ಹೆಸ್ಕಾಂ ಕಚೇರಿಗೆ ಬೀಗ: ಪ್ರತಿಭಟನೆ

7

ಹೆಸ್ಕಾಂ ಕಚೇರಿಗೆ ಬೀಗ: ಪ್ರತಿಭಟನೆ

Published:
Updated:

ಹಿರೇಕೆರೂರ:  ತಾಲ್ಲೂಕಿನಲ್ಲಿ ಅಕ್ರಮ-ಸಕ್ರಮ ಯೋಜನೆಯ ಅಡಿಯಲ್ಲಿ ರೈತರ ಕೊಳವೆ ಬಾವಿಗಳಿಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ಬುಧವಾರ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ. ಕೆಂಚಳ್ಳೇರ ಮಾತನಾಡಿ, ತಾಲ್ಲೂಕಿನಲ್ಲಿ 420 ರೈತರಿಗೆ ಅಕ್ರಮ-ಸಕ್ರಮ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಟ್ರಾನ್ಸ್‌ಫಾರ್ಮರ್, ಕಂಬ ಹಾಗೂ ವೈರ್‌ಗಳನ್ನು ಪೂರೈಸಲು 1.85 ಕೋಟಿ ರೂಪಾಯಿ ಮಂಜೂರಾಗಿ 6 ತಿಂಗಳಾಗಿದೆ. ಆದರೂ ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿಲ್ಲ. ಪ್ರತಿನಿತ್ಯ ಒಂದೊಂದು ಕಾರಣ ಹೇಳುತ್ತಾ ಅಧಿಕಾರಿಗಳು ಕಾಲ ತಳ್ಳುತ್ತಿದ್ದಾರೆ. ಆದ್ದರಿಂದ ಕಾಮಗಾರಿ ಆರಂಭಿಸುವವರೆಗೆ ಕಚೇರಿಗೆ ಬೀಗ ಹಾಕುತ್ತೇವೆ ಎಂದು ತಿಳಿಸಿದರು.ಕೆಲಸ ಆರಂಭಿಸಲು ಖಾಸಗಿಯವರಿಗೆ ಟೆಂಡರ್ ನೀಡಲಾಗಿದ್ದು, ಅವರಿಂದ ಸೂಕ್ತ ಮಾಮೂಲು ಬರದೇ ಇದ್ದ ಕಾರಣ ಕೆಲಸವನ್ನು ಆರಂಭಿಸುತ್ತಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ದೂರಿದರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪಳವರ, ಸಂಘದ ಮುಖಂಡರಾದ ಸೋಮಣ್ಣ ಚಪ್ಪರದಹಳ್ಳಿ, ಹೂವನಗೌಡ ಮಳವಳ್ಳಿ, ಗಂಗನಗೌಡ ಮುದಿಗೌಡ್ರ, ಸಿದ್ದನಗೌಡ ಮಳವಳ್ಳಿ, ಮಲ್ಲನಗೌಡ ಮಾಳಗಿ, ಶಂಕ್ರಗೌಡ ಮಕ್ಕಳ್ಳಿ, ನಾಗರಾಜ ನೀರಲಗಿ, ಎಂ.ಎಚ್. ಪಾಟೀಲ, ನಂದೆಪ್ಪ ಜೋಗಿಹಳ್ಳಿ, ನಾಗರಾಜ ಪ್ಯಾಟಿ, ಮರಿಗೌಡ ಪಾಟೀಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry