. ನಮ್ಮಲ್ಲಿ ಇತ್ತೀಚೆಗೆ ನಾಯಿಕೊಡೆಗಳಂತೆ ಹಬ್ಬುತ್ತಿರುವ ಆಧುನಿಕ ಗುರೂಜಿಗಳ ಬೃಹತ್ ಬಹಿರಂಗ ಸಭೆಗಳು?ಇಲ್ಲಿ ಜನ ಅಗಣಿತ. ಆದರೆ ಅವರೆಲ್ಲ ಯಾವುದೊ ಅವ್ಯಕ್ತ ಭಯಕ್ಕೆ ಪರಿಹಾರವನ್ನರಸಿ ಬಂದವರಷ್ಟೆ.ಇನ್ನು ಕವಿ ಸಮ್ಮೇಳನ, ಪುಸ್ತಕ ಲೋಕಾರ್ಪಣೆ, ಅಷ್ಠಾವದಾನ, ಉಪನ್ಯಾಸಗಳು ಇತ್ಯಾದಿ. ಇಲ್ಲಿ ಸ್ವಯಂ ಪ್ರೇರಣೆಯಿಂದ ಆಸಕ್ತರೇ ಬಂದಿದ್ದರೂ, ಅವರ ಸಂಖ್ಯೆ ಮಾತ್ರ ಕಡಿಮೆ.ಹಾಗಾದರೆ, ನಮ್ಮ ಪ್ರಶ್ನೆಗೆ ಉತ್ತರ?

ಅದು ನಗೆಹಬ್ಬ, ಹಾಸ್ಯೋತ್ಸವ, ಹರಟೆ ಇತ್ಯಾದಿ ಹೆಸರುಗಳಿಂದ ಇತ್ತೀಚೆಗೆ ಜನಜನಿತವಾಗುತ್ತಿರುವ ಒಂದು ಕಾರ್ಯಕ್ರಮ. ನಾಡಿನಾದ್ಯಂತ `ಕನ್ನಡ ಪೂಜಾರಿ' ಎಂದೇ ಪ್ರೀತಿಪಾತ್ರರಾದ ಹಿರೇಮಗಳೂರು ಕಣ್ಣನ್, ನಗೆಗೊಂದು ಸಮಾರಂಭವನ್ನು ಕಲ್ಪಿಸಿಕೊಟ್ಟ ಅಂಕಲ್ ಶ್ಯಾಂ ಅವರ ತಂಡ ಹಾಗೂ ತಿಳಿನಗೆಯ ಕಾರಂಜಿಯನ್ನು ದಶಕಗಳಿಂದ ಸುಸಂಸ್ಕೃತವಾದ ರೀತಿಯಲ್ಲಿ ನೀಡುತ್ತಾ ಬಂದಿರುವ ಅಪರಂಜಿ ತಂಡದ ಹಾಸ್ಯಪ್ರಜ್ಞರು ಇಂತಹ ಕಾರ್ಯಕ್ರಮದ ರೂವಾರಿಗಳು.ನಾವೆಲ್ಲ ಚಿಕ್ಕವರಿದ್ದಾಗ ನಮ್ಮನ್ನು ನಗಿಸಲೆಂದೇ ಬಣ್ಣದ ತೆರೆಯ ಮೇಲೆ ನರಸಿಂಹರಾಜು ಇದ್ದರು. ಜೊತೆಯಲ್ಲಿ ಬಾಲಣ್ಣ, ದ್ವಾರಕೀಶ್, ಉಮೇಶ್, ಡಿಂಗ್ರಿ ನಾಗರಾಜ್ ಮೊದಲಾದವರ ಸಾಲು. ಆದರೆ ಇಂದಿನ ದಿನಗಳಲ್ಲಿ ಹಾಸ್ಯವನ್ನು ಕನ್ನಡ ಚಿತ್ರರಂಗ ಯಾವ ಕೆಳಮಟ್ಟಕ್ಕೆ ತಂದು ನಿಲ್ಲಿಸಿದೆಯೆಂದರೆ ಅದರ ಬಗ್ಗೆ ಮಾತನಾಡುವುದೂ ಅನುಚಿತವೇ ಆದೀತು. ಆಗೆಲ್ಲ ರೇಡಿಯೋದಲ್ಲಿ ಒಂದು ನಿಮಿಷ ಬಂದು ಹೋಗುತ್ತಿದ್ದ ಎ.ಎಸ್.ಮೂರ್ತಿ ಅವರ ಈರಣ್ಣ ಇಡೀ ದಿನ ಮನಸ್ಸಿನಲ್ಲಿ ನಗೆಯಾಡಿಸುತ್ತಿದ್ದರು. ಟಿ.ವಿ ಬಂದ ಹೊಸತರಲ್ಲಿ ಅದೆಷ್ಟು ಶುದ್ಧ ಹಾಗೂ ಮನಸ್ಸನ್ನು ಹಸನಗೊಳಿಸುತ್ತಿದ್ದ ನಗೆಯ ಧಾರಾವಾಹಿಗಳಿದ್ದವು. ಗ್ರಂಥಾಲಯ ಹೊಕ್ಕರೆ ಅಲ್ಲಿ ಟಿ.ಪಿ.ಕೈಲಾಸಂ, ಬ್ಚೀಜಿ, ಟಿ.ಸುನಂದಮ್ಮ, ಚಡಗ ಅವರ ಪುಸ್ತಕಗಳ ರಾಶಿ ರಾಶಿ.ಇವೆಲ್ಲದರ ಜತೆ ಆಗ ಎಲ್ಲರಿಗೂ ಸಾಕಷ್ಟು ಸಮಯವಿತ್ತು. ಹಾಗಾಗಿ ಹಾಸ್ಯ ಮನೆಯ ಅಂಗಳದಲ್ಲೇ ಆಲದ ಮರವಾಗಿತ್ತು. ದೈನಂದಿನ ಮಾತುಕತೆಗಳಲ್ಲೇ ಅದೆಷ್ಟು ಕುಚೋದ್ಯಗಳು, ಆರೋಗ್ಯವಂತ ಹರಟೆಗಳು, ಮುಗ್ಧತೆಯ ಹಾಸ್ಯ ಸುರುಳಿಗಳು ಇರುತ್ತಿತ್ತೆಂದರೆ ಹಾಸ್ಯವನ್ನು ಅರಸಿ ಹೊರಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.ಈಗ ಕಾಲ ಬದಲಾಗಿದೆ. ಹಾಸ್ಯದ ಮೂಲ ಎದೆಯಿಂದ ಜಾರಿ ಕೆಳಕ್ಕೆ ಸಾಗಿದೆ. ಬದಲಾಗುತ್ತಿರುವ ಕಾಲಮಾನದಲ್ಲಿ, ಬದಲಾಗುತ್ತಿರುವ ಜೀವನಶೈಲಿಯಲ್ಲಿ ಇಂದು ಜನರಿಗೆ ಒಂದು ಗಳಿಗೆ ತಮ್ಮ ಕೆಲಸವನ್ನು ಮನಸ್ಸಿನಿಂದ ಹೊರಗಿಟ್ಟು ಮನಸಾರೆ ನಗುವಷ್ಟು ಪುರುಸೊತ್ತಿಲ್ಲ. ಕಚೇರಿಗಳಲ್ಲಿ ಮೀಟಿಂಗುಗಳದೇ ಸಂತೆಯಾದರೆ, ಮನೆ ಹೊಕ್ಕಾಗ ಆ ಮೀಟಿಂಗುಗಳದೇ ಚಿಂತೆ? ಯೋಚಿಸಿ ನೋಡಿ, ನೀವೆಲ್ಲ ಮನೆಯಲ್ಲಿ ಒಟ್ಟಾಗಿ ಊಟಕ್ಕೆ ಕುಳಿತು ಒಂದು ತಾಸಾದರೂ ಮಾತಿನ ನಗೆಗಡಲಿನಲ್ಲಿ ಈಜಿ ಅದೆಷ್ಟು ತಿಂಗಳಾದವು? ನನಗಂತೂ ಆ ಸುಂದರ ಘಟ್ಟವನ್ನು ನೆನೆಯುವುದಕ್ಕೂ ಪುರುಸೊತ್ತು ಇಲ್ಲವಾಗಿದೆ. ಇನ್ನು ಕೈತುತ್ತಿನೂಟದ ಯೋಚನೆಯೂ ಬೇಡ!ಹೀಗಾಗಿ ನಗೆಹಬ್ಬವೆಂದರೆ ಜನ ಮುಗಿಬಿದ್ದು ಬರುತ್ತಾರೆ. ಹನಿ ಚಕ್ರವರ್ತಿ ಡುಂಡಿರಾಜರ ತಿಳಿಹಾಸ್ಯಕ್ಕೆ, ಗಂಗಾವತಿ ಪ್ರಾಣೇಶರ ಭಾಷಾ ಸೊಗಡಿಗೆ, ಕೃಷ್ಣೇಗೌಡರ ಹಾಸ್ಯದ ಬೆಡಗಿಗೆ, ದಯಾನಂದರ ಅರ್ಥಗರ್ಭಿತವಾದ ಮಿಮಿಕ್ರಿ ಅಣಕುವಾಡುಗಳಿಗೆ ಒಂದರೆಗಳಿಗೆ ನಕ್ಕೂ ಹಿಂತಿರುಗುತ್ತಾರೆ. ನಮ್ಮಿಂದ ಮಾಯವಾಗುತ್ತಿರುವ ಗುಬ್ಬಚ್ಚಿಗಳನ್ನೆಲ್ಲ ಅವರ ಮಾತುಗಳಲ್ಲಿ ಹೆಕ್ಕಿ ಹಗುರವಾಗುತ್ತಾರೆ.ನಮ್ಮ ದೈನಂದಿನ ಜೀವನವೇ ಈ ಪರಿಯ ಹಾಸ್ಯದ ಬರದಲ್ಲಿ ಕಂಗಾಲಾಗುತ್ತಿದ್ದರೆ, ನಮ್ಮ ವೃತ್ತಿಜೀವನದ ಕತೆ, ಅದರಲ್ಲೂ ಇಂದಿನ ಕಷ್ಟದ ಪರಿಸರದಲ್ಲಿ ಇನ್ನೂ ಗಂಭೀರವೆಂದೇ ಹೇಳಬಹುದು. ಅಲ್ಲಿ ಹಾಸ್ಯವಿಲ್ಲ ಎಂದಲ್ಲ, ಅಲ್ಲೂ ಹಾಸ್ಯವಿದೆ. ಆದರೆ ಬಹುತೇಕ ಸನ್ನಿವೇಶಗಳಲ್ಲಿ ಅದು ಮತ್ತೊಬ್ಬರನ್ನು ಹಳ್ಳಕ್ಕೆ ದಬ್ಬಿದಾಗ ಅಥವಾ ಅವರೇ ಹಳ್ಳಕ್ಕೆ ಬಿದ್ದಾಗ ಉಂಟಾಗುವ ಆತ್ಮೋದ್ಗಾರದ ಶುಷ್ಕ ನಗೆ; ಮತ್ತೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುವ ಸ್ವಪ್ರತಿಷ್ಠೆಯ ಕುಹಕ ಕೂಗುಗಳು; `ನಾನೆಲ್ಲರಿಗಿಂತ ಜಾಣ' ಎಂದು ಪ್ರತಿಪಾದಿಸುವ ಅಹಂನ ವಿನೋದ ಪ್ರಹಸನಗಳು, ವಿರೋಧಿಗಳ ಸೋಲಿನಲ್ಲಿ ಚಿಗುರೊಡೆವ ತಮಾಷೆಗಳು.ಬೋರ್ಡ್ ರೂಮಿನ ಸುತ್ತಮುತ್ತ ಸರ್ವೇ ಸಾಮಾನ್ಯವಾಗಿರುವ ಒತ್ತಡದ ಹವೆಯನ್ನು ಉಲ್ಲಾಸಗೊಳಿಸಲೆಂದೇ ಯಾರಾದರೂ ಹಾಸ್ಯಕ್ಕಿಳಿದರೆ, ಅಂತಹವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಮ್ಮ ಬಗ್ಗೆ, ತಮ್ಮವರ ಬಗ್ಗೆ ಅಥವಾ ತಮ್ಮ ಕಂಪೆನಿ ಬಗ್ಗೆ ಎಲ್ಲರೆದುರು ಜೋಕು ಮಾಡುವುದು ಯಾಕೊ ಬಹುತೇಕ ನಾಯಕರಿಗೆ ಹಿಡಿಸದು. ಎಲ್ಲಿ ಹಿಡಿತ ತಪ್ಪಿ, ಈ ಪರಿಯ ಹಾಸ್ಯ ಹೆಚ್ಚಿ ನಾಲ್ಕಾರು ತಾಸುಗಳು ಗಂಭೀರವಾಗಿ ನಡೆಯಬೇಕಾದ ಮೀಟಿಂಗುಗಳು ತಾಸೊಂದರಲ್ಲಿ ಪರಿಹಾರ ಕಂಡುಕೊಂಡು ಸಮಾಪ್ತಿಯಾಗಿ ಬಿಡುತ್ತದೋ ಎಂಬ ಸಹಜ ಆತಂಕ ಅವರಿಗೆ!ಸಮಾಜದ ವಿವಿಧ ಸ್ತರದ ಎಲ್ಲ ಜನರನ್ನೂ ಹಾಸ್ಯ ಮಾಡಿ ಗಹಗಹಿಸಿ ಜೋರಾಗಿ ನಗುವ ಕಾರ್ಪೊರೆಟ್ ನಾಯಕರಾರೂ ತಮ್ಮ ಬಗ್ಗೆಯೇ ಯಾರಾದರೂ ಸತ್ಯವನ್ನೇ ಹಾಸ್ಯಮಯವಾಗಿ ತಿಳಿಹೇಳಿದರೂ ಕೆಂಡಕಾರಿ ಬಿಡುತ್ತಾರೆ. ಬೋರ್ಡ್ ರೂಮಿನ ಸುತ್ತಮುತ್ತ ಹಾಸ್ಯವೆಂದಿಗೂ ನಾಯಕನೊಬ್ಬನದೇ ಆಸ್ತಿ!ಆದ್ದರಿಂದ ಹಾಸ್ಯವಿಲ್ಲದೇ ಎಲ್ಲೂ ಬದುಕಲಾರದ ನಮ್ಮಂತಹ ಬಡಪಾಯಿಗಳು ಹಾಸ್ಯವನ್ನು ಹಾಸ್ಯವೆಂದೇ ಪರಿಗಣಿಸುವಷ್ಟು ಹೃದಯವಂತಿಕೆ ಇರುವ ಕೆಲವೇ ಕೆಲವು ಸಹಪಾಠಿಗಳಲ್ಲಿ ರೂಮಿನ ಬಾಗಿಲು ಹಾಕಿಕೊಂಡು `ಗುಸು ಗುಸು' ಎನ್ನುತ್ತ `ಮುಸು ಮುಸು' ನಕ್ಕಿ ಬಿಡುತ್ತೆವೆ. ಸೋಲನ್ನು, ನೋವನ್ನು ಹಾಗೂ ನಮ್ಮ ವೃತ್ತಿಜೀವನದ ಸಿನಿಕತನಗಳನ್ನೆಲ್ಲ ನಗೆಯ ಅಲೆಯಲ್ಲಿ ಮರೆತು ಕಾರ್ಪೊರೆಟ್ ಜಗತ್ತಿನ ಮತ್ತೊಂದು ಸಮರಕ್ಕೆ ಸಜ್ಜಾಗಿ ಬಿಡುತ್ತೇವೆ!

ಬೋರ್ಡ್ ರೂಮಿನ ಸುತ್ತಮುತ್ತಲಿನ ಎಲ್ಲರೂ ಹೀಗೇ ಎಂದಲ್ಲ. ಹಾಸ್ಯವನ್ನು ಹಾಗೂ ಕಾರ್ಯಶ್ರದ್ಧೆಯನ್ನು ಬೆರೆಸದೆ, ಬೇರೆಬೇರೆಯಾಗಿಯೇ ಬಳಸುತ್ತ, ನಗುನಗುತ್ತಲೇ ಬೆವರಿಳಿಸಿ ದುಡಿವ ಅನೇಕರನ್ನು ನಾನು ಬಲ್ಲೆ. ಆದರೆ, ಆಂತಹವರ ಸಂಖ್ಯೆ ಕಡಿಮೆ ಎಂಬುದೇ ಅಂತಹವರಲ್ಲಿ ಒಬ್ಬನಾದ ನನ್ನ ಅಭಿಪ್ರಾಯ.ಬೋರ್ಡ್ ರೂಮಿನ ಸುತ್ತಮುತ್ತಲಿನ ಹಾಸ್ಯವನ್ನು ಯಾವುದಕ್ಕೆ ಹೋಲಿಸಲಿ ಎಂಬುದನ್ನು ಯೋಚಿಸುತ್ತಿರುವಾಗಲೇ ಕನ್ನಡ ಟಿ.ವಿ. ಚ್ಯಾನೆಲ್ ಒಂದರಲ್ಲಿ `ಕುರಿ ಬಾಂಡ್' ಕಾರ್ಯಕ್ರಮ ಬರುತ್ತಿತ್ತು. ಇದು ಹಿಂದೆ ಬರುತ್ತಿದ್ದ `ಕುರಿ' ಎಂಬ ಕಾರ್ಯಕ್ರಮದ ಮರು ಅವತಾರ ಎನಿಸುತ್ತದೆ. ರಸ್ತೆಯಲ್ಲಿ ಹೋಗುತ್ತಿರುವ ಅಮಾಯಕನೊಬ್ಬನನ್ನು ಹಿಡಿದು, ಅವನನ್ನು ಅಟ್ಟಿಸಿಕೊಂಡು ಹೋಗಿ, ಅವನನ್ನು ಹೆದರಿಸಿ, ಬೆದರಿಸಿ, ಜಗ್ಗಾಡಿ ಕಡೆಯಲ್ಲಿ ಅವನನ್ನು `ಕುರಿ' ಮಾಡಿಬಿಟ್ಟೆವೆಂದು ಬೀಗುವ ನಯನಾಜೂಕಿಲ್ಲದ ಅತ್ಯಂತ ಒರಟಾದ ಪರಪೀಡನಾ ಸನ್ನಿವೇಶಗಳು. ಯಾಕೋ ಮಾಡಿದ್ದು ಅತಿಯಾಯಿತು ಎಂದೆನ್ನಿಸಿಯೋ ಏನೋ ಕುರಿಯಾದವನಿಗೆ ಕಡೆಯಲ್ಲಿ ಬಹುಮಾನಗಳು ಬೇರೆ.ತಮ್ಮ ಈ ಹುಚ್ಚುತನಕ್ಕೆ ಸಮಾಜ ಏನೆಂದಿತು ಎಂಬ ಪಾಪಪ್ರಜ್ಞೆಯಿಂದಲೋ ಏನೋ, ಕಡೆಯಲ್ಲಿ ತಾವು ಎಸಗಿರುವ ಈ ಕೆಟ್ಟ ಸಾಹಸವನ್ನು ಸಮರ್ಥಿಸಿಕೊಳ್ಳುತ್ತ, ಅದನ್ನೊಂದು ಕಾನ್‌ಸೆಪ್ಟಿಗಾಗಿ ಅಥವಾ ಸಮಾಜಕ್ಕೆ ಯಾವುದೋ ಒಂದು ಪಾಠವನ್ನು ಹೇಳಿಕೊಡುವುದಕ್ಕಾಗಿಯೇ ಮಾಡಿದ್ದೇವೆಂಬ ಸಾಂತ್ವನದ ಅತಿರೇಕಗಳು. ಬೋರ್ಡ್ ರೂಮಿನ ಸುತ್ತಮುತ್ತಲಿನ ಹಾಸ್ಯ ಸನ್ನಿವೇಶಗಳು ಕುರಿಗಳಂತಹ ಸಂಪೂರ್ಣ ಅರ್ಥರಹಿತವಾದ ಸನ್ನಿವೇಶಗಳನ್ನು ನೇರವಾಗಿ ಹೋಲದಿದ್ದರೂ, ಎಲ್ಲೋ ಇವೆರಡರ ಉದ್ದೇಶಗಳಲ್ಲಿ, ಬಳಕೆಯ ತಂತ್ರಗಳಲ್ಲಿ ಹಾಗೂ ಕಡೆಯ ನಿರ್ಣಾಯಕ ರೂಪಕಗಳಲ್ಲಿ ಸಾಮ್ಯವಿದೆ ಎಂದೇ ನನಗನ್ನಿಸುತ್ತದೆ. ಅಥವಾ ಭಾರತೀಯರ ಹಾಸ್ಯಪ್ರಜ್ಞೆಯೇ ಮತ್ತೊಬ್ಬನನ್ನು ಕುರಿ ಮಾಡಿ ನಗುವಷ್ಟರ ಮಟ್ಟಿಗೆ ಇಳಿಮುಖವಾಗಿರಬಹುದು.ಅಮೆರಿಕದ ಕಂಪೆನಿಗಳಲ್ಲಿ ನಾನು ಹಾಸ್ಯದ ಉತ್ಕೃಷ್ಟವಾದ ಸನ್ನಿವೇಶಗಳನ್ನು ಕಂಡಿದ್ದೇನೆ. ಹಾಸ್ಯವನ್ನು ಹಾಸ್ಯವಾಗಷ್ಟೇ ಪರಿಗಣಿಸುವ ಮಂದಿ ಅವರು ಎಂದರೆ ತಪ್ಪಾಗಲಾರದು. ನಾಯಕನಾಗಲೀ ಜವಾನನಾಗಲೀ ಎಲ್ಲರೂ ಸಮಯ ಸ್ಫೂರ್ತಿ ಇದ್ದಲ್ಲಿ ಹಾಸ್ಯದ ಚಟಾಕಿಗಳನ್ನು ಎಲ್ಲರೆದುರು ಮೂಡಿಸುತ್ತಾರೆ.ಆ ಹಾಸ್ಯದಲ್ಲಿ ಹಾಸ್ಯವಿದ್ದರೆ ಎಲ್ಲರೂ ಒಟ್ಟಾಗಿ ನಗುತ್ತಾರೆ. ಅಲ್ಲಿಗೆ ಅದನ್ನು ಮರೆತು ಕೆಲಸದಲ್ಲಿ ಮುಂದುವರೆಯುತ್ತಾರೆ. ಇದೊಂದು ವಿಷಯದಲ್ಲಿ ಖಂಡಿತವಾಗಿಯೂ ಅವರು ನಮಗಿಂತ ಮೇಲಿದ್ದಾರೆ. ನಮ್ಮ `ಕುರಿ' ಕಾರ್ಯಕ್ರಮಕ್ಕೂ ಹಾಗೂ ಅದೇ ಮಾರ್ಗದಲ್ಲಿ ಬಿತ್ತರಗೊಳ್ಳುವ `ಜಸ್ಟ್ ಫಾರ್ ಗ್ಯಾಗ್ಸ್' ಎಂಬ ಆಂಗ್ಲ ಚ್ಯಾನೆಲ್‌ನ ಕಾರ್ಯಕ್ರಮವನ್ನು ತಾಳೆಹಾಕಿ ನೋಡಿದಾಗ, ನನ್ನ ಈ ಮಾತನ್ನು ಬಹುತೇಕ ಮಂದಿ ಒಪ್ಪುತ್ತಾರೆಂದು ನನ್ನ ನಂಬಿಕೆ!ಹಾಗಾದರೆ ಬೋರ್ಡ್ ರೂಮಿನ ಸುತ್ತಮುತ್ತ ಹಾಸ್ಯ ಹೇಗಿರಬೇಕು? ಇದನ್ನು ಯಾವುದಕ್ಕೆ ಹೋಲಿಸಲಿ ಎಂಬುದನ್ನು ಯೋಚಿಸುವಾಗಲೇ ಮೇಜಿನ ಮೇಲಿರುವ ನಮ್ಮೆಲ್ಲರ ನೆಚ್ಚಿನ ಕನ್ನಡ ವಾರಪತ್ರಿಕೆ `ಸುಧಾ' ಕಣ್ಣಿಗೆ ಬಿತ್ತು. ಅದರಲ್ಲಿನ `ನೀವು ಕೇಳಿದಿರಿ?' ಎಂಬ ಪ್ರಶ್ನೋತ್ತರಗಳ ಪುಟ ದಶಕಗಳಿಂದ ನನ್ನ ಅಚ್ಚುಮೆಚ್ಚು. ಓದುಗರ ಪ್ರಶ್ನೆಗಳಿಗೆ ಉತ್ತರಭೂಪನಾಗಿ ಬೀ.್ಚಜಿ ಅವರಿಂದ ಶುರುವಾದ ಹಾಸ್ಯೋತ್ತರಗಳನ್ನು ಅ.ರಾ.ಮಿತ್ರ, ನವರತ್ನರಾಂ, ಅ.ರಾ.ಸೇತುರಾಮ್ ಹಾಗೂ ಎಂ.ಎಸ್‌ನರಸಿಂಹಮೂರ್ತಿ ಅವರು ಸಮೃದ್ಧವಾಗಿ ನಡೆಸಿಕೊಟ್ಟಿದ್ದಾರೆ. ಈಗ ಕೆಲ ವರ್ಷಗಳಿಂದ `ರಾಮ್' ಎಂಬ ನಾಮಾಂಕಿತರ ಲೇಖನಿಯಿಂದ ಅರ್ಥಗರ್ಭಿತವಾದ ಹಾಸ್ಯ ಹೊರಸೂಸುತ್ತಿದೆ.ಕೈಯೊಳಗಿದ್ದ ಪತ್ರಿಕೆಯಲ್ಲಿ ಓದುಗರೊಬ್ಬರ ಚುಟುಕಾದ ಪ್ರಶ್ನೆ ಹೀಗಿತ್ತು -`ಹೆಸರಿನಲ್ಲೇನಿದೆ?' ಅದಕ್ಕೆ ರಾಮ್ ಅವರ ಉತ್ತರ -`ಏನೇನೂ ಇಲ್ಲ. ವಾಸ್ತವವಾಗಿ ಹೆಸರು ಒಂದು ರೋಗ. ಅದು ವಾಸಿಯಾದಾಗಲೇ ಜನ ಹೆಸರುವಾಸಿಯಾಗುವುದು!'  ಇದರಲ್ಲಿ ಏನ್ ಇದೆ. ತಿಳಿಹಾಸ್ಯವಿದೆ. ಮನುಷ್ಯನ ಚಿಂತನೆಗೊಡ್ಡುವ ಅರ್ಥವಿದೆ. ಯಾರನ್ನೂ ನೋಯಿಸದ, ಹಿಂಸಿಸದ ಸುಸಂಸ್ಕೃತಿ ಇದೆ. ಹಾಸ್ಯಕ್ಕೆ ಇವೇ ಮುಖ್ಯ.ಬೋರ್ಡ್ ರೂಮಿನ ಸುತ್ತಮುತ್ತಲೂ ಹಾಸ್ಯದ ಅವತರಣವಾಗಬೇಕಿದ್ದರೆ ಮೊದಲು ಅಲ್ಲಿನ ನಾಯಕರ `ಹೆಸರಿನ ರೋಗ' ವಾಸಿಯಾಗಬೇಕು. ಏನಂತೀರಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry