ಹೆಸ್ಕಾಂಗೇ ಶಾಕ್ ನೀಡಿದ ಹಾವು!

ಭಾನುವಾರ, ಮೇ 26, 2019
25 °C

ಹೆಸ್ಕಾಂಗೇ ಶಾಕ್ ನೀಡಿದ ಹಾವು!

Published:
Updated:

ಹುಬ್ಬಳ್ಳಿ: ಹೇಗೂ ಸ್ವಾತಂತ್ರ್ಯ ದಿನ. ಎಲ್ಲಿಗೆ ಬೇಕಾದರೂ ನುಗ್ಗಬಹುದು ಎಂದು ಅಂದುಕೊಂಡಿತೇನೋ ಈ ಹಾವು. ಪ್ರಯೋಗ ಮಾಡಲು ಆಯ್ದುಕೊಂಡದ್ದು ಮಾತ್ರ ಹೆಸ್ಕಾಂನ ಸಬ್ ಸ್ಟೇಷನ್. ಇದರ ಪರಿಣಾಮ ವಿದ್ಯಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳು ಬುಧವಾರ ಸಂಜೆ ಕತ್ತಲೆಯಲ್ಲಿ ಮುಳುಗಿದವು. ಹೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ತುರ್ತು ಕಾಮಗಾರಿಯಿಂದಾಗಿ ಮೂರು ತಾಸಿನ ನಂತರ ಸಮಸ್ಯೆ ಪರಿಹಾರ ಕಂಡಿತು.ನಗರದ ಅಕ್ಷಯ ಕಾಲೊನಿಯಲ್ಲಿರುವ 110 ಕೆ.ವಿ. ಸಬ್ ಸ್ಟೇಷನ್‌ಗೆ ನುಗ್ಗಿದ ಹಾವು ಬ್ರೇಕರ್ (ವಿದ್ಯುತ್ ಸ್ವೀಕಾರ-ಸರಬರಾಜು ನಿಯಂತ್ರಕ ಘಟಕ) ಒಳಗೆ ನುಸುಳಿದೆ. ತಕ್ಷಣ 11 ಸಾವಿರ ವೋಲ್ಟ್‌ನ ಈ ಉಪಕರಣದ `ರುಚಿ~ ಸಿಕ್ಕಿದೆ. ಒಳಗೆ ಹೋದಷ್ಟು ಭಾಗ ಸುಟ್ಟು ಕರಕಲಾಗಿದೆ. ಬ್ರೇಕರ್ ಕೂಡ ಸುಟ್ಟು ಹೋದ ಕಾರಣ ಈ ಭಾಗದ ಪ್ರದೇಶಗಳಿಗೆ ಕತ್ತಲೆ ಆವರಿಸಿದೆ.ಅಚಾನಕ್ ವಿದ್ಯುತ್ `ಕೈಕೊಟ್ಟ~ದ್ದರಿಂದ ಗಾಬರಿಗೊಂಡ ಹೆಸ್ಕಾಂ ಅಧಿಕಾರಿಗಳು ಕಾರಣ ಹುಡುಕಿದಾಗ ಹಾವಿನ ಕರಾಮತ್ತು ತಿಳಿದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಕೆಪಿಟಿಸಿಎಲ್‌ನ 8 ಮಂದಿ ನೋಡಲ್ ಅಧಿಕಾರಿಗಳ ಸಮೇತ ತೆರಳಿ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ. ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿ ಯರ್ ಎಸ್.ಬಿ. ಪಾಟೀಲ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಹೂಗಾರ ಅವರ ನೇತೃತ್ವದಲ್ಲಿ ನಡೆದ ದುರಸ್ತಿ ಕಾರ್ಯ ಮೂರು ತಾಸಿಗೂ ಹೆಚ್ಚು ಕಾಲ ಮುಂದುವರಿಯಿತು.ಈ ನಡುವೆ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ನವನಗರ, ತಾರಿಹಾಳ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿರುವ ಸಬ್ ಸ್ಟೇಷನ್‌ಗಳಿಂದ ಸಂಪರ್ಕ ಕಲ್ಪಿಸಿ ಕೆಲವು ಪ್ರದೇಶಗಳಿಗೆ ವಿದ್ಯುತ್ ಒದಗಿಸಲಾಯಿತು.`ವಿದ್ಯಾನಗರ, ಗಾಂಧಿ ನಗರ, ರೇಣುಕಾ ನಗರ, ಕೈಗಾರಿಕಾ ಪ್ರದೇಶ (ಭಾಗಶಃ), ಅಕ್ಷಯ ಕಾಲೊನಿ, ವಿನಾಯಕ ಕಾಲೊನಿ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಿತ್ತು. 9.20ರ ವೇಳೆ ಎಲ್ಲ ಕಡೆಗೆ ಸಂಪರ್ಕ ಕಲ್ಪಸಲು ಸಾಧ್ಯವಾಯಿತು~ ಎಂದು ಉಮೇಶ ಹೂಗಾರ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry