ಹೆಸ್ಕಾಂ ಗ್ರಾಹಕ ಸೇವಾ ಕೇಂದ್ರ ಉದ್ಘಾಟನೆ

7
1800-425-1033 ಸಂಖ್ಯೆಗೆ ಉಚಿತ ಕರೆ ಮಾಡಿ

ಹೆಸ್ಕಾಂ ಗ್ರಾಹಕ ಸೇವಾ ಕೇಂದ್ರ ಉದ್ಘಾಟನೆ

Published:
Updated:

ಹುಬ್ಬಳ್ಳಿ: `ಗ್ರಾಹಕರ ಸೇವಾ ಕೇಂದ್ರಗಳನ್ನು ರಾಜ್ಯದ ಎಲ್ಲ ವಿದ್ಯುತ್ ಕಂಪೆನಿಗಳಿಗೆ ವಿಸ್ತರಿಸುವ ಯೋಜನೆಯಿದೆ' ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ನವನಗರದಲ್ಲಿಯ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ 24/7 ಗ್ರಾಹಕರ ಸೇವಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. `ವಿದ್ಯುತ್‌ಗೆ ಸಂಬಂಧಿಸಿ ಗ್ರಾಹಕರ ದೂರು ಹಾಗೂ ಪರಿಹಾರಕ್ಕಾಗಿ ಈಗಾಗಲೇ ಬೆಸ್ಕಾಂನಲ್ಲಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 50 ದೂರವಾಣಿ ಹಾಗೂ ಬೆಂಗಳೂರಲ್ಲಿ 50 ದೂರವಾಣಿಯ ಎರಡು ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.ಇದೇ ರೀತಿ ನವನಗರದ್ಲ್ಲಲಿ 11 ಸಿಬ್ಬಂದಿ ಒಳಗೊಂಡ ಸೇವಾ ಕೇಂದ್ರ ಕಾರ್ಯ ನಿರ್ವಹಿಸಲಿದೆ. ದೂರು ಬಂದ ಕೂಡಲೇ ನಿರಂತರ ಸೇವಾ ವಾಹನ ಆಯಾ ಸ್ಥಳಗಳಿಗೆ ತೆರಳಿ ದುರಸ್ತಿ ಕಾರ್ಯ ಕೈಗೊಳ್ಳಲಿದೆ. ವಾಹನದಲ್ಲಿ ಅಧಿಕಾರಿಯನ್ನು ಒಳಗೊಂಡ ಆರೇಳು ಲೈನ್‌ಮನ್‌ಗಳು ಇರುತ್ತಾರೆ. ಹುಬ್ಬಳ್ಳಿ, ಧಾರವಾಡದಲ್ಲಿ ತಲಾ ಒಂದು ವಾಹನ ಇರುತ್ತದೆ. ಇದರಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ' ಎಂದರು.`ಯಾವುದೇ ದೂರಿದ್ದರೂ 1800-425-1033 ದೂರವಾಣಿ ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದು. ಈ ದೂರವಾಣಿ ಸಂಖ್ಯೆಗೆ ಗ್ರಾಹಕರು ಸಂಪರ್ಕಿಸಿದಾಗ ಕೂಡಲೇ ದೂರನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ಗ್ರಾಹಕರ ಮೊಬೈಲ್ ಸಂಖ್ಯೆ ಇದ್ದರೆ ಎಸ್‌ಎಂಎಸ್ ಮೂಲಕ ದೂರಿನ ನೋಂದಣಿ ಸಂಖ್ಯೆಯನ್ನು ತಿಳಿಸಲಾಗುತ್ತದೆ. ನಂತರ ದೂರಿನ ವಿವರಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಲಾಗುತ್ತದೆ. ಆಗ ನಿರಂತರ ಸೇವಾ ವಾಹನ ತೆರಳಿ ಕಾರ್ಯ ನಿರ್ವಹಿಸುತ್ತದೆ' ಎಂದು ಹೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.`ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಸಂಬಂಧಿಸಿ ದೂರು ಇದ್ದರೆ 2-3 ದಿನಗಳು ಬೇಕಾಗುತ್ತವೆ. ಆದರೆ ಲೈನ್ ದುರಸ್ತಿ, ವಿದ್ಯುತ್ ಅಡಚಣೆಯಂಥ ಸಮಸ್ಯೆಗಳಿಗೆ ಕೂಡಲೇ ನಮ್ಮ ಸಿಬ್ಬಂದಿ ಸ್ಪಂದಿಸುತ್ತದೆ. ಸಮಸ್ಯೆ ಬಗೆಹರಿದ ಮೇಲೆ ದೂರು ಕೊಟ್ಟ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ' ಎಂದರು.ನವೀಕರಿಸಬಹುದಾದ ಇಂಧನ  ಇಲಾಖೆ ನೆರವಿನಿಂದ ರೂ 38.59 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 30  ಕಿ.ವ್ಯಾ. ಉತ್ಪಾದಿಸುವ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಇದೇ ಸಂದರ್ಭದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry